Advertisement

ಗ್ಯಾರಂಟಿ ಸರಕಾರಕ್ಕೆ ವರ್ಷದ ಗೋರಂಟಿ!; ಹಲವು ಸವಾಲುಗಳ ನಡುವೆಯೂ ಭರವಸೆ ಈಡೇರಿಸಿದ ಸರಕಾರ

03:33 PM May 20, 2024 | Team Udayavani |

ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರ ಮೇ 20ಕ್ಕೆ ಒಂದು ವರ್ಷ ಪೂರೈಸುತ್ತಿದ್ದು, ಚೊಚ್ಚಲ ವರ್ಷವನ್ನು ಪೂರೈಸಿದ ಹರ್ಷದಲ್ಲಿರುವ ಸರಕಾರಕ್ಕೆ ವರ್ಷಾಚರಣೆಯ ಸಂಭ್ರಮ ಮಾತ್ರ ಇಲ್ಲ. ಸರಕಾರದ ಸಡಗರಕ್ಕೆ ಚುನಾವಣ ನೀತಿ ಸಂಹಿತೆ ಅಡ್ಡಿಯಾಗಿದೆ. ಆದರೆ ಈ ಒಂದು ವರ್ಷದಲ್ಲಿ ಹತ್ತಾರು ಸವಾಲುಗಳ ಮೆಟ್ಟಿಲುಗಳನ್ನು ಮೆಟ್ಟಿ ನೂರಾರು ಸಾಧನೆಯ ಶಿಖರವನ್ನೇರಿರುವ ಸರಕಾರ, ಅಷ್ಟೇ ವಿವಾದಗಳಿಗೂ ಗುರಿಯಾಗಿದೆ. ವರ್ಷ ತುಂಬುವುದರೊಳಗೇ ರಾಜ್ಯಸಭೆ, ಲೋಕಸಭೆ, ವಿಧಾನ ಪರಿಷತ್‌ಗಳ ಚುನಾವಣೆಗಳನ್ನೂ ಎದುರಿಸುವಂತಾಗಿದ್ದು, ಮತ್ತಷ್ಟು ಚುನಾವಣೆಗಳು ಸಾಲುಗಟ್ಟಿ ನಿಂತಿವೆ. ಸವಾಲುಗಳ ಸರದಿಯೂ ಇದೆ.

Advertisement

ಅಧಿಕಾರಕ್ಕೆ ಬಂದ ಕೂಡಲೇ “ಪಂಚ ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸಲು ಕಸರತ್ತು ನಡೆಸಿದ ಸರಕಾರ, 8 ತಿಂಗಳಲ್ಲಿ ಅಷ್ಟೂ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಗ್ಯಾರಂಟಿಗಳಿಂದ ಜನರೂ ತೃಪ್ತರಾಗಿದ್ದಾರೆಂದು ಸರಕಾರ ಬೆನ್ನು ತಟ್ಟಿಕೊಂಡಿದೆ. ಆದರೆ ನುಡಿದಂತೆ ನಡೆದಿಲ್ಲ, ಎಷ್ಟೋ ಫ‌ಲಾನುಭವಿಗಳಿಗೆ ತಲುಪುತ್ತಿಲ್ಲ ಎನ್ನುವ ಆರೋಪಗಳೂ ಇವೆ. ಅಲ್ಲದೆ, ಗ್ಯಾರಂಟಿಗಳಿಗೆ ಹಣ ಹೊಂದಿಸುವುದರಲ್ಲೇ ವ್ಯಸ್ತವಾಗಿರುವ ಸರಕಾರ, ಅಭಿವೃದ್ಧಿಯತ್ತ ಚಿತ್ತ ಹರಿಸುತಿಲ್ಲ ಎನ್ನುವ ಗುರುತರ ಆಪಾದನೆಯನ್ನೂ ವಿಪಕ್ಷಗಳು ಹೊರಿಸಿವೆ.

