Advertisement

ಆನ್‌ಲೈನ್‌ ಜಾಹೀರಾತುಗಳ ಮೇಲೆ ಕಣ್ಗಾವಲು, ಯಶಸ್ವಿ ಅನುಷ್ಠಾನ ಮುಖ್ಯ

12:50 AM Jan 25, 2019 | Harsha Rao |

ದೇಶ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ, ಸಹಜವಾಗಿಯೇ ದೇಶದ ರಾಜಕೀಯ ಪಕ್ಷಗಳಿಂದ ಜಾಹೀರಾತುಗಳು, ಪ್ರಚಾರಾಂದೋಲನಗಳು ಆರಂಭವಾಗಿದ್ದು, ಇನ್ಮುಂದೆ ಅವುಗಳ ತೀವ್ರತೆ ಹೆಚ್ಚುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. 

Advertisement

ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಜಾಹೀರಾತುಗಳು ಪಕ್ಷವೊಂದರ ಸಾಧನೆ ಅಥವಾ ಸಂಕಲ್ಪಗಳನ್ನು ಸಾರುವುದಕ್ಕಿಂತಲೂ ಹೆಚ್ಚಾಗಿ, ತಿರುಚಿದ ಅಂಕಿ-ಅಂಶಗಳನ್ನು ತೋರಿಸುವ, ಎದುರಾಳಿ ಪಕ್ಷಗಳ ಕುರಿತು ದ್ವೇಷ ಭಾವನೆ ಹರಡುವ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ದುರಂತ. ಸತ್ಯವೇನೆಂದರೆ, ಈಗಲೂ ಟೆಲಿವಿಷನ್‌ ಮತ್ತು ಪತ್ರಿಕೆಗಳಲ್ಲಿ “ಸಭ್ಯ’ ವ್ಯಾಪ್ತಿಯಲ್ಲೇ ಜಾಹೀರಾತುಗಳು ಪ್ರಕಟವಾಗುತ್ತವೆ. ಆದರೆ ಅಂತರ್ಜಾಲ ಲೋಕದ ವಿಷಯದಲ್ಲಿ ಪರಿಸ್ಥಿತಿ ಹೀಗಿಲ್ಲ. ಈ ವೇದಿಕೆ ಒದಗಿಸುವ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರÂವನ್ನು ರಾಜಕೀಯ ಪಕ್ಷಗಳು ವಿಪರೀತ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಯಾರು ಈ ಜಾಹೀರಾತುಗಳನ್ನು ನೀಡುತ್ತಿದ್ದಾರೆ, ಇದಕ್ಕಾಗಿ ಹಣವೆಷ್ಟು ಖರ್ಚಾಗಿದೆ, ಜಾಹೀರಾತುಗಳಲ್ಲಿ ಹೇಳುತ್ತಿರುವ ಅಂಶಗಳಲ್ಲಿ ಸತ್ಯಾಂಶವಿದೆಯೇ? ಎಂಬೆಲ್ಲ ಮಾಹಿತಿಗಳು ಬಳಕೆದಾರರಿಗೆ ಸಿಗುವುದೇ ಇಲ್ಲ. ಇದಕ್ಕೆ ಕಾರಣ ಪಾರದರ್ಶಕತೆಯ ಕೊರತೆ. 

ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡೇ ಇಂಟರ್ನೆಟ್‌ ದೈತ್ಯ “ಗೂಗಲ್‌’ ಸಂಸ್ಥೆ ಶ್ಲಾಘನೀಯ ನಿರ್ಧಾರ ಕೈಗೊಂಡಿದೆ. ತನ್ನ ವೇದಿಕೆಯಲ್ಲಿ ಪ್ರಕಟವಾಗುವ ರಾಜಕೀಯ ಜಾಹೀರಾತುಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲಾಗುವುದು ಎಂದು ವಾಗ್ಧಾನ ಮಾಡಿದೆ. ಒಂದು ವೇಳೆ ತನ್ನ ವೇದಿಕೆಗಳಲ್ಲಿ ಭಾರತಕ್ಕೆ ಸಂಬಂಧಿಸಿದ ಯಾವುದೇ ರಾಜಕೀಯ ಜಾಹೀರಾತುಗಳು ಪ್ರಸಾರವಾದರೂ, ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ತಾನು ಬಳಕೆದಾರರಿಗೆ ಬಹಿರಂಗಪಡಿಸುವುದಾಗಿ ಅದು ಭರವಸೆ ನೀಡಿದೆ. ಅಂದರೆ, ಜಾಹೀರಾತು ನೀಡುವ ವ್ಯಕ್ತಿ/ಸಂಸ್ಥೆಯ ಹೆಸರು, ಅದಕ್ಕಾಗಿ ಖರ್ಚಾದ ಹಣವೆಷ್ಟು ಎಂಬ ಮಾಹಿತಿಯನ್ನು ಅದು ಒದಗಿಸಲಿದೆಯಂತೆ. ಅಷ್ಟೇ ಅಲ್ಲದೆ ವಿಜ್ಞಾಪನೆಯನ್ನು ಪ್ರಸಾರ ಮಾಡಲು ಇಚ್ಛಿಸುವವರು ಚುನಾವಣಾ ಆಯೋಗದಿಂದ ಅಥವಾ ಆಯೋಗವು ಅಧಿಕೃತವಾಗಿ ಗುರುತಿಸುವವರಿಂದ “ಜಾರಿ-ಪ್ರಮಾಣಪತ್ರ’ ಪಡೆಯಬೇಕಾಗುತ್ತದೆ. ಜಾಹೀರಾತುದಾರರ ಮಾಹಿತಿಯನ್ನೆಲ್ಲ ಗೂಗಲ್‌ ಸಂಸ್ಥೆ ಯು “ಇಂಡಿಯಾ ಪಾಲಿಟಿಕಲ್‌ ಆ್ಯಡ್ಸ್‌ ಟ್ರಾನ್ಸ್‌ಪರೆನ್ಸಿ ರಿಪೋರ್ಟ್‌’ ಮತ್ತು “ಪಾಲಿಟಿಕಲ್‌ ಆ್ಯಡ್ಸ್‌ ಲೈಬ್ರರಿ’ ಎಂಬ ಮುಕ್ತ ವೇದಿಕೆಗಳಲ್ಲಿ ಬಳಕೆದಾರರಿಗೆ ಒದಗಿಸಲಿದೆ.  ವಾಟ್ಸ್‌ಆ್ಯಪ್‌ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳಿಂದಾಗಿ ಆದ ಸಾವುನೋವುಗಳು, ಫೇಸ್‌ಬುಕ್‌-ಕೇಂಬ್ರಿಜ್‌ ಅನಲಿಟಿಕಾ ವಿಷಯದಲ್ಲಿ ಹುಟ್ಟಿಕೊಂಡ ಆತಂಕಗಳಿಗೆ ಭಾರತವು ಸಾಕ್ಷಿಯಾಗಿದೆ. ಹೀಗಾಗಿ, ಈ ವಿಷಯಗಳೆಲ್ಲ ಗೂಗಲ್‌ ಸೇರಿದಂತೆ, ಅಂತರ್ಜಾಲ ಕಂಪನಿಗಳನ್ನೆಲ್ಲ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿವೆ. ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿಯೇ ಈ ಸಂಸ್ಥೆಗಳು ಇಂಥ ಹೆಜ್ಜೆ ಇಡುತ್ತಿವೆ.  

ಕೆಲ ವರ್ಷಗಳಿಂದ ಮೊಬೈಲ್‌ ಮತ್ತು ಇಂಟರ್ನೆಟ್‌ ಜಗತ್ತಿನಲ್ಲಾಗಿರುವ ಬೆಳವಣಿಗೆ ಹೇಗಿದೆಯೆಂದರೆ, ಹಳ್ಳಿಹಳ್ಳಿಗಳಿಗೂ 4 ಜಿ ಸೆಟ್‌ಗಳು, ನೆಟ್‌ವರ್ಕ್‌ಗಳು ತಲುಪಿವೆ. ಕೆಲ ಸಮಯದ ಹಿಂದೆಯೇ ಅಂತರ್ಜಾಲವೆಂದರೆ ಏನೆಂದು ತಿಳಿಯದವರೂ ಈಗ ಈ ಆವಿಷ್ಕಾರದ ವೇಗಕ್ಕೆ-ವೈಖರಿಗೆ ಬೆರಗಾಗಿಬಿಟ್ಟಿದ್ದಾರೆ. ಈ ಬೆರಗಿಗೆ ಅವರ ಮುಗ್ಧತೆಯೇ ಕಾರಣ. ರಾಜಕೀಯ ಪಕ್ಷಗಳು ಜನರ ಈ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ತಲ್ಲೀನವಾಗಿವೆ. ಅನ್ಯ ಮಾಧ್ಯಮಗಳಿಗಿರುವಂತೆ, ಅಂತರ್ಜಾಲ ಮಾಧ್ಯಮಕ್ಕೆ ಅಷ್ಟು ಕಟ್ಟುನಿಟ್ಟಾದ ನಿಬಂಧನೆಗಳಿಲ್ಲ. ಅಭಿವ್ಯಕ್ತಿ ಸ್ವಾತಂತ್ರÂದ ಆಸರೆ ಅದಕ್ಕೆ ತುಸು ಹೆಚ್ಚಾಗಿಯೇ ಇದೆ.

