Advertisement

ಒಂದು ತರಕಾರಿ “ಬಾತ್‌’

06:00 AM Jun 27, 2018 | |

ಮಹಿಳೆಗೂ, ಹಸಿರು ತರಕಾರಿಗೂ ಎಲ್ಲಿಲ್ಲದ ನಂಟು. ಒಂದೊಂದು ತರಕಾರಿ ಹೆಸರು ಹೇಳಿದ್ರೆ, ಹತ್ತಾರು ಕತೆಗಳನ್ನು ತಟಪಟನೆ ಹೇಳಬಲ್ಲ ಶಕ್ತಿ ಮಹಿಳೆಗೆ ಮಾತ್ರ ಸಿದ್ಧಿಸಿರುತ್ತೆ. ತಾಜಾ ತರಕಾರಿ ಮೇಲೆ ಒಂದು ತಾಜಾ ಲಹರಿ ಇದು… 

Advertisement

ತರಕಾರಿಗಳೇ, ನೀವೆಲ್ಲ ಒಬ್ಬೊಬ್ಬರಾಗಿ ನನ್ನ ತಟ್ಟೆಯಿಂದ ಹೊರಗೆ ಬನ್ನಿ- ಇದು ನಾನು ಸಣ್ಣವಳಿದ್ದಾಗ ಪ್ರತಿನಿತ್ಯ ಊಟದ ಮೊದಲು ಹೇಳುತ್ತಿದ್ದ ಮಾತುಗಳಂತೆ! ಎಲ್ಲ ತರಕಾರಿ ಹೋಳುಗಳನ್ನು ತಟ್ಟೆಯಿಂದ ಹೊರಗಿಟ್ಟ ಮೇಲೆಯೇ ನಾನು ಊಟ ಮಾಡಲು ಶುರುಮಾಡುತ್ತಿದ್ದುದಂತೆ. ಅಮ್ಮ ಇದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ, ನನ್ನ ಮಕ್ಕಳಿಗೆ ನಾನು ತರಕಾರಿಗಳ ಮಹತ್ವವನ್ನು ಹೇಳುವಾಗ, ತರಕಾರಿ ಪಲ್ಯವನ್ನು ತಿನ್ನಲು ಅವರನ್ನು ಪುಸಲಾಯಿಸುವಾಗ ಅಮ್ಮ ಹಳೆಯದನ್ನು ನೆನಪಿಸಿಕೊಂಡು ತುಟಿಯಂಚಿನಲ್ಲೇ ನಗುತ್ತಿರುತ್ತಾರೆ.

   ಈ ತರಕಾರಿ ಎಂದರೆ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಅಲರ್ಜಿಯೇ. ಆದರೆ, ಇದರ ಅಪಾರ ಮಹಿಮೆಯನ್ನರಿತ ತಾಯಂದಿರು ತಮ್ಮ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸಲು ಇಲ್ಲದ ಹರಸಾಹಸ ನಡೆಸಿಯೇ ಇರುತ್ತಾರೆ. “ತರಕಾರಿ ತಿನ್ನೋದೇ ಇಲ್ಲ ಡಾಕ್ಟ್ರೇ’ ಇದು ವೈದ್ಯರ ಬಳಿ ಬಹುತೇಕ ತಾಯಂದಿರ ದೂರು. ಡಾಕ್ಟ್ರು ಜೋರು ಮಾಡಿ ಹೇಳಿದ್ರಾದರೂ ಈ ಮಕ್ಕಳು ತರಕಾರಿ ತಿನ್ನುತ್ತಾವೆಯೇನೋ ಎಂಬ ಆಸೆ ತಾಯಂದಿರಿಗೆ!

