Advertisement

ಆನ್‌ಲೈನ್‌ ಶಿಕ್ಷಣ; ಮಕ್ಕಳ ನೈಜ ಕಲಿಕೆಗೆ ಹಿನ್ನಡೆ

02:44 PM Sep 05, 2020 | Suhan S |

ಮಂಡ್ಯ: ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ “ವಿದ್ಯಾಗಮ’ ಎಂಬ ಯೋಜನೆ ಜಾರಿಗೆ ತಂದಿದ್ದು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಶಿಕ್ಷಕರು ಇನ್ನಿಲ್ಲದ ಹರ ಸಾಹಸಪಡುತ್ತಿದ್ದಾರೆ.

Advertisement

ಮಕ್ಕಳಿರುವ ಕಡೆಗೆ ಹೋಗಿ ಶಿಕ್ಷಣ ನೀಡಲು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಹೋದರೂ ಪೂರ್ಣ ಪ್ರಮಾಣದಲ್ಲಿ ಮಕ್ಕಳನ್ನು ಒಂದೆಡೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಪೋಷಕರು ಸ್ಪಂದಿಸಿದರೆ, ಇನ್ನೂ ಕೆಲವು ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ನೈಜತೆ ಇಲ್ಲದ ವಿದ್ಯಾಗಮ: ಶಿಕ್ಷಕರು ವಿದ್ಯಾರ್ಥಿಗಳಿರುವ ಕಡೆಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಆದರೆ, ಶಾಲಾ ಕೊಠಡಿಗಳಲ್ಲಿ ಸಿಗುವ ನೈಜ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಮರಗಳ ಕೆಳಗೆ, ದೇವಸ್ಥಾನ ಆವರಣ, ಮನೆ ಪಡಶಾಲೆಗಳಲ್ಲಿ ಕಲಿಸಲು ಆಗುತ್ತಿಲ್ಲ. ಸಾರ್ವಜನಿಕರ ಓಡಾಟ, ವಾಹನಗಳ ಶಬ್ಧ ವಿವಿಧ ರೀತಿಯ ಗಲಾಟೆಗಳಿಂದ ಮಕ್ಕಳ ಗಮನ ಸೆಳೆದು ಪಾಠ ಮಾಡಲು ಸಾಧ್ಯವಿಲ್ಲ. ಬರೀ ಹೋಂ ವರ್ಕ್‌ಗಳಿಗೆ ಸೀಮಿತವಾಗಿದೆ.

ಪೋಷಕರ ಹಿಂದೇಟು: ನಗರ-ಗ್ರಾಮೀಣ ಪ್ರದೇಶಗಳಲ್ಲಿ ಒಂದು ಶಾಲೆಗೆ ವಿವಿಧ ಹಳ್ಳಿಗಳಿಂದ ಹಾಗೂ ನಗರದ ಶಾಲೆಗಳಿಗೆ ದೂರದ ಬಡಾವಣೆ, ಪ್ರದೇಶಗಳಿಂದ ಆಗಮಿಸುತ್ತಾರೆ. ಎಲ್ಲಾ ವಿದ್ಯಾರ್ಥಿ ಗಳನ್ನು ಒಂದೆಡೆ ಸೇರಿಸಲು ಅಸಾಧ್ಯವಾಗಿದೆ. ಗ್ರಾಮೀಣ ಭಾಗದಲ್ಲಂತೂ ವೈಯಕ್ತಿಕ ಕಾರಣಗಳಿಗೆ ಬೇರೊಬ್ಬರ ಮನೆಯ ಪಡಶಾಲೆಗೆ ಮಕ್ಕಳನ್ನು ಕಳುಹಿಸುತ್ತಿಲ್ಲ. ದೇವಸ್ಥಾನ ಗಳ ಆವರಣಗಳಿಗೆ ಕೆಳವರ್ಗದ ಮಕ್ಕಳನ್ನು ಸೇರಿಸಲು ಮೇಲ್ವರ್ಗದ ಜನ ಅಡ್ಡಿಪಡಿಸುತ್ತಾರೆ. ಇದರಿಂದ ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ. ಇನ್ನು ಸಾಮಾಜಿಕ ಅಂತರ ಅಸಾಧ್ಯವಾಗಿದೆ.

ಆನ್‌ಲೈನ್‌ ತರಗತಿಗೆ ಹಿನ್ನೆಡೆ: ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಮಾಡುತ್ತಿವೆ. ಆದರೆ, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಮಕ್ಕಳ ಬಳಿ ಮೊಬೈಲ್‌ಗ‌ಳಿಲ್ಲ. ಕೇವಲ ಅಂಡ್ರಾಯ್ಡ ಮೊಬೈಲ್‌ ಇರುವ ಮಕ್ಕಳಿಗೆ ಆನ್‌ಲೈನ್‌ ತರಗತಿ ಮಾಡಲಾಗುತ್ತಿದೆ. ಆದರೆ ಇದು ಸಹ ಪರಿಪೂರ್ಣವಾಗಿ ತಲುಪುತ್ತಿಲ್ಲ. ಅಲ್ಲದೆ, ಕೈಗೆ ಮೊಬೈಲ್‌ ಕೊಟ್ಟರೆ ತರಗತಿ ವಿಡಿಯೋ ನೋಡುವ ಬದಲು ಗೇಮ್‌, ಯುಟ್ಯೂಬ್‌ನಂತಹ ವಿಡಿಯೋಗಳಲ್ಲಿ ಮಗ್ನರಾಗುತ್ತಾರೆ ಎಂಬ ದೂರು ಪೋಷಕರಿಂದ ಬರುತ್ತಿವೆ.

Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತೊಂದರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗಣಿತ, ವಿಜ್ಞಾನ ವಿಷಯಗಳನ್ನು ಬೋರ್ಡ್‌ನಲ್ಲಿ ಬರೆದು ಅರ್ಥ ಮಾಡಿಸಬೇಕಾಗಿದೆ. ಇದು ವಿದ್ಯಾಗಮ ಯೋಜನೆಯಿಂದ ಆಗುತ್ತಿಲ್ಲ. ಇದರಿಂದ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು  ಹೆಸರೇಳಲಿಚ್ಛಿಸದ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರು ಅಸಹಾಯಕತೆ ಹೊರ ಹಾಕಿದರು.

ದಾಖಲಾತಿ ಕುಸಿತ: ಕೋವಿಡ್ ಭೀತಿಯಿಂದ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಕುಸಿತ ಕಂಡಿದೆ. ಹೊಸದಾಗಿ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಿಲ್ಲ. ಇದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮೇಲೂ ಪರಿಣಾಮ ಬೀರಿದೆ. ಇನ್ನು ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರು ವುದು ಖಾಸಗಿ ಶಾಲೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಶಿಕ್ಷಕರ ಮೇಲೆ ಇಲಾಖೆ ಒತ್ತಡ: ಸರ್ಕಾರ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಶಿಕ್ಷಣ ಇಲಾಖೆ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದೆ. ಪ್ರಸ್ತುತ ನಡೆಯಬೇಕಾಗಿರುವ ಕಿರು ಪರೀಕ್ಷೆ ಹಾಗೂ ವಿಷಯ ಪರೀಕ್ಷೆ ನಡೆಸಲೇಬೇಕು ಎಂದು ಸೂಚಿಸಿದೆ. ಮಕ್ಕಳಿಗೆ ನೈಜ ಪಾಠ ಸಿಗದೆ ಪರೀಕ್ಷೆ ನಡೆಸಿದರೆ ಮಕ್ಕಳಿಗೆ ಏನೂ ಅರ್ಥವಾಗುವುದಿಲ್ಲ. ಹೀಗಾಗಿ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಅನುದಾನ ರಹಿತ ಶಿಕ್ಷಕರ ಸ್ಥಿತಿ ಶೋಚನೀಯ: ಅನುದಾನರಹಿತ ಶಾಲೆಗಳ ಶಿಕ್ಷಕರ ಸ್ಥಿತಿ ಶೋಚನೀಯವಾಗಿದೆ. ಕಳೆದ ನಾಲ್ಕೆçದು ತಿಂಗಳಿನಿಂದ ವೇತನವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಆಡಳಿತ ಮಂಡಳಿ ಗಳಿಗೂ ಹೊರತಾಗಿಲ್ಲ. ಈ  ಎಲ್ಲ ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಸೆ.5ರಂದು ಎಲ್ಲ ಅನುದಾನರಹಿತ ಶಾಲೆಗಳ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಶಾಲೆಗಳಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸುಜಾತಕೃಷ್ಣ ಹೇಳಿದರು.

ಸರ್ಕಾರ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆ ಅವೈಜ್ಞಾನಿಕ. ಕೊರೊನಾಗೆ ಈಗಾಗಲೇ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. ಕೂಡಲೇ ಸರ್ಕಾರ ಶಿಕ್ಷಕರನ್ನು ಕೊರೊನಾ ವಿಮಾ ವ್ಯಾಪ್ತಿಗೆ ಒಳಪಡಿಸಬೇಕು.  ಎಂ.ಇ.ಶಿವಣ್ಣ ಮಂಗಲ, ಪ್ರಧಾನ ಕಾರ್ಯದರ್ಶಿ, ಮಂಡ್ಯ ಜಿಲ್ಲಾ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ

ಕಳೆದ ಮಾರ್ಚ್‌ನಿಂದ ವೇತನ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳು ಬಾಕಿ ಶುಲ್ಕ ಕಟ್ಟುತ್ತಿಲ್ಲ. ದಾಖಲಾತಿ ನಡೆಯುತ್ತಿಲ್ಲ ಎಂದು ಆಡಳಿತ ಮಂಡಳಿಗಳು ನಮಗೆ ಇನ್ನೂ ವೇತನ ನೀಡಿಲ್ಲ.   ಉಮಾಶಂಕರ್‌, ಅನುದಾನ ರಹಿತ ಶಾಲಾ ಶಿಕ್ಷಕ.

 ವಾರದಲ್ಲಿ ಎರಡು ದಿನ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಮಾಡಲಾಗುತ್ತಿದೆ. ಇದು ಕೇವಲ ಹೋಂ ವರ್ಕ್‌ಗಳಿಗೆ ಮಾತ್ರ ಸೀಮಿತವಾಗಿದೆ. ಒಂದು ದಿನ ಬರುವ ವಿದ್ಯಾರ್ಥಿ ಮತ್ತೂಂದು ದಿನ ಬರುವುದಿಲ್ಲ. ಮಕ್ಕಳನ್ನು ಪಾಠದ ಕಡೆಗೆ ಕರೆತರುವುದು ಅಸಾಧ್ಯವಾಗಿದೆ.   ಸಂಧ್ಯಾ, ಅನುದಾನ ಖಾಸಗಿ ಶಾಲೆಯ ಶಿಕ್ಷಕಿ.

Advertisement

Udayavani is now on Telegram. Click here to join our channel and stay updated with the latest news.

Next