Advertisement

ಬಿಎಸ್‌ಎನ್‌ಎಲ್‌ನ ಶೇ. 60ರಷ್ಟು ಗ್ರಾಹಕರು 3ಜಿಯಿಂದ 4ಜಿಗೆ ಬದಲಾವಣೆ

10:21 AM Feb 29, 2020 | mahesh |

ಮಹಾನಗರ: ಬಿಎಸ್‌ಎನ್‌ಎಲ್‌ ತನ್ನ ನೆಟ್‌ವರ್ಕ್‌ ಅನ್ನು 3ಜಿಯಿಂದ 4ಜಿ ಸ್ಪೆಕ್ಟ್ರಂಗೆ ಬದಲಾವಣೆ ಮಾಡಿ ಒಂದೂವರೆ ತಿಂಗಳು ಕಳೆದಿದ್ದು, ಶೇ.60ರಷ್ಟು ಮಂದಿ ಮಾತ್ರ ತನ್ನ ನೆಟ್‌ವರ್ಕ್‌ ಸೇವೆಯನ್ನು 3ಜಿಯಿಂದ 4ಜಿಗೆ ಬದಲಾವಣೆ ಮಾಡಿಕೊಂಡಿದ್ದಾರೆ.

Advertisement

ಬಿಎಸ್‌ಎನ್‌ಎಲ್‌ ಕೆಲವು ತಿಂಗಳುಗಳಿಂದ 3ಜಿ ಸಿಮ್‌ ಅನ್ನು 4ಜಿಗೆ ಬದಲಾವಣೆ ಮಾಡಿ ಎಂದು ಅರಿವು ಮೂಡಿಸಿತ್ತು. ಆದರೂ ಇನ್ನೂ ಶೇ.40ರಷ್ಟು ಮಂದಿ ತಮ್ಮ ಸಿಮ್‌ ಅನ್ನು ಬದಲಾವಣೆ ಮಾಡಿಕೊಳ್ಳಲು ಬಾಕಿ ಇದ್ದಾರೆ. ಬಿಎಸ್‌ಎನ್‌ಎಲ್‌ ಸೇವಾ ಕೇಂದ್ರದಲ್ಲಿ ಮಾ. 31ರ ವರೆಗೆ ಉಚಿತವಾಗಿ 4ಜಿ ಸಿಮ್‌ಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ. ಬಳಿಕ ಸೇವಾ ಶುಲ್ಕ ನೀಡಬೇಕಾಗುತ್ತದೆ.

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಈಗಾಗಲೇ ನೀಡುತ್ತಿದ್ದ 3ಜಿ ತರಂಗಾಂತರದಿಂದ 4ಜಿಗೆ ಬದಲಾವಣೆ ಮಾಡಿ ನೆಟ್‌ವರ್ಕ್‌ ನೀಡಿದ್ದ ಬಳಿಕ ಕೆಲವು ಬಿಎಸ್‌ಎನ್‌ಎಲ್‌ ಗ್ರಾಹಕರು ಇಂಟರ್‌ನೆಟ್‌ ಸೇವೆಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹೇಳುವಂತೆ ಇನ್ನು ಕೆಲವು ತಿಂಗಳೊಳಗೆ ಪರಿಪೂರ್ಣವಾಗಿ 4ಜಿ ಸ್ಪೆಕ್ಟ್ರಂ ಸಂಪರ್ಕ ಜಿಲ್ಲೆಗೆ ಬರಲಿದ್ದು, ಬಳಿಕವಷ್ಟೇ ಸದ್ಯದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಅಧಿಕಾರಿಗಳ ಕೊರತೆ
ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಇತ್ತೀಚೆಗೆ ಸ್ವಯಂ ನಿವೃತ್ತಿ (ವಿಆರ್‌ಎಸ್‌) ಆಯ್ಕೆಯನ್ನು ಘೋಷಣೆ ಮಾಡಿತ್ತು. ಇದೇ ಕಾರಣಕ್ಕೆ ಮಂಗಳೂರು ಕಚೇರಿಯಿಂದ 90ಕ್ಕೂ ಅಧಿಕ ಮಂದಿ ಸ್ವಯಂ ನಿವೃತ್ತಿ ಘೋಷಿಸಿದ್ದರು.