  ನನಗಿನ್ನೂ ನೆನಪಿದೆ, ಆಗ ವರ್ಷದ ಮಗನಿಗೆ ಊಟ ಮಾಡಿಸುವುದೇ ದಿನದ ಮುಖ್ಯ ಕಾರ್ಯಕ್ರಮ. ಬೆಳಗ್ಗೆಯೇ ಅಂದು, ಮಗರಾಯನಿಗೆ ಮಧ್ಯಾಹ್ನದ ಊಟಕ್ಕೆ ಯಾವ ತರಕಾರಿ ಎಂದು ನಿರ್ಧರಿಸಿಯಾಗಿರುತ್ತಿತ್ತು. ಒಂದೊಂದು ದಿನ ಒಂದೊಂದು ತರಕಾರಿ! ಆಲೂಗಡ್ಡೆ, ಕ್ಯಾರೇಟ್‌, ಪಾಲಕ್‌ ಸೊಪ್ಪು… ಹೀಗೆ ದಿನವೂ ಒಂದು ತರಕಾರಿಯನ್ನು ಸ್ವಲ್ಪವೇ ತೆಗೆದುಕೊಂಡು, ಸ್ವಲ್ಪ ಬೇಳೆ, ಒಂದು ಚಿಟಕಿ ಅರಿಶಿನ, ಒಂದು ಬೆಳ್ಳುಳ್ಳಿ ಎಸಳು ಹಾಗೂ ಒಂದೆರಡು ಜೀರಿಗೆಯೊಂದಿಗೆ ಕುಕ್ಕರ್‌ನಲ್ಲಿ ಬೇಯಿಸಿ, ಬಿಸಿ ಅನ್ನ, ತುಪ್ಪ, ಉಪ್ಪಿನೊಂದಿಗೆ ಚೆನ್ನಾಗಿ ಮಸೆದು ಮಗರಾಯನಿಗೆ ತಿನ್ನಿಸಿದರೆ ಅಂದಿನ ದಿನ ಸಾರ್ಥಕವಾದಂತೆಯೇ! ಮಗ ನರ್ಸರಿ ಮೆಟ್ಟಿಲು ಹತ್ತುವವರೆಗೂ ಈ ಬಗೆಯ ವಿಶೇಷ ಭೋಜನ ಕೊಟ್ಟಿದ್ದೇ ಕೊಟ್ಟಿದ್ದು! ದೊಡ್ಡವರಾದ ಮೇಲೂ ಸ್ವಲ್ಪ ಜನರಿಗೆ ಕೆಲ ತರಕಾರಿಗಳೆಂದರೆ ಅಷ್ಟಕ್ಕಷ್ಟೆ. ಹಾಗಾಗಿಯೇ, ಕೆಲವರ ಅಡುಗೆ ಮನೆಯಲ್ಲಿ ಒಂದಿಷ್ಟು ತರಕಾರಿಗಳಿಗೆ ಮಾತ್ರವೇ ಪ್ರವೇಶ.

  ಒಮ್ಮೆ, ಊಟದ ಸಮಯಕ್ಕೆ ಮನೆಗೆ ಬಂದ ನಾದಿನಿಗೆ ಊಟ ಬಡಿಸಿದ್ದೆ. ನಾನು ತಯಾರಿಸಿದ ಬೀಟ್‌ರೂಟ್‌ ಪಲ್ಯದ ರುಚಿ ಅವಳಿಗೆ ಬಹಳ ಹಿಡಿಸಿತ್ತು. ಸರಿ, ಊಟವಾದ ನಂತರ ಅದರ ರೆಸಿಪಿ ಬಗ್ಗೆ ಡಿಸ್ಕಶನ್‌ ಶುರು ಆಯ್ತು. ಅರೆರೆ! ರೆಸಿಪಿ ಇಬ್ಬರದ್ದೂ ಒಂದೇ. ಆದ್ರೆ ರುಚಿ ಯಾಕೆ ಬೇರೆ? ನಂತರ ಅವಳೇ ವಿಶ್ಲೇಷಿಸಿ ಹೇಳಿದ್ದಳು, “ನಾನು ಬೀಟ್‌ರೂಟ್‌ ಅನ್ನು ತುಂಬಾ ಚಿಕ್ಕದಾಗಿ ತುಂಡರಿಸಿದ್ದೇ ಆ ರುಚಿಗೆ ಕಾರಣ’ ಎಂದು. ಹೀಗೆ ತರಕಾರಿ ಹೆಚ್ಚುವುದರ ಮೇಲೆ, ಬೇಯಿಸುವ ರೀತಿಯ ಮೇಲೂ ಪದಾರ್ಥಗಳ ರುಚಿ ಅವಲಂಬಿತವಾಗಿರುತ್ತೆ. ಆದರೆ, ಇದೆಲ್ಲ ಅಡುಗೆಯ ಅನುಭವದಲ್ಲಿಯೇ ಗೊತ್ತಾಗುವಂಥದ್ದು!