ಇದೆಲ್ಲದರ ಮಧ್ಯೆ ಆರಂಭದಲ್ಲಿ ವಿಪಕ್ಷ ನಾಯಕರಿಲ್ಲದೆ, ದಿನ ದೂಡಿಕೊಂಡು ಬಂದ ಸರ್ಕಾರ ಸ್ವಪಕ್ಷೀಯರೇ ತಿವಿದದ್ದು ಜಾಸ್ತಿ. ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎನ್ನುವ ಬೇಗುದಿಯನ್ನು ಬಹಿರಂಗವಾಗಿ ಹೊರಗೆಡವಿ ಸರಕಾರ ಇಕ್ಕಟ್ಟಿಗೆ ಸಿಲುಕಿತ್ತು. ಕೊನೆಗೆ 35 ಸಾವಿರ ಕೋಟಿ ರೂ. ಬಂಡವಾಳ ವೆಚ್ಚ ಮೀಸಲಿಟ್ಟಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತೊಡಗಿಸುವ ಮೂಲಕ ಜನಪರ ಕಲ್ಯಾಣ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳೆರಡನ್ನೂ ಸರಿದೂಗಿಸುವ ಕಾಯಕಕ್ಕೆ ಕೈ ಹಾಕಿದೆ. ಪ್ರಸ್ತುತ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿ ಸರಕಾರದ ವಿರುದ್ದ ತಿರುಗಿ ಬಿದ್ದಿವೆ. ಅದೇನೇ ಇದ್ದರೂ ಪಂಚಗ್ಯಾರಂಟಿಗಳನ್ನೇ ದೇಶಕ್ಕೆ ಮಾದರಿಯಾಗಿಸಲು ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿಗಳ ಘೋಷಣೆ ಮೂಲಕ ದೇಶದ ಗಮನವನ್ನು ಕರ್ನಾಟಕದತ್ತ ಸೆಳೆಯಲೂ ದಾಪುಗಾಲು ಇಟ್ಟಿದೆ.

ಕೇಂದ್ರ ನಿಧಿ ತರಲು ಯಶಸ್ವಿ

ಕೇಂದ್ರ ಸರಕಾರದಿಂದ ತೆರಿಗೆ ಪಾಲು ಸಿಗುತ್ತಿಲ್ಲ ಎಂದು “ಕರ ಸಮರ” ನಡೆಸಿದ ರಾಜ್ಯ ಸರಕಾರ, ಅಧಿವೇಶನಕ್ಕೆ ನಿರ್ಣಯ ಅನುಮೋದಿಸಿದ್ದೂ ಅಲ್ಲದೆ, ಇಡೀ ಸರಕಾರವೇ ದಿಲ್ಲಿಗೆ ತೆರಳಿ ಪ್ರತಿಭಟನೆ ನಡೆಸಿತ್ತು. ಅಷ್ಟೇ ಅಲ್ಲದೆ, 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 18,171 ಕೋಟಿ ರೂ.ಗಳ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿತ್ತು. ಎನ್‌ಡಿಆರ್‌ಎಫ್ ನಿಧಿಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಕೊನೆಗೆ ಕಾನೂನು ಹೋರಾಟದಲ್ಲಿ ಜಯ ಗಳಿಸಿ, 3,454 ಕೋಟಿ ರೂ.ಗಳನ್ನು ರಾಜ್ಯಕ್ಕೆ ತರುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಮುನ್ನ ಸರಕಾರವೇ ತನ್ನ ಬೊಕ್ಕಸದಿಂದ ರೈತರಿಗೆ ಬರ ಪರಿಹಾರವಾಗಿ 2,000 ರೂ. ನೀಡಿತ್ತು.

