Advertisement

ದೇಶದೆಲ್ಲೆಡೆ ಉಗ್ರರ ವಿರುದ್ಧ ಒಂದೇ ಧ್ವನಿ

12:30 AM Feb 17, 2019 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದ 40ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡ ಭಾರತವು ಶೋಕ ಸಾಗರದಲ್ಲಿ ಮುಳುಗಿರುವಂತೆಯೇ, ಇಂಥದ್ದೊಂದು ಪಾಪ ಕೃತ್ಯಕ್ಕೆ ಕಾರಣವಾದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕೆಂಬ ಕಿಚ್ಚು ಎಲ್ಲರೆದೆಯಲ್ಲಿ ಹೊತ್ತಿಕೊಂಡಿದೆ. ಶನಿವಾರ ಕೇಂದ್ರ ಸರಕಾರ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಇದಕ್ಕೆ ಒಮ್ಮತ ವ್ಯಕ್ತ ಪಡಿಸಿದ್ದು, ದೇಶದ ಜನರ ಆಶಯಕ್ಕೆ ಸಾಥ್‌ ನೀಡುವ ಮೂಲಕ ಇಡೀ ದೇಶದ ಧ್ವನಿಯೂ ಇದುವೇ ಆಗಿದೆ ಎಂಬುದನ್ನು ಸಾರಿವೆ.

Advertisement

ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮರೆತು, ದೇಶದ ಭದ್ರತೆಗೆ ಸೇನೆಯ ತ್ಯಾಗ ಮತ್ತು ಬಲಿದಾನಗಳನ್ನು ಕೊಂಡಾಡಿವೆ. ಕೃತ್ಯವನ್ನು ಖಂಡಿಸಿ ಸಭೆಯಲ್ಲಿ ನಿಲುವಳಿ ಮಂಡಿಸಲಾಗಿದ್ದು, ಗಡಿಯಲ್ಲಿ ಉಗ್ರಗಾಮಿ ಚಟುವಟಿಕೆಯನ್ನು ನಿರ್ಮೂಲನೆ ಮಾಡುವ ಶಪಥ ಮಾಡಲಾಗಿದೆ. ಆದರೆ ನಿಲುವಳಿಯಲ್ಲಿ ಪಾಕಿಸ್ಥಾನದ ಹೆಸರನ್ನು ಎಲ್ಲಿಯೂ ಉಲ್ಲೇಖೀಸಿಲ್ಲ.

ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಗುಲಾಮ್‌ ನಬಿ ಆಜಾದ್‌, ಆನಂದ ಶರ್ಮಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಟಿಎಂಸಿಯ ಸುದೀಪ್‌ ಬಂದೋಪಾಧ್ಯಾಯ ಮತ್ತು ಡೆರೆಕ್‌ ಒಬ್ರಿಯಾನ್‌, ಶಿವಸೇನೆಯ ಸಂಜಯ್‌ ರಾವತ್‌, ಟಿಆರ್‌ಎಸ್‌ನ ಜಿತೇಂದ್ರ ರೆಡ್ಡಿ, ಸಿಪಿಐಯ ಡಿ.ರಾಜಾ, ನ್ಯಾಶನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಎಲ್‌ಜೆಪಿಯ ರಾಮ್‌ ವಿಲಾಸ್‌ ಪಾಸ್ವಾನ್‌ ಹಾಗೂ ಇತರರು ಇದ್ದರು. ಶನಿವಾರ ಸುಮಾರು ಎರಡು ತಾಸುಗಳವರೆಗೆ ಸಭೆ ನಡೆದಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿ ಹಾಗೂ ಸರಕಾರ ಅನಂತರ ಕೈಗೊಂಡ ಕ್ರಮಗಳನ್ನು ಪಕ್ಷಗಳಿಗೆ ಈ ವೇಳೆ ವಿವರಿಸಲಾಗಿದೆ. 

ಗಡಿಯಲ್ಲಿ ಬಾಂಬ್‌ ಸ್ಫೋಟ: ಸೇನಾಧಿಕಾರಿ ಹುತಾತ್ಮ
ಜಮ್ಮು:
 ಶನಿವಾರ ಮತ್ತೆ ಗಡಿಯಲ್ಲಿ ಬಾಂಬ್‌ ಸ್ಫೋಟ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸುಧಾರಿತ ಸ್ಫೋಟಕಗಳನ್ನು ಬಳಸಿ ಸ್ಫೋಟ ನಡೆಸಿದ್ದು, ಈ ದಾಳಿಯಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ. ಇದೇ ವೇಳೆ, ರಜೌರಿಯ ನೌಶೆರಾ ವಲಯದಲ್ಲಿ ಪಾಕ್‌ ಪಡೆ ಕದನ ವಿರಾಮ ಉಲ್ಲಂ ಸಿ, ಗುಂಡಿನ ದಾಳಿ ನಡೆಸಿದ ಪರಿಣಾಮ ಯೋಧರೊಬ್ಬರು ಗಾಯಗೊಂಡಿದ್ದಾರೆ. ನಮ್ಮ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಸೇನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next