Advertisement

ಆ ರೋಗಿಯೊಳಗೆ ಇದ್ದನೊಬ್ಬ ಯೋಗಿ

12:30 AM Oct 12, 2018 | Team Udayavani |

ಮುಂದಿನ ಬಾರಿ ಬರುವಾಗ ಒಬ್ಬನೇ ಬರಬಾರದೆಂದೂ, ಮುಖ್ಯ ವಿಷಯ ಹೇಳುವುದಿದೆಯೆಂದೂ ಅದಕ್ಕಾಗಿ ಮಗನನ್ನೂ ಹೆಂಡತಿಯನ್ನೂ ಜೊತೆಯಾಗಿಸಿಕೊಂಡು ಬರಲು ತಿಳಿಸಿ ಕಳಿಸಿದೆ. ಆದರೆ ಅವನು ಜಗ್ಗುವ ಆಸಾಮಿಯಲ್ಲ ಎಂದು ನನಗೆ ಗೊತ್ತಾಗಿದ್ದು, ಮುಂದೆ ಮತ್ತೆ ಅವನೊಬ್ಬನೇ ಬಂದಾಗ! ಈ ಸಾರಿ ಬಯ್ದುಬಿಟ್ಟೆ.. “ಅವರನ್ನ ಯಾಕ ಕರಕೊಂಡ ಬರಬೇಕು, ಏನು ಅನ್ನೂದು ನನ್ನ ಮುಂದ ಹೇಳ್ರಿ’ ಅಂದ.  “ಇಲ್ಲಪ, ನಿನ್ನ ಮುಂದ ಹೇಳುವಂಥದಲ್ಲ ಅದು’ ಅಂದೆ. 

Advertisement

“ನನ್ನ ಹೆಂಡ್ತಿ ಮಕ್ಕಳಿಗಿ ನಾ ಇದನ್ನ ಹೇಳಿಲ್ರಿ…ಸುಮ್ಮನೆ ಅವರಿಗಿ ಯಾಕ ತ್ರಾಸ ಕೊಡೂದು…?’
ಒಬ್ಬ ರೋಗಿಯ ಬಾಯಿಂದ ಈ ಮಾತು ಕೇಳಿ ನಾನು ದಂಗಾಗಿ ಹೋದೆ. ಮಾತುಗಳೇ ಹೊರಡದ ಸ್ಥಿತಿ ನನ್ನದಾಯಿತು. ನನ್ನೆದುರಿಗೆ ಕುಳಿತವ ರೋಗಿಯೋ ಅಥವಾ ಯೋಗಿಯೋ ಅನಿಸತೊಡಗಿತು. ಮೌನ ಅಲ್ಲಿ ಮನೆ ಮಾಡಿತ್ತು. ಹೊರಗೆ ಸುಡುಬಿಸಿಲು ಕಾಯುತ್ತಿತ್ತು. ನನ್ನ ಚೇಂಬರ್‌ ವಾತಾನು ಕೂಲಿತವಿದ್ದರೂ ನನಗೆ ಕಸಿವಿಸಿ. ಏರ್‌ ಕಂಡೀಶನರ್‌ ಸಪ್ಪಳ ಬಿಟ್ಟರೆ ಅಲ್ಲೇನೂ ಶಬ್ದ ಇರದ ನೀರವಮೌನ… ಹೊರಗೆ ರೋಗಿಗಳ ಗದ್ದಲ…ಒಳಗೆ ಸಮುದ್ರದಡಿಯಲ್ಲಿ ಇರುವಂಥ ಗಂಭೀರ ಶಾಂತತೆ.