Advertisement

ಗ್ಯಾರಂಟಿಗಳೇ ಗಟ್ಟಿ

2023ರ ಮೇ 20ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಮೊದಲ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಗೂ ಮುನ್ನ ಘೋಷಿಸಿದ್ದ5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ಪಡೆದುಕೊಂಡರು. ಸಂಪುಟ ರಚನೆಯಾಗಿ ಖಾತೆ ಹಂಚಿಕೆ ಆಗುತ್ತಿದ್ದಂತೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಮುಂದಾದರು. ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ “ಶಕ್ತಿ’ ಯೋಜನೆಗೆ ಜೂ.11 ರಂದು ಚಾಲನೆ ಕೊಟ್ಟರು. ಇದುವರೆಗೆ 210.29 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, 5,096 ಕೋಟಿ ರೂ. ಮೌಲ್ಯದ ಉಚಿತ ಟಿಕೆಟ್‌ ವಿತರಣೆಯಾಗಿದ್ದು, ಸಾರಿಗೆ ನಿಗಮಗಳಿಗೆ ಈ ಮೊತ್ತವನ್ನು ಸರಕಾರ ಭರಿಸುತ್ತಿದೆ.

ಜನರ ಮನೆ-ಮನ ಬೆಳಗಿದ ಸರಕಾರ

ಶಕ್ತಿ ಯೋಜನೆಯ ಬೆನ್ನಲ್ಲೇ “ಗೃಹಜ್ಯೋತಿ’ ಯೋಜನೆ ಜಾರಿಗೆ ತರುವ ಮೂಲಕ ಮನೆ ಬೆಳಗಿದ ಸರಕಾರ, 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಕೊಡುವ ಸಂಕಲ್ಪವನ್ನು ಈಡೇರಿಸಿತ್ತು. ಹಿಂದಿನ ವರ್ಷದ ಸರಾಸರಿ ಬಳಕೆ ಪ್ರಮಾಣ ಆಧರಿಸಿ, ಹೆಚ್ಚುವರಿ ವಿದ್ಯುತ್‌ ಬಳಕೆಗೆ ಅವಕಾಶ ಮಾಡಿಕೊಟ್ಟಿತ್ತು. 1.60 ಕೋಟಿ ಫ‌ಲಾನುಭವಿಗಳಿಗೆ ಇದರ ಪ್ರಯೋಜನ ಸಿಗುತ್ತಿದೆ. ಇದಕ್ಕಾಗಿ ಸರಿಸುಮಾರು 5 ಸಾವಿರ ಕೋಟಿ ರೂ. ಸರಕಾರ ಖರ್ಚು ಮಾಡುತ್ತಿದೆ

5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲಿಗೆ ಹಣ

ಹಸಿವು ಮುಕ್ತ ಕರ್ನಾಟಕದ ಕಲ್ಪನೆಯೊಂದಿಗೆ ಜಾರಿಗೊಳಿಸಬೇಕಿದ್ದ “ಅನ್ನಭಾಗ್ಯ’ ಯೋಜನೆಗೆ ಹೆಚ್ಚುವರಿ ಅಕ್ಕಿ ಸಿಗದೇ ಇದ್ದರಿಂದ ತಲಾ 170 ರೂ.ಗಳಂತೆ 4 ಕೋಟಿಗೂ ಅಧಿಕ ಫ‌ಲಾನುಭವಿಗಳಿಗೆ ಹಣ ಜಮೆ ಮಾಡುತ್ತಿದೆ.

ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯದ “ಗ್ಯಾರಂಟಿ’

ಇನ್ನು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೊಳಿಸಿದ “ಗೃಹಲಕ್ಷ್ಮೀ’ ಯೋಜನೆಗೆ 1.17 ಕೋಟಿ ಅರ್ಹ ಮಹಿಳೆ ಯರು ನೋಂದಣಿ ಮಾಡಿಕೊಂಡಿದ್ದು, ತಲಾ 2,000 ರೂ.ಗಳನ್ನು ಪ್ರತೀ ತಿಂಗಳೂ ತಲುಪಿಸಲಾಗುತ್ತಿದೆ.

