ನವದೆಹಲಿ: ಕೆ.ಜಿ.ಗೆ 100ರೂ.ವರೆಗೆ ತಲುಪಿದ್ದ ಈರುಳ್ಳಿ ದರ ಈಗ ನಿಧಾನವಾಗಿ ಇಳಿಕೆಯಾಗುತ್ತಿದೆ. ದೆಹಲಿ, ಮುಂಬೈ, ಚೆನ್ನೈ ಮತ್ತಿತರ ಮಾರುಕಟ್ಟೆಗಳಲ್ಲಿ ಸೋಮವಾರ ಈರುಳ್ಳಿಯ ಸಗಟು ದರ ಕೆಜಿಗೆ 10 ರೂ. ಗಳಷ್ಟು ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ದರ ಏರಿಕೆ ಮತ್ತು ಕಳ್ಳ ದಾಸ್ತಾನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈರುಳ್ಳಿಯ ದಾಸ್ತಾನಿಗೆ ಮಿತಿ ಹೇರಿದ ಬೆನ್ನಲ್ಲೇ ಮಾರುಕಟ್ಟೆಗೆ ಹರಿದುಬರುವ ಈರುಳ್ಳಿಯ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ, ದರವೂ ಇಳಿಕೆಯಾಗುತ್ತಿದೆ. ಪರಿಣಾಮ, ಮಹಾರಾಷ್ಟ್ರದಲ್ಲಿ ಈರುಳ್ಳಿ ದರ ಕೆಜಿಗೆ 51 ರೂ., ಚೆನ್ನೈನಲ್ಲಿ 66 ರೂ., ಮುಂಬೈ, ಬೆಂಗಳೂರು ಮತ್ತು ಭೋಪಾಲ್‌ನಲ್ಲಿ ಕ್ರಮವಾಗಿ 70 ರೂ. 64 ರೂ. ಮತ್ತು 40 ರೂ.ಗಳಿಗೆ ತಲುಪಿದೆ.
ಆಲೂಗಡ್ಡೆ ದಾಸ್ತಾನಿಗೂ ಮಿತಿ: ಈರುಳ್ಳಿಯ ಬಳಿಕ ಆಲೂಗಡ್ಡೆಯ ದರವೂ ಗಗನಮುಖೀಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಆಲೂಗಡ್ಡೆಯ ಕಳ್ಳ ದಾಸ್ತಾನು, ಕಾಳಸಂತೆ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಅವಶ್ಯಕ ವಸ್ತುಗಳ ತಿದ್ದುಪಡಿ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ.
ಇದನ್ನೂ ಓದಿ:ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು, ಹಲವರು ನಾಪತ್ತೆ
ಈ ಮೂಲಕ ಉತ್ಪನ್ನದ ದರವನ್ನು ಇಳಿಸಲು ಉದ್ದೇಶಿಸಲಾಗಿದೆ. ದೇಶಾದ್ಯಂತ ಆಲೂಗಡ್ಡೆ ದರ ಕೆಜಿಗೆ 30ರಿಂದ 60ರೂ.ಗೆ ತಲುಪಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಈಗಾಗಲೇ ಹಲವು ರಾಜ್ಯಗಳು ಕ್ರಮ ಕೈಗೊಳ್ಳಲು ಆರಂಭಿಸಿವೆ ಎಂದೂ ಇಲಾಖೆ ತಿಳಿಸಿದೆ.