20  ವರ್ಷಗಳ ಹಿಂದೆ ನಾನು ಮುಧೋಳದಲ್ಲಿ ಪ್ರಾಕ್ಟೀಸ್‌ ಪ್ರಾರಂಭ ಮಾಡಿದಾಗಿನಿಂದ ತನಗೆ ಏನೇ ರೋಗ ಬಂದರೂ ಆತ ನನ್ನೆಡೆಗೆ ಬರುತ್ತಿದ್ದ. ಆಗ ಸುಮಾರು 50 ವಯಸ್ಸಿನವನಾದ ಅವನು ಈ ಅವಧಿಯಲ್ಲಿ ಒಂದು ದಿನವೂ ಬೇರೆ ರೋಗಿಗಳ ಹಾಗೆ ಅವಸರ ಮಾಡುವುದಾಗಲೀ, ಗಾಬರಿಗೊಳ್ಳುವುದಾಗಲೀ ಮಾಡಿದವನಲ್ಲ. ಶಾಂತತೆ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹಾಗೆ ನೋಡಿದರೆ, ನನ್ನ “ಮೆಚ್ಚಿನ ರೋಗಿ’ ಅಂತಲೇ ಅನ್ನಬಹುದೇನೋ..! ಹೌದು, ರೋಗಿಗಳಲ್ಲೂ ಕೆಲವರು ಬಹು ಮೆಚ್ಚುಗೆಯಾಗುತ್ತಾರೆ. ನಾವು ಹೇಳಿದ್ದನ್ನು° ಚಾಚೂತಪ್ಪದೇ ಪಾಲಿಸುತ್ತ, ಎಂಥ ಕಷ್ಟವಿದ್ದರೂ ಔಷಧಿಗಳನ್ನು ಸೇವಿಸುತ್ತ, ಆಸ್ಪತ್ರೆಗೆ ಬಂದಾಗ ಅವಸರ ಮಾಡದೆ ತಮ್ಮ ಸರತಿ ಬಂದಾಗಲೇ ತೋರಿಸಿ, ಯಾವ ವಶೀಲಿಬಾಜಿ ಮಾಡದೆ ವಿಧೇಯರಾಗಿ ಇದ್ದುಬಿಡುತ್ತಾರೆ. 

ಇಂಥ ರೋಗಿಗಳೆಂದರೆ ವೈದ್ಯರಿಗೆ ಪ್ರೀತಿ. ವಿಪರ್ಯಾಸವೆಂದರೆ ಅಂತಹ ಒಳ್ಳೆಯ ರೋಗಿಗಳ ಸಂಖ್ಯೆ ಈಗ ಕಡಿಮೆ. ಇವನು ಅಂಥ ಒಳ್ಳೆಯವರಲ್ಲಿ ಒಬ್ಬ. ಆತನಿಗೆ ಚಿಕ್ಕ ಪುಟ್ಟ  ಕಾಯಿಲೆಗಳನ್ನು ಬಿಟ್ಟರೆ ಒಳರೋಗಿಯಾಗುವಂಥ ಕಾಯಿಲೆ ಎಂದೂ ಕಾಡಿದ್ದಿಲ್ಲ. ವರ್ಷಕ್ಕೆ ಒಂದೆರಡು ಬಾರಿ ನನಗೆ ಕಾಣಿಸಿಕೊಳ್ಳುತ್ತಿದ್ದ ಅಷ್ಟೇ. ಅದೂ ನೆಗಡಿಯೋ, ಮೈ ಕೈ ನೋವೋ ಎನ್ನುವ ಸಣ್ಣ ಪುಟ್ಟ ಕಾಯಿಲೆಗಳಿಗೆ ಮಾತ್ರ. ಆಸ್ಪತ್ರೆಗೆ ಬರುವುದೆಂದರೆ ಬಂಧು ಬಾಂಧವರನ್ನು ಜೊತೆಯಾಗಿಸಿಕೊಂಡು, ಒಬ್ಬರ ರೋಗವನ್ನು ಇನ್ನೊಬ್ಬರೇ ಹೇಳುವ “ವಕೀಲಿ’ ಪರಿಪಾಠ ಇರುವ ನಮ್ಮ ಭಾಗದಲ್ಲಿ ಇವನು ಮಾತ್ರ ಯಾವಾಗಲೂ ಒಂಟಿಯಾಗಿಯೇ ಬರುತ್ತಿದ್ದ. ಹಾಗೆ ನೋಡಿದರೆ ಅವನು ನಿರೋಗಿಯೇ. ರಕ್ತದೊತ್ತಡವಾಗಲೀ, ಮಧುಮೇÖವಾಗಲೀ ಆತನ ಸನಿಹ ಕೂಡ ಸುಳಿದಿರಲಿಲ್ಲ. ಅಂದು ಅವನ ಮುಖ ಸ್ವಲ್ಪ ಕಳಾಹೀನವಾಗಿದ್ದರೂ ಅದೇ ಶಾಂತಭಾವ ಧರಿಸಿ ನನ್ನೆದುರಿಗೆ ಕುಳಿತ.
“ಏನಾಯಿತಿ ಯಾಕೋ ಸಪ್ಪಗ ಅದೀರೆಲಾ…?’ ಅಂದೆ. “ಏನಿಲ್ರಿ ಸರ್‌, ಸ್ವಲ್ಪ ಹೊಟ್ಟಿ ನೂಯಿಸೆತ್ರಿ, ಊಟ ಸೇರೋಲ್ದಿ (ಊಟ ಸೇರುತ್ತಿಲ್ಲ), ಉಬ್ಬಳಿಕೆ ಬರ್ತಾವ್ರಿ …ಬ್ಯಾರೆ ಏನಿಲ್ರಿ’ ಅಂದ. 

