Advertisement

ಆನ್‌ಲೈನ್‌ ತರಗತಿ ಬಲು ದುಬಾರಿ

05:42 AM May 22, 2020 | Lakshmi GovindaRaj |

ಬೆಂಗಳೂರು: ಎಲ್ಲೆಡೆ ಈಗ ಆನ್‌ಲೈನ್‌ “ಟ್ರೆಂಡ್‌’  ಶುರುವಾಗಿದೆ. ಅಧಿಕಾರಿಗಳ ಸಭೆ, ಯೋಗ ಕ್ಲಾಸ್‌,ಸ್ನೇಹಿತರ ಹರಟೆ ಹೀಗೆ ಪ್ರತಿಯೊಂದು ಮೊಬೈಲ್‌ ನಲ್ಲೇ ಝೂಮ್‌ ಕ್ಯಾಮೆರಾ ಸೇರಿದಂತೆ ವಿಡಿಯೋ ಆಧಾರಿತ ಆ್ಯಪ್‌ಗ್ಳ ಮೂಲಕ  ನಡೆ ಯುತ್ತಿದೆ. ಇದಕ್ಕೆ ಶೈಕ್ಷಣಿಕ ತರಗತಿಗಳೂ ಹೊರತಾಗಿಲ್ಲ. ಇದರಿಂದ ಸಂಪರ್ಕ ಸಾಧ್ಯವಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಪದವಿ ವಿದ್ಯಾರ್ಥಿಗಳಿಗೆ ಇದೇ “ಸಂಪರ್ಕ ಸೇತುವೆ’ ಸಮಸ್ಯೆಯಾಗಿಯೂ  ಪರಿಣಮಿಸಿದೆ.

Advertisement

ಕೊರೊನಾ ರಾಜ್ಯಕ್ಕೆ ವ್ಯಾಪಿಸಿದ ನಂತರ ಬಹುತೇಕ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳು ಆನ್‌ಲೈನ್‌ ತರಗತಿ ನಡೆಸಲು ಆರಂಭಿಸಿವೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್‌ ಸಮಸ್ಯೆ ಜತೆಗೆ ಸಾಮಾನ್ಯ  ತರಗತಿಗಳಿಗಿಂತ ಅತಿ  ದುಬಾರಿ ಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆದಿದ್ದು, ಪುನರ್‌ ಮನನ ತರಗತಿಯ ಚಿಂತನೆ ನಡೆಯುತ್ತಿದೆ. ಮೇ 31ರೊಳಗೆ ಆನ್‌ಲೈನ್‌ ತರಗತಿ ಮೂಲಕ ಪಠ್ಯಕ್ರಮ ಪೂರೈಸಬೇಕು ಎಂದು  ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಪದವಿ ಕಾಲೇಜಿಗೆ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಬಹುತೇಕ ವಿಶ್ವವಿದ್ಯಾಲ ಯ ಹಾಗೂ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ  ಸಂಸ್ಥೆಗಳು ಆನ್‌ಲೈನ್‌ ತರಗತಿ ನಡೆಸುತ್ತಿವೆ. ಕೆಲವುಕಾಲೇಜುಗಳು  ಯೂ-ಟ್ಯೂಬ್‌ ಚಾನೆಲ್‌ ಮೂಲಕ ಪಠ್ಯ ಬೋಧನೆ ಮಾಡುತ್ತಿವೆ. ಆದರೆ, ಸಾಮಾನ್ಯ ತರಗತಿಗೆ ಸೆಮಿಸ್ಟರ್‌ ಆಧಾರದಲ್ಲಿ ಶುಲ್ಕ ಪಾವತಿ  ಮಾಡಿಯೂ, ಆನ್‌ಲೈನ್‌ ತರಗತಿಗೆ ಇವರೇ ಮೊಬೈಲ್‌ ರಿಚಾರ್ಜ್‌ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಎಷ್ಟೋ ವಿದ್ಯಾರ್ಥಿಗಳು ಇದಕ್ಕಾಗಿ ಪಾಲಕರ, ಕುಟುಂಬದ ಸದಸ್ಯರ ಸ್ಮಾರ್ಟ್‌ ಫೋನ್‌ ಬಳಸಬೇಕಾದ ಸ್ಥಿತಿ ಬಂದಿದೆ. ಆನ್‌ಲೈನ್‌ ತರಗತಿಗಳಲ್ಲದೆ, ಯೂ-ಟ್ಯೂಬ್‌ ಚಾನಲ್‌ ಹಾಗೂ ಯೂಟ್ಯೂಬ್‌ ತರಗತಿ  ವಿಡಿಯೋ ನೋಡಲು ಇನ್ನಷ್ಟು ಡೇಟಾ ಬೇಕಾಗುತ್ತದೆ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು  ಮಾಹಿತಿ ನೀಡಿದರು. ಗ್ರಾಮೀಣ ಭಾಗದ ಶೇ. 90ಕ್ಕೂ ಅಧಿಕ ವಿದ್ಯಾರ್ಥಿಗಳು ಮೊಬೈಲ್‌ ಇಂಟರ್ನೆಟ್‌ ಬಳಸುತ್ತಿದ್ದಾರೆ.

