Advertisement

ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ?

06:00 AM Feb 02, 2018 | Team Udayavani |

ಬೆಂಗಳೂರು: 2018ರ ರಾಜ್ಯ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ “ಮುಕ್ತ ಮನಸ್ಸು’ ಹೊಂದಿದಂತಿದೆ. ಏಕೆಂದರೆ, 2013ರ ಚುನಾವಣೆಯನ್ನು ಒಂದೇ ಹಂತದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ನಡೆಸಿರುವ ಉದಾಹರಣೆ ನಮ್ಮ ಮುಂದಿದೆ ಎಂದು ಸ್ವತಃ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಹೇಳಿದ್ದಾರೆ.

Advertisement

ಬಹುತೇಕ ರಾಜಕೀಯ ಪಕ್ಷಗಳು ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 2013ರ ಚುನಾವಣೆ ಒಂದೇ ಹಂತದಲ್ಲಿ ಶಾಂತಿಯುತವಾಗಿ, ಯಾವುದೇ ಸಮಸ್ಯೆಗಳಿಲ್ಲದೇ ನಡೆದಿದೆ. ಅದೇನೆ ಇರಲಿ, ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ ಘೋಷಣೆ ಮಾಡುವುದಕ್ಕಿಂತ ಮುಂಚೆ ಎಷ್ಟು ಹಂತಗಳಲ್ಲಿ ಅನ್ನುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ಒಂದೇ ಹಂತದ ಚುನಾವಣೆಯ ಮುನ್ಸೂಚನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆಯ ಸಿದ್ಧತೆಗಳ ಪರಿಶೀಲನೆಗೆ ರಾಜ್ಯಕ್ಕೆ ಆಗಮಿಸಿದ್ದ ಅವರು ಎರಡು ದಿನ ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಬಳಿಕ ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮತದಾರಪಟ್ಟಿ ಪರಿಷ್ಕರಣೆ ಕಾರ್ಯ ಸೇರಿದಂತೆ, ಈವರೆಗಿನ ಸಿದಟಛಿತೆಗಳು ಆಯೋಗಕ್ಕೆ ಸಮಧಾನ ತಂದಿದೆ ಎಂದರು.
ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  “ಯಾವೊಬ್ಬ ಮತದಾರನು ಚುನಾವಣಾ  ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಮತ್ತು ತನ್ನ ಹಕ್ಕು ಚಲಾಯಿಸುವುದರಿಂದ ವಂಚಿತನಾಗಲ್ಲ’ ಅನ್ನುವುದು ಆಯೋಗದ ಪೂರ್ಣ ವಿಶ್ವಾಸವಾಗಿದೆ. ನಿರ್ಭೀತ, ಪೂರ್ವಾಗ್ರಹಗಳಿಲ್ಲದ, ತಟಸ್ಥ ಹಾಗೂ ಯಾರದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೇ ಮುಕ್ತ ಚುನಾವಣೆ ಖಾತರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇದರ ಪಾಲನೆ ಆಗದಿದ್ದರೆ ಕಠಿಣ ಕ್ರಮಕ್ಕೆ ಆಯೋಗ ಹಿಂದೇಟು ಹಾಕುವುದಿಲ್ಲವೆಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾವತ್‌ ತಿಳಿಸಿದರು.

ಎರಡು ದಿನಗಳ ಭೇಟಿ ಸಂದರ್ಭದಲ್ಲಿ ಮೊದಲ ದಿನ ರಾಜಕೀಯ ಪಕ್ಷಗಳ ಮುಖಂಡರು, ಮತದಾರ ಪಟ್ಟಿ ಪರಿಷ್ಕರಣೆ, ಚುನಾವಣೆಯ ಹಂತ, ಪೊಲೀಸ್‌ ಇಲಾಖೆಯ ಕಾರ್ಯವೈಖರಿ, ಅಧಿಕಾರಿಗಳ ವರ್ಗಾವಣೆ, ಇವಿಎಂ, ವಿವಿ ಪ್ಯಾಟ್‌ಗಳ ಬಗೆಗಿನ ಗೊಂದಲಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಹವಾಲುಗಳನ್ನು ನೀಡಿದ್ದಾರೆ. ಅವುಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಪೊಲೀಸ್‌ ಮಹಾನಿರ್ದೇಶಕರು, ಚುನಾವಣಾ ಪ್ರಕ್ರಿಯೆ ಅನುಷ್ಠಾನ ಸಂಸ್ಥೆಗಳಾದ ಪೊಲೀಸ್‌, ತೆರಿಗೆ,ಅಬಕಾರಿ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎಂದು ರಾವತ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರಾದ ಸುನೀಲ್‌ ಅರೋರಾ, ಅಶೋಕ್‌ ಲಾವಸ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮತ್ತಿತರರು ಇದ್ದರು.

ವರ್ಗಾವಣೆ ಗೊಂದಲಕ್ಕೆ ತೆರೆ
ಚುನಾವಣಾ ವರ್ಷದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವಾಗ ಅದರ ಉಸ್ತುವಾರಿ ಹೊತ್ತಿರುವ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸರ್ಕಾರವು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದುಕೊಳ್ಳಬೇಕು ಅನ್ನುವುದು “ಪಾಲಿಸಲೇಬೇಕಾದ ಕಡ್ಡಾಯ ಸಲಹೆ’ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಮೂವರು ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ಸ್ವತಃ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರೇ ತೆರೆ ಎಳೆದಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರೋಹಿಣಿ ಸಿಂಧೂರಿ ಅವರ ಪ್ರಕರಣ ಆಯೋಗದ ಗಮನಕ್ಕೆ ಬಂದಿತು.

ವೇಳಾಪಟ್ಟಿ ಪ್ರಕಟಗೊಂಡ ಮೇಲೆ ಆಯೋಗದ ವರ್ಗಾವಣೆ ನೀತಿ ಅನ್ವಯವಾಗುತ್ತದೆ. ಆದರೆ,ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುವಾಗ, ಅದರ ಮಧ್ಯೆ ಜಿಲ್ಲಾಧಾಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ಒಂದೊಮ್ಮೆ ಅನಿವಾರ್ಯವಾಗಿ ವರ್ಗಾವಣೆ ಮಾಡಬೇಕಾದಲ್ಲಿ ಆಯೋಗದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗಿರುತ್ತದೆ.ಇದು ಕೇವಲ ಸಲಹೆಯಷ್ಟೇ ಅಲ್ಲ, “ಪಾಲಿಸಲೇಬೇಕಾದ ಕಡ್ಡಾಯ ಸಲಹೆ’ ಎಂದು ರಾವತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next