Advertisement

ಪುತ್ತೂರು ಸಂತೆಯಲ್ಲಿ ಈರುಳ್ಳಿ ದುಬಾರಿ: ಕೈ ಸುಡುವ ಭಯ!

10:28 PM Dec 09, 2019 | mahesh |

ಪುತ್ತೂರು: ಬೇಕಾದಷ್ಟು ಈರುಳ್ಳಿ ಶೇಖರಣೆ ಇದೆ. ಆದರೆ ಕೈ ಸುಡುವ ದರಕ್ಕೆ ಬೆದರಿರುವ ಗ್ರಾಹಕರು ಈರುಳ್ಳಿ ಖರೀದಿಯ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ!

Advertisement

ಕಿಲ್ಲೆ ಮೈದಾನದಲ್ಲಿ ನಡೆಯುವ ಐತಿಹಾಸಿಕ ಸೋಮವಾರದ ಪುತ್ತೂರು ಸಂತೆಯಲ್ಲಿ ಈ ವಾರವೂ ಗ್ರಾಹಕರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಈರುಳ್ಳಿ ರಾಶಿ ಕಡೆಗೆ ಆಗಮಿಸಿ ದರ ಕೇಳಿದ್ದರು. 140 ರೂ. ಎಂದೊಡನೆ ಖರೀದಿಗೆ ಹಿಂದೇಟು ಹಾಕಿದ್ದಾರೆ. ಒಂದಷ್ಟು ಮಂದಿ ಈರುಳ್ಳಿ ಖರೀದಿ ಪ್ರಮಾಣವನ್ನು ಗರಿಷ್ಠ ಅರ್ಧ ಕೆ.ಜಿ.ಗೆ ಸೀಮಿತಗೊಳಿಸಿದ್ದಾರೆ. ವಿಪರೀತ ದರ ಹೆಚ್ಚಳದ ಕಾರಣದಿಂದ ಈರುಳ್ಳಿ ಬೇಡಿಕೆ ಪ್ರಮಾಣವೂ ಕುಸಿದಿದೆ.

ಸೋಮವಾರದ ಪುತ್ತೂರು ಸಂತೆಯಲ್ಲಿ ಮಾಮೂಲಿಗಿಂತ ಈರುಳ್ಳಿ ರಾಶಿಯೂ ಕಿರಿದಾಗಿತ್ತು. ಜತೆಗೆ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಾಗಿತ್ತು.

ಶೇಖರಣೆ ಬೇಡ
ಈರುಳ್ಳಿ ಬೆಲೆ ಮಾಮೂಲಿಗಿಂತ ನಾಲ್ಕು ಪಟ್ಟು ಹೆಚ್ಚಾಗಿರುವುದರಿಂದ ದೈನಂದಿನ ಅಡುಗೆಯಲ್ಲಿ ಈರುಳ್ಳಿ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವತ್ತ ಗೃಹಿಣಿಯರು ಗಮನ ಹರಿಸುತ್ತಿದ್ದಾರೆ. ಅಂಗಡಿ, ಸಂತೆಗಳಲ್ಲಿ ಒಂದೆರಡು ದಿನಗಳ ಬಳಕೆಗೆ ಬೇಕಾದಷ್ಟು ಮಾತ್ರ ಖರೀದಿ ಮಾಡುತ್ತಿದ್ದಾರೆ. ದರ ಏರು-ಪೇರಿನತ್ತ ನಿಗಾ ವಹಿಸಿದ್ದಾರೆ. ಈ ಕಾರಣದಿಂದ ಈರುಳ್ಳಿ ಶೇಖರಣೆ ಮಾಡಿಡಲು ಮನಸ್ಸು ಮಾಡುತ್ತಿಲ್ಲ.

ಕೆ.ಜಿ.ಗೆ 140 ರೂ.
ಸೋಮವಾರ ಪುತ್ತೂರು ವಾರದ ಸಂತೆಯಲ್ಲಿ ಈರುಳ್ಳಿ ಕೆ.ಜಿ.ಯೊಂದಕ್ಕೆ 140 ರೂ.ಗೆ ಮಾರಾಟವಾಗಿದೆ. ಬೆಳಗ್ಗೆ ಆರಂಭದಲ್ಲಿ 100-120 ರೂ.ನ ಸಣ್ಣ ಗಾತ್ರದ ಈರುಳ್ಳಿ ಇತ್ತಾದರೂ ಸುಮಾರು 11 ಗಂಟೆಯಾಗುವಾಗ ಎಲ್ಲ ವ್ಯಾಪಾರಿಗಳಲ್ಲಿ ಸಣ್ಣ ಗಾತ್ರದ ಈರುಳ್ಳಿ ಮುಗಿದಿದೆ. ದೊಡ್ಡ ಮಟ್ಟದಲ್ಲಿ ಈರುಳ್ಳಿ ಆವಕ ಮಾಡಿಕೊಂಡು ಸಂತೆಗೆ ಬಂದ ವ್ಯಾಪಾರಿಗಳು ನಿರೀಕ್ಷಿತ ವ್ಯಾಪಾರವಿಲ್ಲದೆ ಸಪ್ಪೆ ಮೋರೆ ಹಾಕಿ ಕುಳಿತಿದ್ದರು.