Advertisement

  ಅಡುಗೆಯ ಅನುಭವ ಎಂದೊಡನೆಯೇ ನೆನಪಾಗುತ್ತೆ. ನಾನು ಮದುವೆಯಾದ ಹೊಸತರಲ್ಲಿ ಅತ್ತೆಯವರಿಗೆ ನೆರವಾಗಲು ಹೋದ ಸಂದರ್ಭವದು, ಅತ್ತೆ ಹೇಳಿದರೆಂದು ಅವಸರ ಅವಸರವಾಗಿ ಬೀನ್ಸ್‌ ಕಟ್‌ ಮಾಡಿ ಬೇಯಿಸಲು ಸ್ಟೌ ಮೇಲೆ ಇಟ್ಟಿದ್ದೆ. ಒಳಬಂದ ಅತ್ತೆಯವರು, “ಬೀನ್ಸ್ ತೊಳೆದಿದ್ಯಾ?’ ಎಂದಾಗಲೇ ಅನನುಭವಿ ತಲೆಗೆ ತಪ್ಪಿನ ಅರಿವಾದದ್ದು. ಹೆಚ್ಚಿದ ಬೀನ್ಸ್ ಅನ್ನು ಪಾತ್ರೆಯ ತುಂಬಾ ನೀರು ಹಾಕಿ ಬೇಯಿಸಲು ಇಟ್ಟಿದ್ದಕ್ಕೂ ಅತ್ತೆ ಕಮೆಂಟ್‌ ಮಾಡಿದ್ದರು, “ಇಷ್ಟೊಂದು ನೀರು ಹಾಕಿ ಬೇಯಿಸಿದ್ರೆ ಅದರಲ್ಲಿರೋ ಸತ್ವವೆಲ್ಲಾ  ಹೋಗಿ ಬಿಡುತ್ತಮ್ಮ…’ ಅಬ್ಟಾ! ಅತ್ತೆಯವರ ವೈಜ್ಞಾನಿಕ ಜ್ಞಾನಕ್ಕೆ ತಲೆದೂಗಿದ್ದೆ!

  ಅಮ್ಮನೂ ಯಾರಿಗೇನು ಕಡಿಮೆಯಿಲ್ಲ, ಅಡುಗೆ ತಯಾರಿಯಲ್ಲಿ ಎಂದೂ ತರಕಾರಿಗಳ ಸಿಪ್ಪೆ ತೆಗೆಯಲು ಬಿಡುತ್ತಲೇ ಇರಲಿಲ್ಲ. “ಸಿಪ್ಪೆಯಲ್ಲೂ ಪೋಷಕಾಂಶಗಳಿರುತ್ತವೆ ಕಣೆ. ತರಕಾರಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿ ಹಾಕು ಸಾಕು’ ಎಂದು ಸೂಕ್ಷ್ಮವಾಗಿ ಗದರುತ್ತಿದ್ದರು. ಕ್ಷಣಮಾತ್ರದಲ್ಲಿ ಕೆಲ ತರಕಾರಿಗಳ ಸಿಪ್ಪೆ ಬಳಸಿ ರುಚಿಕರ ಚಟ್ನಿಯೊಂದನ್ನು ತಯಾರಿಸುವ ಅಮ್ಮನ ಕೈಚಳಕವೂ ನನ್ನನ್ನು ಬೆರಗಾಗಿಸುತ್ತಿತ್ತು.

