ಗದಗ: ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳದಿಂದ ಕೇವಲ ಎರಡು ತಿಂಗಳ ಹಿಂದೆ ಉಂಟಾಗಿದ್ದ ಪ್ರವಾಹದಿಂದ ರೋಣ ತಾಲೂಕಿನಲ್ಲಿ 16ಕ್ಕೂ ಹೆಚ್ಚು ಹಳ್ಳಿಯ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇದೀಗ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆಗಳು ನೀರುಪಾಲಾಗಿದ್ದು, ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ರೋಣ, ಗಜೇಂದ್ರಗಡ ಹಾಗೂ ಹೊಳೆಆಲೂರಿನಲ್ಲಿ ಮಳೆ ಅಬ್ಬರಿಸಿದೆ. ಕಳೆದ 24 ಗಂಟೆಗಳಲ್ಲಿ ಗಜೇಂದ್ರಗಡದಲ್ಲಿ ಸುಮಾರು 104 ಮಿ.ಮೀ.ನಷ್ಟು ಮಳೆ ಸುರಿದಿದೆ. ಅದರಲ್ಲೂ ಮಾರನಬಸರಿ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೇರಿ, ಕಳಕಾಪುರ, ಜಿಗಳೂರು, ಜಕ್ಕಲಿ ಹಾಗೂ ಹೊಸಳ್ಳಿ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ರೈತರು ಬೆಳೆದಿದ್ದ ಈರುಳ್ಳಿ, ಹತ್ತಿ, ಗೋವಿನಜೋಳ ಹಾಗೂ ಮೆಣಸಿನಕಾಯಿ ನೀರು ಪಾಲಾಗಿವೆ.
ಪ್ರತಿ ಎಕರೆಗೆ 20 ಸಾವಿರ ರೂ. ಖರ್ಚು ಮಾಡಿದ್ದ ರೈತರು, ಬರಗಾಲದ ಮಧ್ಯೆಯೂ ಅಲ್ಪಸ್ವಲ್ಪ ಮಳೆ ಹಾಗೂ ತೇವಾಂಶದಲ್ಲಿ ಬೆಳೆ ತೆಗೆದಿದ್ದರು. ಇನ್ನೇನು ಈರುಳ್ಳಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆಂದಿದ್ದ ಈರುಳ್ಳಿ ಬೆಳೆಯಂತೂ ನೀರಿನಲ್ಲಿ ಮುಳುಗಡೆಯಾಗಿದೆ.
ಮಳೆಗೆ ಕೊಚ್ಚಿ ಹೋಯ್ತು ಈರುಳ್ಳಿ: ಜಿಲ್ಲೆಯ ರೋಣ ತಾಲೂಕಿನಲ್ಲಿ ಈರುಳ್ಳಿ ಬೆಳೆಯನ್ನು ಪ್ರಧಾನವಾಗಿ ಬೆಳೆಯಲಾಗುತ್ತದೆ. ಪ್ರತೀ ವರ್ಷ ಸರಾಸರಿ 15,337 ಹೆಕ್ಟೇರ್‌ನಷ್ಟು ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮುಂಗಾರಿನ ಆರಂಭದಲ್ಲಿ ಮಳೆ ಕೈಕೊಟ್ಟಿರುವುದು, ಬಿತ್ತನೆ ಬಳಿಕ ಸಕಾಲಕ್ಕೆ ನಿರೀಕ್ಷಿತ ಮಳೆಯಾಗದೇ ಈರುಳ್ಳಿ ಬೆಳೆಗೆ ತೇವಾಂಶ ಕೊರತೆಯಾಗಿತ್ತು. ಈ ನಡುವೆ ಸುರಿದ ಅಲ್ಪಸ್ವಲ್ಪ ಮಳೆಯಿಂದಾಗಿ ಸುಮಾರು 10 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿದೆ. ಆ ಪೈಕಿ ಶೇ. 80 ರಷ್ಟು ಬೆಳೆ ಕೈಗೆ ಧಕ್ಕಲಿಲ್ಲ. ಕಟಾವಿಗೆ ಬಂದಿರುವ ಬೆಳೆಯಲ್ಲಿ ಭಾಗಶಃ ಮಳೆಗೆ ಆಹುತಿಯಾಗಿದೆ ಎಂಬುದು ರೈತರ ಅಳಲು
ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲ. ಈ ಬಾರಿ ನಿರೀಕ್ಷೆಯಷ್ಟು ಮಳೆ ಬಾರದಿದ್ದರೂ ಸುರಿದ ಅಲ್ಪಸ್ವಲ್ಪ ಮಳೆಯನ್ನೇ ಆಧರಿಸಿ ಈರುಳ್ಳಿ ಬೆಳೆದಿದ್ದೆವು. ಅದಕ್ಕಾಗಿ ಪ್ರತಿ ಎಕರೆಗೆ 10ರಿಂದ 15 ಸಾವಿರ ರೂ. ಖರ್ಚು ಮಾಡಿದ್ದೇವೆ. ಆರಂಭಿಕವಾಗಿ ವಿಳಂಬವಾಗಿ ಚುರುಕುಗೊಂಡ ಮಳೆಯಿಂದ ಈ ಬಾರಿ ಬೆಳೆ ಕೈ ಸೇರುವುದೆಂದು ನಂಬಿದ್ದೆವು. ಆದರೆ, ಕಳೆದ ಒಂದು ವಾರದಿಂದ ಸುರಿದ ಸತತ ಮಳೆಯಿಂದ ನಮ್ಮೆಲ್ಲ ನಿರೀಕ್ಷೆ ಉಸಿಯಾಗಿದೆ.
–ಹುಸೇನಸಾಬ್, ಮಾರನಬಸರಿ ರೈತ
-ವಿಶೇಷ ವರದಿ