ಕಳೆದ ವರ್ಷ ಕೊರೊನಾ ಮಹಾಮಾರಿ ಭಯ, ಆತಂಕ ಜೋರಾಗಿದ್ದ ಸಂದರ್ಭದಲ್ಲಿ ತೆರೆಕಂಡ “ಲಂಕೆ’ ಸಿನಿಮಾ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಇತ್ತೀಚೆಗೆ ಚಿತ್ರತಂಡ, ಅದ್ಧೂರಿ ಸಮಾರಂಭವನ್ನು ಹಮ್ಮಿಕೊಂಡಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ನಿರ್ಮಾಪಕ ಟಿ. ಪಿ ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮೀ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಟ ಯೋಗಿ, “ನನ್ನ ಮನೆಯಲ್ಲಿ 50, 100, 150 ದಿನಗಳ ಫಲಕಗಳಿತ್ತು. ಆದರೆ ಇದೇ ಮೊದಲ ಬಾರಿಗೆ 365 ದಿನಗಳ ಫಲಕ ನನ್ನ ಕೈ ಸೇರಿದೆ. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಸಾದ್‌ಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ’ ಎಂದರು.
ಇದನ್ನೂ ಓದಿ:ಭೀಕರ ಅಪಘಾತ : ಬೈಕ್ ಸವಾರನನ್ನು 100 ಮೀ. ದೂರ ಎಳೆದೊಯ್ದ ಐಷಾರಾಮಿ ಕಾರು
ನಿರ್ದೇಶಕ ರಾಮ್ ಪ್ರಸಾದ್ ಮಾತನಾಡಿ, “ನಿಜಕ್ಕೂ ಈ ಸಂದರ್ಭದಲ್ಲಿ ನಮ್ಮ ಸಿನಿಮಾಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲಕ್ಕೆ ಧನ್ಯವಾದ ಹೇಳಬೇಕು. ಇದು ಇಡೀ ಚಿತ್ರತಂಡದ ಗೆಲುವು. ನಾಯಕ ಯೋಗಿ ಸಹೋದರನಂತೆ ನನಗೆ ಸಹಕಾರ ನೀಡಿದರು. ಸಿನಿಮಾ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಪ್ರಮುಖ ಕಾರಣ. ಈ ಗೆಲುವನ್ನು ಸಿನಿಮಾದಲ್ಲಿ ನಟಿಸಿರುವ ಸಂಚಾರಿ ವಿಜಯ್ ಅವರಿಗೆ ಅರ್ಪಿಸುತ್ತೇವೆ. ಶೀಘ್ರದಲ್ಲೇ ಹೊಸ ಸಿನಿಮಾ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ’ ಎಂದರು.
ನಾಯಕಿಯರಾದ ಕೃಷಿ ತಾಪಂಡ, ಎಸ್ತಾರ್ ನರೋನ್ಹ, ವಿತರಕ ಮಾರ್ಸ್ ಸುರೇಶ್, ನಟ ಡ್ಯಾನಿಯಲ್ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಲಂಕೆ’ಯ ಗೆಲುವಿನ ಬಗ್ಗೆ ಮಾತನಾಡಿದರು