  ಇನ್ನು ತರಕಾರಿ ಮಾರುವವರ ಪ್ರಸಂಗವೂ ಅಷ್ಟೇ ಚೆಂದ. ನಮ್ಮ ಬೀದಿಗೆ ಬರುವ ತರಕಾರಿ ಮಾರುವಾಕೆ, ಗಿರಾಕಿಗಳನ್ನು ಆಕರ್ಷಿಸಲು ನಾನಾ ಕಸರತ್ತು ನಡೆಸುತ್ತಾಳೆ. ಒಮ್ಮೆ ಆಕೆ, “ಅಮ್ಮ, ಮಲ್ಲಿಗೆ ಹೂವು ನೋಡಿ’ ಎಂದು ಕೂಗಿದ್ದನ್ನು ಕಂಡು ನಾನು, “ಹೂವು ತಂದಿದ್ದೀರಾ?’ ಎಂದಿ¨ªೆ. ಆಕೆ ನಗುತ್ತಾ, “ಮಲ್ಲಿಗೆಯಂಥ ಬೀನ್ಸ್ ನೋಡಿ ಅಮ್ಮ…’ ಎಂದಿದ್ದಳು. “ಈ ಹಾಗಲಕಾಯಿ ಅಂತೂ ನಿಮಗೆಂತಲೇ ತಂದಿದ್ದೇನೆ. ಆ ಬೀದೀಲಿ ಯಾರೋ ಕೇಳಿದ್ರೂ ಕೊಡಲಿಲ್ಲ ಅಮ್ಮಾ’ ಎನ್ನುತ್ತಾ ನಿಮ್ಮ ಉತ್ತರಕ್ಕೂ ಕಾಯದೇ ಅದನ್ನು ನಿಮ್ಮ ಚೀಲಕ್ಕೆ ಹಾಕಿಯೇ ಬಿಡುತ್ತಾಳೆ. ಈ ಗಡ್ಡೆಕೋಸು ತಗೋಳ್ರಮ್ಮಾ, ಸಕ್ಕರೆ ಕಾಯಿಲೆಗೆ ಬಾಳ ಒಳ್ಳೇದಂತೆ…’ ಎನ್ನುತ್ತಾ ಆ ಕ್ಷಣಕ್ಕೆ ಡಾಕ್ಟರ್‌ ಆಗಿ ಬಿಡುತ್ತಾಳೆ!

   ಕೈಗಾಡಿಯಲ್ಲಿ ಬಗೆ ಬಗೆಯ ತರಕಾರಿಗಳನ್ನು ಮಾರಲು ಬರುವ ಪುರುಷ ವ್ಯಾಪಾರಿಗಳೇನೂ ಕಡಿಮೆಯಿಲ್ಲ. ಗಿರಾಕಿಗಳನ್ನು ಆಕರ್ಷಿಸುವ ಅವರ ಕೌಶಲವನ್ನು ನೀವು ನೋಡಬೇಕು. ಮನೆ ಮುಂದೆ ಬರುತ್ತಲೂ ಆತ ಕೂಗುತ್ತಾನೆ, “ಅಮ್ಮ… ಬನ್ನಿ ಬನ್ನಿ.. ವಾಂಗೀಬಾತ್‌… ಕ್ಯಾರೇಟ್‌ ಹಲ್ವ… ಮಜ್ಜಿಗೆ ಹುಳಿ… ಅವರೇಕಾಯಿ ಉಪ್ಪಿಟ್ಟು… ಎಲ್ಲ ಇದೆ ಇವತ್ತು’. ನಾವು ಆ ಆಹಾರ ಪದಾರ್ಥಗಳ ಹೆಸರು ಕೇಳಿಯೇ ಬಾಯಲ್ಲಿ ನೀರು ಸುರಿಸುತ್ತಾ ಮನೆಯಿಂದ ಓಡೋಡಿ ಹೊರಗೆ ಬರಬೇಕು, ಹಾಗಿರುತ್ತದೆ ಅವನ ಧಾಟಿ. ನಾವೇನಾದರೂ ಬೆಂಡೆಕಾಯಿ, ಬೀನ್ಸ್ ಮೊದಲಾದ ತರಕಾರಿಯನ್ನು ಕೈಯಲ್ಲಿ ಹಿಡಿದು, “ಇದೇನ್ರಿ? ಇದು ಬಲಿತಿರೋ ಹಾಗಿದೆ’ ಅಂದ್ರೆ, “ಅಮ್ಮ, ನೀವು ಇವತ್ತು ತಗೊಂಡು ಸಾಂಬಾರ್‌ ಮಾಡಿ, ಚೆನ್ನಾಗಿಲ್ಲದಿದ್ರೆ ನಾಳೆ ಹಣ ವಾಪಸ್‌’ ಎನ್ನುವ ಆತನ ವಿಶ್ವಾಸದ ಮಾತುಗಳಿಗೆ ಮರುಳಾಗಿಯೇ ನಾವು ತರಕಾರಿಗಳನ್ನು ಖರೀದಿಸಬೇಕು.

