Advertisement

ಆನ್‌ಲೈನ್‌ ಪಾಠದ ಜತೆಗೆ ಪುನರಾವರ್ತನೆ ತರಗತಿಗೆ ಚಿಂತನೆ: ಡಾ. ಅಶ್ವತ್ಥನಾರಾಯಣ

09:35 PM May 19, 2020 | Hari Prasad |

ಬೆಂಗಳೂರು: ಆನ್‌ಲೈನ್ ತರಗತಿಗಳ ಜತೆಗೆ ಪುನರಾವರ್ತನೆ ತರಗತಿ ನಡೆಸಲು ಚಿಂತಿಸಲಾಗಿದ್ದು, ನಿರಾತಂಕವಾಗಿ ಪರೀಕ್ಷೆ ಬರೆಯಿರಿ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಧೈರ್ಯ ತುಂಬಿದರು.

Advertisement

ಕಾಲೇಜು ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಮಂಗಳವಾರ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪಮುಖ್ಯಮಂತ್ರಿ, ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ಗೊಂದಲ ನಿವಾರಿಸಿದರು.

ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ತರಗತಿಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರ್ಯಾಶ್‌ ಕೋರ್ಸ್‌ ನಡೆಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಉನ್ನತ ಶಿಕ್ಷಣ ಸಚಿವರು, “ಈ ಬೇಡಿಕೆಯನ್ನು ಪರಗಣಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು,” ಎಂದರು.

“ಆನ್‌ಲೈನ್‌ ತರಗತಿಗಳ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಹಲವರಿಂದ ಅಸಮಾಧಾನವೂ ವ್ಯಕ್ತವಾಗಿದೆ. ಕೊವಿಡ್‌ನಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶಕ್ಕೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಾಗಿದೆ. ಯೂಟ್ಯೂಬ್‌, ಆ್ಯಪ್‌, ವೆಬ್‌ಸೈಟ್‌, ವಾಟ್ಸಪ್‌ ಸೇರಿದಂತೆ ಹಲವಾರು ಆನ್‌ಲೈನ್‌ ವೇದಿಕೆ ಮೂಲಕ ಪಾಠ ಪ್ರವಚನ ನಡೆದಿದೆ.

ತಿಂಗಳ ಕೊನೆಯೊಳಗೆ ಪಠ್ಯಕ್ರಮ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಇದಲ್ಲದೇ, ಪುನರಾರವರ್ತನೆ ತರಗತಿಗಳನ್ನು ನಡೆಸುವ ಉದ್ದೇಶವೂ ಇದೆ. ಪರೀಕ್ಷೆಗಳು ಯಾವಾಗ, ಹೇಗೆ ನಡೆಸಬೇಕು ಎಂಬ ವಿಚಾರವಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಹಲವಾರು ಬಾರಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಜೂನ್‌ ಮೊದಲ ವಾರದಲ್ಲಿ ಪರೀಕ್ಷೆ ಕುರಿತು ಮಾಹಿತಿ ಪ್ರಕಟಿಸಲಾಗುವುದು. ಜತೆಗೆ, ಯುಜಿಸಿ ಮಾರ್ಗದರ್ಶನವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದರು.

Advertisement

ಏಕರೂಪ ಪಠ್ಯ ಕ್ರಮ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾತನಾಡುತ್ತಾ, “ಉದ್ದಿಮೆಗೆ ಪೂರಕವಾದ ಶಿಕ್ಷಣಕ್ಕೆ ಒತ್ತು ನೀಡಬೇಕಿರುವ ಕಾರಣ ಹಳೆಯ ಪಠ್ಯಕ್ರಮ ಬದಲಿಸುವುದು ಅನಿವಾರ್ಯ. ವಿಶ್ವವಿದ್ಯಾಲಯಗಳ ಸಲಹೆಯನ್ನು ಪರಿಗಣಿಸಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಜತೆಗೆ, ಉನ್ನತ ಶಿಕ್ಷಣದಲ್ಲಿ ಅಪ್ರೆಂಟಿಸ್‌ಶಿಪ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೌಶಲ ಅಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವಜನರು ಉದ್ಯೋಗಾವಕಾಶ ಪಡೆಯಲು ಅಗತ್ಯ ತರಬೇತಿ ನೀಡಲಾಗುವುದು, ಎಲ್ಲಿ ಉದ್ಯೋಗ ಅವಕಾಶ ಇದೆ ಎಂದು ತಿಳಿದುಕೊಳ್ಳಲು ಪೋರ್ಟಲ್‌ ವ್ಯವಸ್ಥೆ ಇದೆ,” ಎಂದು ವಿವರಿಸಿದರು.

“ಸರ್ಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಸೌಲಭ್ಯ ಕಲ್ಪಿಸಲಾಗಿದೆ. ಮುಂದೆ ತೊಂದರೆ ಆಗುವುದಿಲ್ಲವೇ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸುತ್ತಾ, “ಸಮಾಜದ ಹಿತದೃಷ್ಟಿಯಿಂದ ಲಭ್ಯ ಇರುವಂಥ ಸೌಕರ್ಯವನ್ನು ಕೊವಿಡ್‌ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗಿದೆ. ಕಾಲೇಜು ಆರಂಭವಾಗುವ ವೇಳೆಗೆ ವಸತಿ ನಿಲಯಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್‌ ಮಾಡಲಾಗುವುದು. ಈ ಬಗ್ಗೆ ಆತಂಕ ಬೇಡ,” ಎಂದರು

ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯ ವಿಸ್ತರಣೆ ಮಾಡುವ ಭರವಸೆ ಜತೆಗೆ ಅಧ್ಯಾಪರ ವೇತನ ತಡೆ ಹಿಡಿಯದಂತೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next