ಇದೀಗ ಗ್ರಾಹಕರು ಸಮಸ್ಯೆ ಹೇಳುವ ನಿಟ್ಟಿನಲ್ಲಿ ನಗರದ ಬಿಎಸ್‌ಎನ್‌ಎಲ್‌ ಪ್ರಧಾನ ಕಚೇರಿಗೆ ತೆರಳಿದಾಗ ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಗಡಿಭಾಗದವರಿಗೆ ಸೇವೆಯಲ್ಲಿ ತೊಡಕು ಸದ್ಯ, ಬಿಎಸ್‌ಎನ್‌ಎಲ್‌ 4ಜಿ ಸೇವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 168 ಟವರ್‌ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಉಳ್ಳಾಲ ನೇತ್ರಾವತಿ ಸೇತುವೆಯಿಂದ ಸುರತ್ಕಲ್‌, ಮೂಲ್ಕಿ, ಪಡುಬಿದ್ರಿ, ಉಚ್ಚಿಲ ತನಕ ಮತ್ತು ಫರಂಗಿಪೇಟೆಯಿಂದ ಕಿನ್ನಿಗೋಳಿ, ಕಟೀಲು ವರೆಗೆ ಸಂಪರ್ಕ ಸಿಗುತ್ತಿದೆ. ಆದರೆ ಗಡಿಭಾಗದ ಆಸುಪಾಸಿನಲ್ಲಿರುವ ಗ್ರಾಹಕರಿಗೆ ಅತ್ತ 4ಜಿ, ಇತ್ತ 3ಜಿ ಸೇವೆಯಲ್ಲಿ ತೊಡಕು ಉಂಟಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕರು.

Advertisement

ಬಿಎಸ್‌ಎನ್‌ಎಲ್‌ 3ಜಿಯಿಂದ 4ಜಿಗೆ ಅಪ್‌ಗ್ರೇಡ್‌ ಆದ ಬಳಿಕ ಕೆಲವು ದಿನಗಳ ಕಾಲ ನೆಟ್‌ವರ್ಕ್‌ ಸಮಸ್ಯೆ ಉಂಟಾಗಿದ್ದು, ಕರೆಗಳು ಅರ್ಧದಲ್ಲಿ ಮೊಟಕು ಗೊಳ್ಳುತ್ತಿದ್ದವು. ಆದಾಗಿ ಸದ್ಯ ಕೆಲವೊಂದು ಮೊಬೈಲ್‌ ಟವರ್‌ಗಳಲ್ಲಿ ಈ ಸಮಸ್ಯೆ ಇನ್ನೂ ಮುಂದುವರಿದಿದೆ.

ಆ್ಯಪ್‌ ಮುಖೇನ ಮಾಹಿತಿ
“4ಜಿ ಸೇವೆ ಲಭ್ಯವಿರದ ಕೆಲವೊಂದು ಮೊಬೈಲ್‌ಗ‌ಳಲ್ಲಿ 3ಜಿ ಸೇವೆಯ ಸಮಸ್ಯೆ ಉಂಟಾಗುತ್ತಿದೆ. ತಾವು ಉಪಯೋಗಿಸುತ್ತಿರುವ ಮೊಬೈಲ್‌ 4ಜಿ ಸೇವೆಗೆ ಸಹಾಯ ಮಾಡುತ್ತದೆಯೋ ಎಂಬುವುದನ್ನು ತಿಳಿಯಲು ಗೂಗಲ್‌ ಪ್ಲೇಸ್ಟೋರ್‌ಗೆ ತೆರಳಿ “ನೋ ಯುವರ್‌ ಮೊಬೈಲ್‌’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು. ಅಲ್ಲಿ ಮೊಬೈಲ್‌ನ ಐಎಂಇಐ ಸಂಖ್ಯೆಯನ್ನು ದಾಖಲು ಮಾಡಿದರೆ ಮೊಬೈಲ್‌ಗೆ ಯಾವೆಲ್ಲ ನೆಟ್‌ವರ್ಕ್‌ ಸೇವೆ ಪಡೆಯಬಹುದು ಎಂಬುವುದನ್ನು ತಿಳಿಯಬಹುದು ಎನ್ನುತ್ತಾರೆ’ ಬಿಎಸ್‌ಎನ್‌ಎಲ್‌ನ ಅಧಿಕಾರಿಗಳು.