  ಈ ತರಕಾರಿ ಯಾರನ್ನೂ ಕೈಬಿಡೋದಿಲ್ಲರಿ. ಕಿಡ್ನಿ ರೋಗಿಗಳಿಂದ ಹಿಡಿದು ಬಿ.ಪಿ. ಕಾಯಿಲೆಯವರಿಗೂ, ಸಕ್ಕರೆ ಕಾಯಿಲೆಯವರಿಂದ ಹಿಡಿದು ಕ್ಯಾನ್ಸರ್‌ ವರೆಗೂ ಈ ತರಕಾರಿ ಪಥ್ಯ ಮಾತ್ರ ಇರೋದಿಲ್ಲ; ಒಂದೆರಡನ್ನು ಹೊರತುಪಡಿಸಿ ಸಾಮಾನ್ಯವಾಗಿ ಯಾವ ತರಕಾರಿನಾದ್ರೂ ತಿನ್ರಿ ಅಂತಾನೇ ಎಲ್ಲ ಸ್ಪೆಷಲಿಸ್ಟ್‌ಗಳು ಹೇಳ್ಳೋದು. ನೀವು ಬೇಕಾದ್ರೆ, ಯಾವುದೇ ಚರ್ಮ ತಜ್ಞರ ಬಳಿ ಹೋಗಿ, ಅವರು ತಮ್ಮ ಔಷಧೋಪಚಾರದ ನಂತರ ಹಸಿ ತರಕಾರಿಗಳನ್ನು ಹೆಚ್ಚು ತಿನ್ನಿ, ಅದರಲ್ಲಿಯೂ ಹಸಿ ಕ್ಯಾರೇಟ್‌ ತಿನ್ನಿ ಅನ್ನೋ ಸಲಹೆ ಕೊಟ್ಟೇ ಕೊಡ್ತಾರೆ.

   ತರಕಾರಿ ಕಸದಿಂದ ರಸ ಮಾಡುವ ನನ್ನ ಚಿಕ್ಕಮ್ಮನ ಬಗ್ಗೆ ಹೇಳದಿದ್ದರೆ ನನ್ನ ತರಕಾರಿ ಪುರಾಣ ಅಪೂರ್ಣ ಅನ್ಸುತ್ತೆ. ಅಡುಗೆಯ ಬಳಿಕ ಉಳಿದ ತರಕಾರಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ಹಸಿ ಶುಂಠಿ ಸಿಪ್ಪೆ ಎಲ್ಲವನ್ನೂ ಚಿಕ್ಕಮ್ಮ ಒಂದು ವಿಶೇಷ ಮಣ್ಣಿನ ಮಡಕೆಯಲ್ಲಿ ಹಾಕುತ್ತಾಳೆ; ಅದಕ್ಕೆ ಸ್ವಲ್ಪ ಮಣ್ಣಿನ ಮಿಶ್ರಣವನ್ನು ಬೆರೆಸಿ ಸಾವಯವ ಗೊಬ್ಬರವನ್ನೂ ತಯಾರಿಸುತ್ತಾಳೆ! ಆ ಗೊಬ್ಬರ ಉಂಡ ಅವಳ ಮನೆಯ ಹೂದೋಟದ ಹೂವುಗಳನ್ನು ನೋಡುವುದೇ ಒಂದು ಸಂಭ್ರಮ! 

ಡಾ. ವಿನಯಾ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next