Advertisement

ದೊಡ್ಡ ಮಟ್ಟದ ಈರುಳ್ಳಿ ವ್ಯಾಪಾರಿಗಳು ಹುಬ್ಬಳ್ಳಿ, ಪುಣೆಯಿಂದ ಈರುಳ್ಳಿಗಳನ್ನು ಸಗಟು ದರದಲ್ಲಿ ಖರೀದಿಸಿ ತರುತ್ತಾರೆ. ಈಗ ಹುಬ್ಬಳ್ಳಿಯಿಂದ ನಿರೀಕ್ಷಿತ ಪ್ರಮಾಣದ ಈರುಳ್ಳಿ ಲಭಿಸದೇ ಇರುವುದರಿಂದ ಪುಣೆ, ಭಾಗಗಳಿಗೆ ಕೇಂದ್ರೀಕರಿಸಿದ್ದಾರೆ. ಈರುಳ್ಳಿಯನ್ನು ಹೆಚ್ಚು ದಿನ ಇರಿಸಿಕೊಂಡರೆ ಹಾಳಾಗುವ, ತೂಕದಲ್ಲಿ ಇಳಿಕೆಯಾಗುವ ಭಯ ಇದೆ ಎನ್ನುತ್ತಾರೆ ವ್ಯಾಪಾರಿಗಳು.

 ಇಳಿಕೆಯ ಹಾದಿ ನಿರೀಕ್ಷೆ
ಸಾಮಾನ್ಯವಾಗಿ ಸೋಮವಾರ ಸಂತೆಗೆ ಬಂದರೆ ನಮ್ಮ ಖರೀದಿ ಖರ್ಚು 250 ರೂ.ಗೆ ಮುಗಿಯುತ್ತದೆ. ಆದರೆ ಈಗ ಈಗ ಈರುಳ್ಳಿ ಒಂದು ಕೆ.ಜಿ. ಖರೀದಿಸಿದರೆ ಉಳಿದ ತರಕಾರಿಗಳ ಖರೀದಿಗೆ ಸಾಕಾಗುವುದಿಲ್ಲ. ಈರುಳ್ಳಿ ದರ ಇಳಿಕೆಯ ಹಾದಿಯನ್ನು ನಿರೀಕ್ಷಿಸುತ್ತಿರುವುದರಿಂದ ಒಂದೆರಡು ದಿನದ ಅಗತ್ಯದಷ್ಟು ಮಾತ್ರ ಖರೀದಿಸಿದ್ದೇನೆ.
– ಸುಶೀಲಾ, ಸಂತೆಗೆ ಆಗಮಿಸಿದ ಗೃಹಿಣಿ

ಬೇಡಿಕೆ ಇಳಿಕೆ
ಸಂತೆಯಲ್ಲಿ ಈರುಳ್ಳಿ ಖರೀದಿಸುವವರ ಪ್ರಮಾಣ ವಿಪರೀತ ಇಳಿಕೆಯಾಗಿದೆ. ಸಾಮಾನ್ಯವಾಗಿ ನೀಡುವಂತೆ ಹೋಲ್‌ಸೇಲ್‌ ಅಂಗಡಿಗಳನ್ನು ಸಂಪರ್ಕಿಸಿದರೆ ಹಿಂದೆ 30-40 ಚೀಲ ಖರೀದಿಸುತ್ತಿದ್ದವರು ಈಗ 5-10 ಚೀಲಕ್ಕೆ ಇಳಿಸಿದ್ದಾರೆ. ನನ್ನಲ್ಲಿ 1 ಟನ್‌ನಷ್ಟು ಈರುಳ್ಳಿ ಇದೆ. ದರವಿದ್ದರೂ ಬೇಡಿಕೆ ಇಳಿಕೆಯಾಗಿರುವುದರಿಂದ ಸಮಸ್ಯೆಯಾಗಿದೆ.
– ರೋಶನ್‌, ಈರುಳ್ಳಿ ವ್ಯಾಪಾರಿ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next