ನಿರುದ್ಯೋಗಿ ಯುವ ಜನತೆಗೆ “ನಿಧಿ’ ಲಾಭ

ಯುವನಿಧಿ ಯೋಜನೆಗೆ ಅಂದಾಜು 1.40 ಲಕ್ಷ ಡಿಪ್ಲೊಮಾ ಮತ್ತು ಪದವೀಧರರು ನೋಂದಾಯಿಸಿ ಕೊಂಡಿದ್ದು, ಕ್ರಮವಾಗಿ 1,500 ರೂ. ಹಾಗೂ 3,000 ರೂ.ಗಳ ನೆರವನ್ನು ನೀಡಲಿದೆಯಲ್ಲದೆ, ಯುವನಿಧಿ+ ಮೂಲಕ 25 ಸಾವಿರ ಯುವಕರಿಗೆ ವಿಷಯಾಧಾರಿತ ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ನೀಡಲೂ ನಿರ್ಧರಿಸಿದೆ. ಒಟ್ಟಾರೆ 52 ಸಾವಿರ ಕೋಟಿ ರೂ.ಗಳನ್ನು ಐದು ಗ್ಯಾರಂಟಿಗಳಿಗಾಗಿ ವಿನಿಯೋಗಿಸುತ್ತಿರುವ ಸರಕಾರ, ರಾಜ್ಯದ 4.60 ಕೋಟಿ ಜನರಿಗೆ ಒಂದಿಲ್ಲೊಂದು ಯೋಜನೆಗಳ ಫ‌ಲ ಸಿಗುತ್ತಿದೆ ಎನ್ನುತ್ತದೆ.

ಸರಕಾರದ ಮುಂದಿರುವ ಸವಾಲುಗಳು

ಬೆಲೆಯೇರಿಕೆಯ ಬಿಸಿ

ಐದು ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಹಾಲಿನ ದರ, ವಿದ್ಯುತ್‌ ದರ, ಮದ್ಯದ ದರ, ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳನ್ನು ರಾಜ್ಯ ಸರಕಾರ ಹೆಚ್ಚಳ ಮಾಡಿದೆ. ಕಳೆದ ಬಾರಿ ತೆರಿಗೆ ಸಂಗ್ರಹಣೆಯ ಗುರಿ ಮುಟ್ಟದ ಸರಕಾರ, ಈ ಬಾರಿ ಅವಾಸ್ತವಿಕ ಗುರಿಯನ್ನು ಕೊಟ್ಟಿದೆ ಎಂಬುದು ವಿಪಕ್ಷಗಳ ಗಂಭೀರ ಆರೋಪವಾಗಿದೆ.

ಜಾತಿ ಗಣತಿ ವರದಿ ಎಂಬ ಜೇನುಗೂಡು

ಕಳೆದ ಎರಡು ಚುನಾವಣೆಗಳಲ್ಲಿ ಮೀಸಲಾತಿ ವಿಚಾರವೇ ಆಳುವ ಪಕ್ಷಗಳಿಗೆ ಮುಳುವಾಗಿತ್ತು. ಕಾಂತರಾಜ್‌ ಬಳಿಕ ಡಾ| ಜಯಪ್ರಕಾಶ್‌ ಶೆಟ್ಟಿ ನೇತೃತ್ವದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಪಡೆದಿರುವ ಸರಕಾರ, ಹಿಂದೆ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಒಪ್ಪಿಕೊಳ್ಳುತ್ತದೆಯೇ ಎನ್ನುವುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಒಪ್ಪಿಕೊಂಡರೆ ಪ್ರಬಲ ಜಾತಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದ ಪರಿಸ್ಥಿತಿ ಇದ್ದು, ಒಪ್ಪಿಕೊಳ್ಳದಿದ್ದರೂ ಕಷ್ಟವಿದೆ. ಈ ಸವಾಲನ್ನು ಸರಕಾರ ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಾನೂನು ಸುವ್ಯವಸ್ಥೆ

ಈಚೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಅಸ್ತ್ರವನ್ನು ವಿಪಕ್ಷಗಳು ಬಳಸುತ್ತಿವೆ. ಹುಬ್ಬಳ್ಳಿಯ ನೇಹಾ, ಅಂಜಲಿ ಹತ್ಯೆ ಪ್ರಕರಣಗಳು ಸರಕಾರದ ನಿದ್ದೆಗೆಡಿಸಿವೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದು, ಆರೋಪಿಗಳಿಗೆ ಜಾಮೀನಿನ ಬಳಿಕ ಹೂಮಾಲೆ ಹಾಕಿ ಸ್ವಾಗತಿಸಿದ್ದು, ಕೋಲಾರದ ಕ್ಲಾಕ್‌ಟವರ್‌ ಬಳಿಯೂ ರಾರಾಜಿಸಿದ್ದ ಖಡ್ಗ, ಹಸುರು ಧ್ವಜ, ಉರ್ದು ಬರಹ ಕಾಣಿಸಿದ್ದು, ಶಿವಮೊಗ್ಗದಲ್ಲಿ ಝಳಪಿಸಿದ್ದ ಕತ್ತಿ, ಔರಂಗಜೇಬ್‌, ಟಿಪ್ಪು ಪ್ರತಿಕೃತಿ ಪ್ರದರ್ಶನದಿಂದ ಗಲಭೆಗೆ ತಿರುಗಿದ ಪರಿಸ್ಥಿತಿ, ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ್ದಕ್ಕೆ ಗಲಭೆ, ಬೆಂಗಳೂರಿನ ನಗರ್ತ ಪೇಟೆಯ ಮೊಬೈಲ್‌ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಗಲಾಟೆಗಳನ್ನು ವಿಪಕ್ಷಗಳು ಸದಾ ಬಳಸಿಕೊಂಡು ಬಂದವು.

ಶಿಕಣ ವ್ಯವಸೆಯ ಗೊಂದಲ ಬಗೆಹರಿಸುವ ಸವಾಲು

ಶಿಕ್ಷಣ ವ್ಯವಸ್ಥೆಯ ಗೊಂದಲವನ್ನು ಬಗೆಹರಿಸುವುದು ಸರಕಾರದ ಮುಂದಿರುವ ದೊಡ್ಡಸವಾಲು. ಸಿಇಟಿ ಪರೀಕ್ಷೆಯಲ್ಲಿ ಪಠ್ಯ ಹೊರತಾದ ಪ್ರಶ್ನೆಗಳು ನುಸುಳಿ ಗದ್ದಲ ಉಂಟಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಗೊಂದಲಗಳು ಸೃಷ್ಟಿಯಾಗಿದ್ದು, ಗ್ರೇಸ್‌ ಮಾರ್ಕ್ಸ್ ನೀಡಬೇಕಾಯಿತು. ಜತೆಗೆ ಎಸ್‌ಎಸ್‌ ಎಲ್‌ಸಿಯಲ್ಲಿ ತ್ರಿವಳಿ ಪರೀಕ್ಷೆಗಳು ಗೊಂದಲಕ್ಕೆ ಕಾರಣವಾಗಿದೆ. ಆರಂಭದಲ್ಲೆ  ರಾಷ್ಟ್ರೀಯ ಶಿಕ್ಷಣ ನೀತಿ ಒಪ್ಪದೆ ಕೇಂದ್ರ ಸರಕಾರದೊಂದಿಗೆ ಸಂಘರ್ಷಕ್ಕಿಳಿದ ಸರಕಾರ, ರಾಜ್ಯ ಪಠ್ಯಕ್ರಮವೇ ಇಲ್ಲದೆ ಎನ್‌ಇಪಿ ರದ್ದುಪಡಿಸಲು ತೀರ್ಮಾನ ಮಾಡಿದ್ದೂ ವಿವಾದವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next