ಬಹುತೇಕ ಮೊಬೈಲ್‌ ನೆಟ್‌ವರ್ಕ್‌ ಸಂಸ್ಥೆಗಳು ದಿನಕ್ಕೆ 1ರಿಂದ 1.5 ಜಿಬಿ ಹೆಚ್ಚೆಂದರೆ 2 ಜಿಬಿ ಡಾಟಾ ನೀಡುತ್ತಿವೆ. ಇದಕ್ಕೆ ಪ್ರತಿ ತಿಂಗಳು ಅಥವಾ ಎರಡು-ಮೂರು ತಿಂಗಳಿಗೊಮ್ಮೆ ರಿಚಾರ್ಜ್‌ ಮಾಡಿಕೊಳ್ಳಬೇಕು. ಆನ್‌ಲೈನ್‌ ತರಗತಿ  ಯಲ್ಲಿ  ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ನಿತ್ಯದ ಮೊಬೈಲ್‌ ಡಾಟಾ ಸಾಕಾಗುತ್ತಿಲ್ಲ ಎಂದು ರಾಮನಗರ ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಅಲವತ್ತುಕೊಂಡರು.

Advertisement

ಪದೇ ಪದೆ ರಿಚಾರ್ಜ್‌ ಕಷ್ಟ: 399 ರೂ. 54ದಿನಗಳ ರಿಚಾರ್ಜ್‌ ಪ್ಯಾಕ್‌ನಲ್ಲಿ ದಿನಕ್ಕೆ 1 ಜಿಬಿ ಡಾಟಾ ಸಿಗುತ್ತದೆ. ನಿರಂತರ ಎರಡು ಗಂಟೆ ತರಗತಿಗಳನ್ನು ಆನ್‌ಲೈನ್‌ ಭಾಗವಹಿಸುವಷ್ಟರಲ್ಲಿ 700-800 ಎಂಬಿ ಖಾಲಿಯಾಗಿರುತ್ತದೆ. ಯೂ- ಟ್ಯೂಬ್‌ನಲ್ಲಿ ಬಿಟ್ಟಿರುವ ವಿಡಿಯೋ ಕೂಡ ನೋಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ರಿಚಾರ್ಜ್‌ ಮಾಡಿಕೊಳ್ಳಬೇಕಾಗುತ್ತದೆ. ಮಾಸಿಕ 500- 800ರೂ. ಮೊಬೈಲ್‌ ರಿಚಾರ್ಜ್‌ಗೆ ಹೆಚ್ಚುವರಿಯಾಗಿ ತೆಗೆದಿಡಬೇಕಾಗಿದೆ. ಸಂಕಷ್ಟದ  ದಿನಗಳಲ್ಲಿ ಪದೇ ಪದೆ ದುಬಾರಿ ರಿಚಾರ್ಜ್‌ ಕಷ್ಟ ಎಂದು ಪದವಿ ವಿದ್ಯಾರ್ಥಿ ಶಶಾಂಕ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಹಾಗೂ ದುಬಾರಿ ರಿಚಾರ್ಜ್‌ ಮಾಡಿಸುವುದು ಕಷ್ಟ. ಬೋಧನೆಯ ವಿಡಿಯೋ ಡೌನ್‌ಲೋಡ್‌ ಮಾಡಿಕೊಂಡು ನೋಡುವುದು ಸುಲಭ ವಿಧಾನವಾದರೂ, ಸಾಕಷ್ಟು  ಕ್ಲಿಷ್ಟತೆಯಿಂದ ಕೂಡಿದೆ. ಇದೆಲ್ಲದರ ನಡುವೆ ಆನ್‌ಲೈನ್‌ ತರಗತಿ ನಡೆಸುತ್ತಿದ್ದೇವೆ. ಆನ್‌ಲೈನ್‌ ಕಲಿಕೆಯಲ್ಲಿನ  ಸಮಸ್ಯೆಗಳನ್ನೂ ಸರ್ಕಾರದ ಗಮನಕ್ಕೂ ತಂದಿದ್ದೇವೆ.
-ಡಾ.ಟಿ.ಡಿ.ಕೆಂಪರಾಜು, ಕುಲಪತಿ, ಬೆಂ.ಉತ್ತರ ವಿವಿ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next