ಅವರೆಲ್ಲರೂ ಒಂದೇ ನಟನಾ ಶಾಲೆಯಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದವರು. ತರಬೇತಿ ನಂತರ ಅದರಲ್ಲೊಬ್ಬ ಹುಡುಗ ಎಲ್ಲರನ್ನು ಒಂದೆಡೆ ಸೇರಿಸಿ ಒಂದು ಚಿತ್ರ ಮಾಡುವ ಮನಸ್ಸು ಮಾಡುತ್ತಾನೆ. ಅವನ ಕನಸಿಗೆ ಎಲ್ಲರೂ ಸಾಥ್ ಕೊಡುತ್ತಾರೆ. ಆಗ ಶುರುವಾಗಿದ್ದೇ “ಹನಿಗಳು’ ಎಂಬ ಚಿತ್ರ. ಚಿತ್ರಕ್ಕೆ “ಏನನ್ನೋ ಹೇಳಲು ಹೊರಟಿವೆ..’ ಎಂಬ ಅಡಿಬರಹವಿದೆ. ಈಗಾಗಲೇ ಸದ್ದಿಲ್ಲದೆ ಪೂರ್ಣಗೊಂಡ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಹೌದು, ಈ ಚಿತ್ರದ ಮೂಲಕ ಎಂಟು ಮಂದಿ ಯುವ ಪ್ರತಿಭೆಗಳು ಚಿತ್ರರಂಗಕ್ಕೆ ಎಂಟ್ರಿಯಾಗಿವೆ.
ಅಂದಹಾಗೆ, ಈ ಚಿತ್ರದ ಮೂಲಕ ನಾಗೇಶ್ ನಿರ್ದೇಶನದ ಜೊತೆಗೆ ಹೀರೋ ಆಗಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯನ್ನೂ ನಾಗೇಶ್ ಅವರೇ ನಿಭಾಯಿಸಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ ಕೂಡ ಅವರದೇ. ವಿಜಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ತರಬೇತಿ ಪಡೆದ ನಾಗೇಶ್, ತಮ್ಮ ಬ್ಯಾಚ್‌ನಲ್ಲಿದ್ದ ಇತರೆ ವಿಭಾಗದ ಪ್ರತಿಭೆಗಳನ್ನು ಒಂದುಗೂಡಿಸಿಕೊಂಡು “ಏನನ್ನೋ ಹೇಳಲು ಹೊರಟಿದ್ದಾರೆ…’.
ಚಿತ್ರದ ಕುರಿತು ವಿಷಯ ಹಂಚಿಕೊಂಡ ನಿರ್ದೇಶಕ ಕಮ್ ನಾಯಕ ನಾಗೇಶ್, “ಇದು ನನ್ನ ಮೊದಲ ಚಿತ್ರ. ಸಿನಿಮಾ ಮೇಲೆ ಆಸಕ್ತಿ ಇತ್ತು. ಹಾಗಾಗಿ ವಿಜಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ನಟನೆ ನಿರ್ದೇಶನದ ತರಬೇತಿ ಪಡೆದೆ. ನಾನು ಕಲಿಯುವ ಶಾಲೆಯಲ್ಲೇ ನಟನೆ, ಛಾಯಾಗ್ರಹಣ, ಸಂಕಲನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರನ್ನು ಸೇರಿಸಿಕೊಂಡು ಈ ಚಿತ್ರ ಮಾಡಿದ್ದೇನೆ. ಇದು ಹಳ್ಳಿಯೊಂದರ ಲವ್‌ಸ್ಟೋರಿ. ಸ್ಟೂಡೆಂಟ್ ನಡುವೆ ಜಗಳ, ಪ್ರೀತಿ, ದ್ವೇಷ, ಅಸೂಯೆ ಇತ್ಯಾದಿ ವಿಷಯಗಳು ಚಿತ್ರದ ಹೈಲೈಟ್. ಇನ್ನು, ಆರಂಭದಲ್ಲಿ ಚಿತ್ರ ಮಾಡುವಾಗ ಸಣ್ಣ ಬಜೆಟ್ ಪ್ಲಾನ್ ಮಾಡಿದ್ದೆವು. ಕೊನೆಗೆ ಬಜೆಟ್ ಹೆಚ್ಚಾಯ್ತು. 30 ಲಕ್ಷ ರು.ನಮ್ಮಂತಹ ಹೊಸಬರಿಗೆ ದೊಡ್ಡ ಬಜೆಟ್. ಸಮಸ್ಯೆ ಎದುರಾದಾಗ, ಇದ್ದ ಒಂದು ಸೈಟ್ ಕೂಡ ಮಾರಿದೆ. ಸಿನಿಮಾ ಮೇಲಿನ ಪ್ರೀತಿಗಾಗಿ ಅದೆಲ್ಲವನ್ನೂ ಮಾಡಿದ್ದೇನೆ. ಚಿತ್ರ ನೋಡಿ ಹರಸಬೇಕು’ ಎಂದರು ನಾಗೇಶ್.
ಪಲ್ಲವಿ ಗೌಡ ಚಿತ್ರದ ನಾಯಕಿ. ಇವರೂ ಸಹ ವಿಜಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನವರೇ. ಅವರಿಲ್ಲಿ ಕಾಲೇಜ್ ಓದುವ ಹುಡುಗಿ ಪಾತ್ರ ಮಾಡಿದ್ದಾರಂತೆ. ಮೊದಲ ಸಿನಿಮಾ ಆಗಿದ್ದರಿಂದ ಭಯ, ಖುಷಿ ಎರಡೂ ಇದೆಯಂತೆ. ಹೊಸಬರೇ ಸೇರಿ ಚಿತ್ರ ಮಾಡಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ’ ಎಂದರು ಪಲ್ಲವಿ.
ಮಧು ಇಲ್ಲಿ ಖಳನಟನ ಪಾತ್ರ ಮಾಡಿದ್ದಾರಂತೆ. “ಇದು ನನ್ನ ಮೂರನೇ ಚಿತ್ರ. ಹಿಂದೆ ಸಣ್ಣಪುಟ್ಟ ಪಾತ್ರ ಮಾಡಿದ ಅನುಭವ ಇದೆ. ನಾನೂ ಸಹ ವಿಜಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲೇ ತರಬೇತಿ ಪಡದವನು. ಪಾತ್ರ ಚೆನ್ನಾಗಿದೆ. ನಮ್ಮ ಹೊಸ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ’ ಎಂಬುದು ಮಧು ಮನವಿ.
ಅರುಣ್ ಇಲ್ಲಿ ಛಾಯಾಗ್ರಹಣ ಮಾಡಿದ್ದಾರೆ. ಇದಕ್ಕೂ ಮೊದಲು ಕೆಲ ಚಿತ್ರಗಳಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ವಿಜಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ನಿರೂಪಕಿಯ ತರಬೇತಿ ಪಡೆದ ಯಶಸ್ವಿನಿ ಇಲ್ಲಿ ನಾಯಕಿ ಗೆಳತಿ ಪಾತ್ರ ನಿರ್ವಹಿಸಿದ್ದಾರಂತೆ. ಚೇತನ್ ಚಂದ್ರು, ಕಿಶನ್ ತಮ್ಮ ಅನುಭವ ಹಂಚಿಕೊಂಡರು.