Advertisement

ಕೃಷ್ಣಾಷ್ಟಮಿಗೆ ಒಂದು ಪ್ರದರ್ಶನ- ಮೂರು ಪ್ರಸಂಗ

08:02 PM Sep 05, 2019 | mahesh |

ಒಂದು ಆಟ, ಮೂರು ಪ್ರಸಂಗ. ಒಂದೇ ಪ್ರದರ್ಶನದಲ್ಲಿ ಮೂರು ಪ್ರಸಂಗಗಳ ಪ್ರಸ್ತುತಿ. ಹೀಗೊಂದು ಪ್ರಯತ್ನಕ್ಕೆ ತೆಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ವೇದಿಕೆ ಸಾಕ್ಷಿಯಾಯಿತು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಂಟ್ವಾಳದ ಮಂಚಿಯ ಬೊಲ್ಪು ಕಲಾತಂಡವು ಉಣಬಡಿಸಿದ ಕಲಾರಸದೌತಣವಿದು.

Advertisement

ಕೃಷ್ಣಲೀಲೆ, ಶಕಟ-ಧೇನುಕ ವಧೆ , ಕಾಳಿಂಗ ಮರ್ದನ- ಜಾಂಬವತಿ ಕಲ್ಯಾಣ ಇವು ಆ ಮೂರು ಪ್ರಸಂಗಗಳು. ಕೃಷ್ಣನ ಬಾಲಲೀಲೆಗಳನ್ನು ಪ್ರಸ್ತುತಪಡಿಸುವ ಕೃಷ್ಣಲೀಲೆ – ಶಕಟ ಧೇನುಕ ರಕ್ಕಸರ ವಧೆ, ಲೋಕಕ್ಕೆ ಕಂಟಕವಾಗಿದ್ದ ವಿಷಸರ್ಪ ಕಾಳಿಂಗನ ಮರ್ದನ ಮತ್ತು ಕೃಷ್ಣ ನು ಜಾಂಬವಂತನ ಸಾಕು ಮಗಳು ಜಾಂಬವತಿಯನ್ನು ಕೈ ಹಿಡಿದು ಲೋಕೋದ್ಧಾರಕ್ಕೆ ನಾಂದಿಯಾದ ಸನ್ನಿವೇಶವನ್ನು ಪ್ರಸ್ತುತಪಡಿಸುವ ಜಾಂಬವತಿ ಕಲ್ಯಾಣ. ಈ ಕಥೆಗಳನ್ನು ಒಳಗೊಂಡ ಪ್ರಸಂಗಗಳನ್ನು ಒಂದೇ ಪ್ರದರ್ಶನದಲ್ಲಿ ಉಣಬಡಿಸಿದ ಗೌರವ ಬೊಲ್ಪು ಕಲಾತಂಡಕ್ಕೆ ಸಲ್ಲಬೇಕು.

ಹಬ್ಬಕ್ಕೆ ಸರಿಹೊಂದುವ ಪ್ರಸಂಗ ಆಯ್ಕೆ ಮತ್ತು ಪ್ರಸಂಗದ ಪ್ರಸ್ತುತಿಯಲ್ಲಿ ಕಲಾವಿದರ ತನ್ಮಯತೆ ಇವೆರಡೂ ಸಮ್ಮಿಲನಗೊಂಡು ಕೃಷ್ಣಾಜನ್ಮಾಷ್ಟಮಿ ಹಬ್ಟಾಚರಣೆಗೆ ವಿಶಿಷ್ಟ ಅರ್ಥವೇ ಲಭಿಸಿತು.

