Advertisement
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಗ್ರಾಹಕರಿಗೆ ಆಧುನಿಕ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಗಳನ್ನು ಮಾಡಲಾಗಿದೆ. ಪ್ರಾಯೋಗಿಕವಾಗಿ ನಗರ ಪ್ರದೇಶದಲ್ಲಿ ಮೂಬೈಲ್ ವಾಹನವೊಂದು ಸಂಚರಿಸಿ ಬ್ಯಾಂಕಿನ ಎಲ್ಲಾ ಸೇವೆಗಳನ್ನು ನೀಡುವ ಗುರಿ ಹೊಂದಿದೆ.ಖಾತೆಗೆ ಹಣ ಭರಿಸುವುದು, ಖಾತೆಯಿಂದ ಹಣ ತೆಗೆಯುವುದು ಸೇರಿದಂತೆ ವಿವಿಧ ಸೌಲಭ್ಯಗಳು ಮೂಬೈಲ್ ವಾಹನದಲ್ಲಿ ಇರಲಿವೆ ಎಂದು ತಿಳಿಸಿದರು.
ಬ್ಯಾಂಕಿನಲ್ಲಿ 1459.42 ಕೋಟಿ ಉಳಿತಾಯ ಠೇವಣಿ ಇದೆ. 579.43 ಕೋಟಿ ಚಾಲ್ತಿ ಠೇವಣಿ ಇದೆ. ಇತರೆ 1.74 ಕೋಟಿ ಠೇವಣಿ ಹಾಗೂ 855.03 ಕೋಟಿ ಮುದ್ದತು ಠೇವಣಿ ಹೊಂದಿದೆ ಎಂದು ಮಾಹಿತಿ ನೀಡಿದರು. 2017-18ನೇ ಸಾಲಿನಲ್ಲಿ 105.42 ಕೋಟಿ ಬ್ಯಾಂಕಿನ ಶೇರು ಬಂಡಾವಾಳದ ಮೊತ್ತ ಇದ್ದು, 267.63 ಕೋಟಿ ಬ್ಯಾಂಕಿನ ಕಾಯ್ದಿಟ್ಟ ನಿಧಿ ಹಾಗೂ 373.04 ಕೋಟಿ ಸ್ವಂತ ಬಂಡವಾಳ ಬ್ಯಾಂಕ್ ಹೊಂದಿದೆ. ಜಿಲ್ಲೆಯ ಪ್ಯಾಕ್ಸ್‌ಗಳ ಮೂಲಕ ರೈತರಿಗೆ 705.21 ಕೋಟಿ ಸಾಲ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅಲ್ಪಾವಧಿ ಬೆಳೆ ಸಾಲ 423.13 ಕೋಟಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 84.62 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ. ಮಧ್ಯಮ ಮತ್ತು ದೊಡ್ಡ ರೈತರಿಗೆ 227.90 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಲಾಗಿದೆ.
Related Articles
Advertisement
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ನಬಾರ್ಡ್‌ನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ 9 ಪ್ರಶಸ್ತಿಗಳನ್ನು ಬ್ಯಾಂಕ್ ಪಡೆದುಕೊಂಡಿದೆ. ರಾಷ್ಟ್ರೀಕೃತಬ್ಯಾಂಕ್ಗಳ ಜೊತೆಯಲ್ಲೇ ಡಿಸಿಸಿ ಬ್ಯಾಂಕ್ ಇಷ್ಟೊಂದು ಪ್ರಶಸ್ತಿ ಗಳಿಸಿರುವುದು ಬ್ಯಾಂಕ್ ಪ್ರಗತಿಯ ಸಂಕೇತವಾಗಿದೆ ಎಂದು ಸಂತಸ ಹಂಚಿಕೊಂಡರು. ಜಿಲ್ಲೆಯ ಮೂರು ಸಹಕಾರ ಸಕ್ಕರೆ ಕಾರ್ಖಾನೆಗಳು ಬ್ಯಾಂಕ್‌ನಿಂದ ಸಾಲ ಪಡೆದಿದ್ದು, ಈ ಪೈಕಿ ಬಿಎಸ್‌ಎಸ್‌ಕೆ ಕಬ್ಬು ಅರೆಯುವಿಕೆ ನಿಲ್ಲಿಸಿದ್ದರಿಂದ ಬ್ಯಾಂಕ್‌ನ ಎನ್‌ಪಿಎ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು 300 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರೆ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ 122.96 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ವಿವರಿಸಿದರು. ನಿಯಮ ಉಲ್ಲಂಘಿಸಿ ಸಾಲ: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಇತರೆ ಸಕ್ಕರೆ ಕಾರ್ಖಾನೆಗಳಿಗೆ ಬ್ಯಾಂಕ್ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾಲ ನೀಡಲಾಗಿದೆ ಎಂಬ ಆರೋಪ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಜಿಲ್ಲೆಯ ರೈತರ ಹಿತ ದೃಷ್ಟಿಯಿಂದ ಕಾರ್ಖಾನೆಗಳಿಗೆ ಸಾಲ ನೀಡಲಾಗಿದೆ. ಸೂಕ್ತ ಸಮಯಕ್ಕೆ ಸಾಲ ನೀಡದಿದ್ದರೆ ಜಿಲ್ಲೆಯ ರೈತರು ಸಮಸ್ಯೆ ಎದುರಿಸಬೇಕಾದ ಸ್ಥಿತಿ ಇತ್ತು ಎಂದು ವಿವರಿಸಿದರು. ಜಿಲ್ಲೆಯ ವಿವಿಧೆಡೆ ರೈತರು ಅಲ್ಲದ ಹಾಗೂ ಕೃಷಿ ಭೂಮಿ ಹೊಂದಿರದವರಿಗೆ ಕೆಸಿಸಿ ಸಾಲ ನೀಡಲಾಗಿದೆ ಎಂಬ ಆರೋಪದ ಪ್ರಶ್ನೆಗೆ ಉತ್ತರಿಸಿದ ಅವರು, ಬ್ಯಾಂಕ್‌ಗಳು ಪತ್ತಿನ ಸಹಕಾರ ಸಂಘಗಳಿಗೆ ಸಾಲದ ಹಣ ಪಾವತಿ ಮಾಡುತ್ತವೆ. ಅಲ್ಲಿ ಯಾವುದೇ ಅಕ್ರಮಗಳು ನಡೆದರೂ ಮೊದಲಿಗೆ ಅವರೇ ಹೊಣೆಗಾರರು. ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಅರ್ಹ ರೈತರಿಗೆ ಸಾಲ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.