Advertisement

ಒಂದು ಸುತ್ತಿನ ಪ್ರಚಾರ ಪೂರ್ಣ

07:31 PM Mar 19, 2018 | Team Udayavani |

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಕ್ಷೇತ್ರದ ಸರ್ವ ಪ್ರಗತಿಗೆ ಇವರೆಡೂ ಪಕ್ಷಗಳ ಕೊಡುಗೆ ಶೂನ್ಯ. ಈ ವರೆಗೆ ಇಲ್ಲಿನ ಒಬ್ಬ ಶಾಸಕರಿಗೂ ಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಜೆಡಿಎಸ್‌ ಚುನಾವಣಾ ತಯಾರಿ ನಡೆಯುತ್ತಿದ್ದು, ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯವೂ ನಡೆದಿದೆ. ಈ ಬಾರಿ ಇಲ್ಲಿ ಜೆಡಿಎಸ್‌ ಗೆಲ್ಲಲಿದೆ ಎಂದು ಜೆಡಿಎಸ್‌ ಬೈಂದೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಯು. ಸಂದೇಶ್‌ ಭಟ್‌ ವಿಶ್ವಾಸದಿಂದ ಹೇಳುತ್ತಾರೆ. 

Advertisement

ಚುನಾವಣಾ ತಯಾರಿ ಹೇಗೆ ನಡೆಯುತ್ತಿದೆ?
ಕ್ಷೇತ್ರದಲ್ಲಿ ಎಲ್ಲರಿಗಿಂತ ಮುಂಚಿತವಾಗಿಯೇ ಅಭ್ಯರ್ಥಿ ಯನ್ನು ಘೋಷಿಸಿದ್ದೇವೆ. ವಿಧಾನಸಭಾ ಚುನಾವಣೆಗೆ ಪಕ್ಷ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದು, ಈಗಾಗಲೇ ಬೂತ್‌ ಮಟ್ಟದಲ್ಲಿ ಒಂದು ಬಾರಿಯ ಪ್ರಚಾರ ಪೂರ್ಣ ಗೊಂಡಿದೆ. ಮನೆಮನೆಗೆ ಕುಮಾರಣ್ಣ ಹಾಗೂ ಮನೆಮನೆಗೆ ಜೆಡಿಎಸ್‌ ಎನ್ನುವ ಅಜೆಂಡಾ ಇಟ್ಟುಕೊಂಡು ಮನೆ ಮನೆಗೆ ಭೇಟಿ ನೀಡಿ, ಜನರ ವಿಶ್ವಾಸ ಗಳಿಸುವ ಕಾರ್ಯ ಮಾಡುತ್ತಿದ್ದೇವೆ. 

ಪಕ್ಷದಿಂದ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆಯೇ?
ಹೌದು. ಕಾರ್ಮಿಕ ಮುಖಂಡರಾಗಿರುವ ರವಿ ಶೆಟ್ಟಿ ಯವರನ್ನು ಈ ಬಾರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಇದು ಪಕ್ಷದ ಒಮ್ಮತದ ಆಯ್ಕೆಯಾಗಿದೆ. ಎಲ್ಲರೂ ಜೆಡಿಎಸ್‌ ಗೆಲುವಿಗೆ ಶ್ರಮಿಸಲಿದ್ದೇವೆ. 

ಬೈಂದೂರಿನಲ್ಲಿ ಈ ಬಾರಿ ನಿಮ್ಮ 
ಪ್ರಮುಖ ಅಜೆಂಡಾಗಳೇನು?

ಹಿಂದೆ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ಆಡಳಿತವಿದ್ದಾಗ ಬೈಂದೂರಿನ ಗಂಗನಾಡು, ಹೊಸಾಡು ವಿನಂತಹ ತೀರಾ ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದ್ದೇವೆ. 

ಜೆಡಿಎಸ್‌ ಗೆಲ್ಲುವ ವಿಶ್ವಾಸವಿದೆಯೇ?
ಜಿಲ್ಲೆಯಲ್ಲಿ ಬೇರೆ ಎಲ್ಲ ಕಡೆಗಳಿಗಿಂತ ಬೈಂದೂರಿನಲ್ಲಿ ಪಕ್ಷಕ್ಕೆ ಹೆಚ್ಚಿನ ಜನಬೆಂಬಲವಿದ್ದು, ಖಂಡಿತವಾಗಿಯೂ ಜೆಡಿಎಸ್‌ ಗೆಲ್ಲಲಿದೆ ಎನ್ನುವ ವಿಶ್ವಾಸವಿದೆ. ಚುನಾವಣೆಗೆ ಬೇಕಾದ ಎಲ್ಲ ಪೂರ್ವ ತಯಾರಿಯನ್ನು ನಡೆಸಿದ್ದೇವೆ. ಪಕ್ಷವನ್ನು ಇನ್ನಷ್ಟು ಸಂಘಟಿತವಾಗಿ ಸಜ್ಜುಗೊಳಿಸಲಾಗುವುದು.

Advertisement

ನಿಮ್ಮ ಪಕ್ಷದ ಆಶ್ವಾಸನೆಗಳು ಏನೇನು?
ಜೆಡಿಎಸ್‌ ಗೆದ್ದರೆ ಬೈಂದೂರಿನಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ನಿರ್ಮಿಸಲಾಗುತ್ತದೆ. ಬೈಂದೂರಿನಲ್ಲಿ ಉಪ್ಪು ನೀರಿನ ಪ್ರಭಾವದಿಂದ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಶಾಶ್ವತ ಪರಿಹಾರ ನಿಟ್ಟಿನಲ್ಲಿ ಯೋಜನೆ, ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಯೋಜನೆ ರೂಪಿಸಲಾಗುವುದು. ಪ್ರವಾಸೋದ್ಯಮ, ನೂತನ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು.
 
– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next