ಕಥಾ ಪ್ರಸಂಗವನ್ನು ಸಾಂಗವಾಗಿ ಮುನ್ನಡೆಸಿದ ಗೌರವ ಹಿಮ್ಮೇಳ ಕಲಾವಿದರಿಗೆ ಅರ್ಪಿತವಾದರೆ, ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹೆಮ್ಮೆ ಮುಮ್ಮೇಳ ಕಲಾವಿದರಿಗೆ ಸಲ್ಲುತ್ತದೆ. ಹಿಮ್ಮೇಳದಲ್ಲಿ ಪೂರ್ವಾರ್ಧದಲ್ಲಿ ರವಿ ಕುಮಾರ್‌ ಮಂಚಿ ಮತ್ತು ಉತ್ತರಾರ್ಧದಲ್ಲಿ ಶ್ರೀನಿವಾಸ ಬಳ್ಳಮಂಜ ಇವರ ಮಧುರ ಕಂಠದ ಗಾಯನಕ್ಕೆ ದಯಾನಂದ ಶೆಟ್ಟಿಗಾರ್‌ ಮಿಜಾರು ಚೆಂಡೆಯಲ್ಲಿ ಮತ್ತು ಲೋಕೇಶ್‌ ಕಟೀಲು ಮದ್ದಳೆಯಲ್ಲಿ ಸಾಥ್‌ ನೀಡಿದರು. ಮುಮ್ಮೇಳದಲ್ಲಿ ಬೊಲ್ಪು ಕಲಾತಂಡದ ಕಲಾವಿದರು ಮತ್ತು ಅತಿಥಿ ಕಲಾವಿದರು ಪಾತ್ರ ನಿರ್ವಹಿಸಿದ್ದರು. ವಿಶೇಷ ಪಾತ್ರದಲ್ಲಿ ಬಾಲ ಕೃಷ್ಣನಾಗಿ ಲೋಕೇಶ್‌ ಮುಚ್ಚಾರು ಮನಸೂರೆಗೊಂಡರೆ, ಕಾಳಿಂಗನಾಗಿ ಸತೀಶ್‌ ನೈನಾಡು ಅಬ್ಬರದ ಪ್ರವೇಶ ಕೊಟ್ಟರು.ಮಿಜಾರು ತಿಮ್ಮಪ್ಪ ಶೆಟ್ಟಿಗಾರ್‌ ಅವರ ಸಂದಭೋìಚಿತ ಹಾಸ್ಯಚಟಾಕಿ ನಗೆಗಡಲಲ್ಲಿ ತೇಲಾಡಿಸಿತು. ಜಾಂಬವತಿ ಕಲ್ಯಾಣ ಪ್ರಸಂಗದಲ್ಲಿ ಜಾಂಬವಂತನಾಗಿ ಅಬ್ಬರದ ಪ್ರವೇಶ ಕೊಟ್ಟ ಹೊಳ್ಳ ಖ್ಯಾತಿಯ ಗಣೇಶ ಶೆಟ್ಟಿ ಅರಳ ಅಭಿನಯ ಉತ್ತಮವಾಗಿತ್ತು.

ಶಕಟನಾಗಿ ಉಪನ್ಯಾಸಕ ಮನೋಹರ ಕಾರಾಜೆ, ಧೇನುಕನಾಗಿ ವಿಮಲೇಶ್‌ ಶಿಂಗಾರಕೋಡಿ, ಪ್ರಳಂಬನಾಗಿ ಲಕ್ಷ್ಮಣ ಪೆರ್ಮುದೆ, ಬಕನಾಗಿ ಸಾಗರ್‌ ಶಿಂಗಾರಕೋಡಿ, ಪ್ರಸೇನನಾಗಿ ರಕ್ಷಣ್‌ ಮಂಚಿ, ವಾತಾಸುರನಾಗಿ ಪ್ರಜ್ವಲ್‌ ಶಿಂಗಾರಕೋಡಿ, ಜಾಂಬವತಿ ಕಲ್ಯಾಣ ಪ್ರಸಂಗದಲ್ಲಿ ಕೃಷ್ಣನಾಗಿ ರಾಜೇಶ್‌ ಬೆಳ್ಳಾರೆ, ಸಿಂಹವಾಗಿ ಚಂದ್ರಕಾಂತ ಶಿಮಂತೂರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಸ್ತ್ರೀ ಪಾತ್ರದಲ್ಲಿ ಕಾಳಿಂದಿಯರಾಗಿ ಇಂದಿರಾ ಎನ್‌. ಕೆ. ಮತ್ತು ಯೋಗೀಶ್‌ ಕಡಬ ಪಾತ್ರನಿರ್ವಹಿದರು. ಬಳಿಕ ಜಾಂಬವತಿ ಕಲ್ಯಾಣ ಪ್ರಸಂಗದ ಜಾಂಬವತಿ ಪಾತ್ರದಲ್ಲಿ ಯೋಗೀಶ್‌ ಕಡಬ ಕಾಣಿಸಿಕೊಂಡರು. ಕಥಾನಕದ ಯಶಸ್ವಿ ಪ್ರದರ್ಶನದ ಹಿಂದೆ ರವಿಕುಮಾರ್‌ ಮಂಚಿ ಇವರ ದಕ್ಷ ನಿರ್ದೇಶನವಿತ್ತು.

Advertisement

ಇಂದಿರಾ ಎನ್‌. ಕೆ. ಕೂಳೂರು

Advertisement

Udayavani is now on Telegram. Click here to join our channel and stay updated with the latest news.

Next