ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮಟ್ಟ ಸುಧಾರಣೆ ಮತ್ತು ಈ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆಗೆ ಅನುಗಣವಾಗಿ ಶಿಕ್ಷಕರನ್ನು ನೇಮಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗ ಶೈಕ್ಷಣಿಕವಾಗಿ ಹಿಂದುಳಿಯಲು ಶಿಕ್ಷಕ ಕೊರತೆಯೇ ಪ್ರಮುಖ ಕಾರಣವಾಗಿದೆ. ಸಾಕ್ಷರತಾ ಪ್ರಮಾಣದಲ್ಲೂ ಈ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಇವೆ. ಆದ್ದರಿಂದ ಮಕ್ಕಳು ಮತ್ತು ಶಿಕ್ಷಕರ ನಡುವಿನ ಅನುಪಾತವನ್ನು ಸರಿದೂಗಿಸುವುದು ಅವಶ್ಯವಾಗಿದೆ ಎಂದರು. ಬೆಂಗಳೂರು, ಮೈಸೂರು, ಮಂಗಳೂರು ಭಾಗದಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಅನುಪಾತ ತೀರ ಕಡಿಮೆ ಇದೆ.
ಹೀಗಾಗಿ ಮಕ್ಕಳ ಮೇಲೆ ಶಿಕ್ಷಕರ ಗಮನ ಹರಿಸಿ ಕಲಿಕೆಯಲ್ಲಿ ತೊಡಗಿಸಲು ಸಾಧ್ಯವಾಗುತ್ತಿದೆ. ಆದರೆ, ನಮ್ಮ ಭಾಗದಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಅನುಪಾತದಲ್ಲಿ ಸಾಕಷ್ಟು ಅಂತರ ಇದೆ. ಹೀಗಾಗಿ ಮಕ್ಕಳ ಕಲಿಕಾ ಮಟ್ಟದ ತುಂಬಾ ಕೆಳಮಟ್ಟದಲ್ಲಿ ಇದೆ ಎಂದರು. ಮಕ್ಕಳ-ಶಿಕ್ಷಕರ ಅನುಪಾತ (ಪಿಟಿಆರ್) ರಾಜ್ಯದ ಸರಾಸರಿ 24.43ರಷ್ಟು ಇದೆ. ಅಂದರೆ 24 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ಇದೇ ಹಾಸನ ಜಿಲ್ಲೆಯಲ್ಲಿ 12 ಮಕ್ಕಳು, ಚಿಕ್ಕಮಗಳೂರು ಜಿಲ್ಲೆಯಲ್ಲಿ 14 ಮಕ್ಕಳು, ತುಮಕೂರ ಜಿಲ್ಲೆಯಲ್ಲಿ 15 ಮಕ್ಕಳು, ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ 16 ಹಾಗೂ ಮಂಡ್ಯ ಜಿಲ್ಲೆಯಲ್ಲಿ 17 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ.
ಇದು ಸದ್ಯ ಕಾರ್ಯನಿತರ ಶಿಕ್ಷಕರನ್ನು ಪರಿಗಣಿಸಿರುವ ಅನುಪಾತವಾಗಿದ್ದು, ಮಂಜೂರಾತಿ ಹುದ್ದೆಗಳ ಅನುಪಾತ ನೋಡಿ ಇದರ ಸಂಖ್ಯೆ ಇನ್ನೂ ಕಡಿಮೆಯಾಗುತ್ತದೆ ಎಂದರು. ಅದೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 35ರಿಂದ 40ಕ್ಕಿಂತ ಹೆಚ್ಚು ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ 44 ಮಕ್ಕಳಿಗೆ ಒಬ್ಬ ಶಿಕ್ಷಕ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 36 ಮಕ್ಕಳಿಗೆ ಒಬ್ಬ ಶಿಕ್ಷಕ, ಬಳ್ಳಾರಿ ಜಿಲ್ಲೆಯಲ್ಲಿ 35 ಮಕ್ಕಳು ಮತ್ತು ಕಲಬುರಗಿ ಜಿಲ್ಲೆಯಲ್ಲಿ 29 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ಅಂದರೆ ಮುಂದುವರೆ ಭಾಗ ಎಂದು ಕರೆಸಿಕೊಳ್ಳುವ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಗೂ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಮಕ್ಕಳ-ಶಿಕ್ಷಕರ ನಡುವಿನ ಅನುಪಾತ ಎರಡುಪಟ್ಟು ವ್ಯತ್ಯಾಸ ಇದ್ದು, ಗಂಭೀರ ತಾರತಮ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಶಾಮರಾವ ಪ್ಯಾಟಿ, ಶಶಿಧರ ಇದ್ದರು.