ಹೀಗಾಗಿ ನೇರವಾಗಿ ಬಳಕೆದಾರರ ಕಿಸೆಗೇ ನೋಟಿಫಿಕೇಷನ್‌ಗಳ ಮೂಲಕ ತಲುಪಿ  ತಮ್ಮ ತಿರುಚಿದ ಪ್ರಚಾರ ಕೈಗೊಳ್ಳುತ್ತಿವೆ. ಜನರೂ ಮೊಬೈಲ್‌ ಎಂಬ ಮಾಯಾಲೋಕದಲ್ಲಿ ಬರುವುದೆಲ್ಲ ಸತ್ಯವೆಂದು ಭಾವಿಸಿ ಪಕ್ಷಗಳ ತಂತ್ರಕ್ಕೆ ಬಲಿಯಾಗುತ್ತಿದ್ದಾರೆ.  ಕಳೆದ ಲೋಕಸಭಾ ಚುನಾವಣೆಯ ನಂತರ ಭಾರತದ ರಾಜಕೀಯ ಪಕ್ಷಗಳಿಗೆ ಸೋಷಿಯಲ್‌ ಮೀಡಿಯಾದ ನಿಜವಾದ ಶಕ್ತಿಯ ಅರಿವಾಯಿತು. ಈಗ ಚಿಕ್ಕಪುಟ್ಟ ಪಕ್ಷಗಳೂ ಐಟಿ ಸೆಲ್‌ಗ‌ಳನ್ನು ಸ್ಥಾಪಿಸಿಕೊಂಡುಬಿಟ್ಟಿವೆ. ಹೀಗಾಗಿ, ಈ ಬಾರಿ ಅಂತರ್ಜಾಲದಲ್ಲಿ ಪ್ರಚಾರ ಸುದ್ದಿಗಳು-ಜಾಹೀರಾತುಗಳ ಅಲೆ ಯಾವ ಮಟ್ಟಕ್ಕೆ ತೀವ್ರವಾಗಲಿದೆಯೋ ಎನ್ನುವ ಕಳವಳ ಇದ್ದೇ ಇತ್ತು. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಗೂಗಲ್‌ನ ನಿರ್ಧಾರ ನಿಜಕ್ಕೂ ಸ್ವಾಗತಾರ್ಹವಾದದ್ದು. ಆದರೆ, ರಂಗೋಲಿ ಕೆಳಗೆ ತೂರುವ ಕಲೆಯನ್ನು ರಾಜಕೀಯ ಪಕ್ಷಗಳು ಸಿದ್ಧಿಸಿಕೊಂಡಿರುವುದರಿಂದ ಈ ನಿರ್ಧಾರ ನಿಜಕ್ಕೂ ಸಕ್ಷಮವಾಗಿ ಅನುಷ್ಠಾನಕ್ಕೆ ಬರುತ್ತದೋ ಇಲ್ಲವೋ ಎನ್ನುವ ಅನುಮಾನ ಕಾಡುತ್ತದೆ. ಇದೇನೇ ಇದ್ದರೂ, ಜನರೂ ಕೂಡ ಪ್ರತಿ ಜಾಹೀರಾತನ್ನೂ ಒಂದು ಅನುಮಾನದ ದೃಷ್ಟಿಯಿಂದಲೇ ನೋಡುವ ಗುಣವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next