ಗ್ರಾಹಕ ಸೇವಾ ಕೇಂದ್ರದಲ್ಲಿ ಸಂಕಷ್ಟ
ನಗರದ ಸಹಿತ ಕೆಲವು ಕಡೆಗಳಲ್ಲಿ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕ ಸೇವಾ ಕೇಂದ್ರವನ್ನು ತೆರೆದಿದೆ. ಇಲ್ಲಿ ಗ್ರಾಹಕರು ತಮ್ಮ ದೂರವಾಣಿ ಕರೆಗಳ ಶುಲ್ಕ ಪಾವತಿ ಮಾಡಬಹುದು. ಸಾಮಾನ್ಯ ಗ್ರಾಹಕರ ಶುಲ್ಕ ಪಾವತಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬದಲಾಗಿ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆಗಳು ಸೇರಿದಂತೆ ವಿವಿಧ ಕಂಪೆನಿಗಳ ದೂರವಾಣಿ ಶುಲ್ಕ ಸಾವಿರಾರು ರೂ. ಇದ್ದರೆ, ಅವರು ಚೆಕ್‌ ನೀಡುತ್ತಾರೆ.
ಆದರೆ, ಗ್ರಾಹಕ ಸೇವಾ ಕೇಂದ್ರದಲ್ಲಿ ಗ್ರಾಹಕರು ಚೆಕ್‌ ಮುಖೇನ ಹಣ ಪಾವತಿಸಲು ಅವಕಾಶವಿಲ್ಲ. ಏಕೆಂದರೆ, ಗ್ರಾಹಕ ಸೇವಾ ಕೇಂದ್ರದಲ್ಲಿ ಕಂಪ್ಯೂಟರ್‌ ವ್ಯವಸ್ಥೆ ಇಲ್ಲದ ಕಾರಣ ಚೆಕ್‌ ಮುಖೇನ ಹಣ ಪಾವತಿ ಮಾಡಬೇಕಾದರೆ ಮಂಗಳೂರಿನ ಕೇಂದ್ರ ಕಚೇರಿಗೆ ತೆರಳಬೇಕಾದ ಅನಿವಾರ್ಯವಿದೆ.

ಕೆಲವು ತಿಂಗಳಿನಲ್ಲಿ 4ಜಿ ಸ್ಪೆಕ್ಟ್ರಂ
ಬಿಎಸ್‌ಎನ್‌ಎಲ್‌ನ ಪರಿಪೂರ್ಣವಾದ 4ಜಿ ಸ್ಪೆಕ್ಟ್ರಂ ಸಂಪರ್ಕ ಪ್ರಕ್ರಿಯೆ ಹಂತದಲ್ಲಿದೆ. ಯಾವ ತಿಂಗಳಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಇನ್ನೂ, ಯಾವುದೇ ದಿನಾಂಕ ಪ್ರಕಟಿಸಲಿಲ್ಲ. ಮಂಗಳೂರಿನಲ್ಲಿ 3ಜಿ ಸೇವೆಯಿಂದ 4ಜಿ ಸ್ಪೆಕ್ಟ್ರಂಗೆ ಬದಲಾಯಿಸಿ ನೆಟ್‌ವರ್ಕ್‌ ನೀಡಲಾಗಿದ್ದು, ಈಗಾಗಲೇ ಶೇ.60ರಷ್ಟು ಮಂದಿ ಸಿಮ್‌ ಬದಲಾವಣೆ ಮಾಡಿಕೊಂಡಿದ್ದಾರೆ.
-ಯು.ಎಲ್‌. ಹೆಗ್ಡೆ, ಬಿಎಸ್‌ಎನ್‌ಎಲ್‌ ಮಂಗಳೂರು ನಗರ ಡಿಜಿಎಂ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next