ಒಂದಿಷ್ಟೇ ತಲೆನೋವಿಗೋ, ಹೊಟ್ಟೆ ನೋವಿಗೂ ಆಕಾಶ ಭೂಮಿಯನ್ನು ಒಂದು ಮಾಡುವವರಿರುವಾಗ‌, ಈತ ಇಷ್ಟೆಲ್ಲಾ ಕಷ್ಟಗಳಿದ್ದೂ ಕೂಡ “ಬ್ಯಾರೆ ಎನಿಲ್ರಿ’ ಅಂದಿದ್ದ. ಯಾಕೋ ನನಗ ಸಂಶಯ. “ಸ್ಕ್ಯಾನಿಂಗ್‌ ಮಾಡಿ ನೋಡ್ತೀನ್ರಿ’ ಅಂದೆ ನಾನು. ಅವನು ಎಂದಿನಂತೆ ವಿಧೇಯನಾಗಿ “ಹೂn’ ಅಂದ.

Advertisement

ಪರೀಕ್ಷೆ ಮಾಡಿ ನೋಡಿದರೆ ಅವನ ಯಕೃತ್ತಿನ ತುಂಬೆಲ್ಲ ಕ್ಯಾನ್ಸರ್‌ ಗಡ್ಡೆಗಳು…! ದಿನವೂ ರೋಗಗಳನ್ನೇ ನೋಡಿ ನೋಡಿ ಒಂದಿಷ್ಟು ಕಲ್ಲು ಮನಸ್ಸಿನವನಾಗುತ್ತಿರುವ ನನಗೇ ಸಂಕಟವಾಯಿತು. ಒಳ್ಳೆಯ ವ್ಯಕ್ತಿಗಳಿಗೆ ಹೀಗಾದಾಗಲೆಲ್ಲ ನಾನು ಸಂಕಟಪಟ್ಟಿದ್ದೇನೆ. ಯಾಕಾದರೂ ಇಂಥ ರೋಗಗಳು ಇವರನ್ನು ಕಾಡುತ್ತವೆಯೋ ಎಂದು ಹಲವು ಬಾರಿ ಅನಿಸಿದೆ. “ಸರ್ವಗುಣ’ ಸಂಪನ್ನರಾದ ಹಲವರು ನಮ್ಮೆದುರಿಗೆ ಆರೋಗ್ಯವಂತರಾಗಿ, “ತುಂಬು ಜೀವನ’ ಬದುಕಿ, ಸುಖನಿದ್ರೆಯಲ್ಲಿಯೇ ಸಾಗಿ ಹೋದದ್ದನ್ನು ನೋಡಿದ್ದೇವೆ..  ಈಗ…ಯಾವ ಚಟಗಳನ್ನೂ ಮಾಡದ, ಯಾವತ್ತೂ ಆರೋಗ್ಯವಂತನಾದ, ಸೀದಾ ಸಾದಾ ಮನುಷ್ಯನಿಗೆ ಈ ಮಾರಣಾಂತಿಕ ರೋಗ. ಆದರೆ ಆತನೆದುರು ಅದನ್ನು ಹೇಳುವ ಮನಸ್ಸಾಗಲಿಲ್ಲ. ಅವನ ಮನಸ್ಸಿಗೆ ಘಾಸಿಯಾದೀತೆಂಬ ಆತಂಕ. ಅಲ್ಲದೆ, ಕೆಲವೊಮ್ಮೆ ರೋಗಿಗಳೆದುರು ಗಂಭೀರ ಕಾಯಿಲೆಗಳನ್ನು ಹೇಳಿದಾಗ ಅವರು ಖನ್ನರಾಗುವುದೂ, ಆಮೇಲೆ ಅವರ ಸಂಬಂಧಿಕರು ಬಂದು “ನಿಜ ಹೇಳಿದ್ದಕ್ಕೆ’ ಗಲಾಟೆ ಮಾಡುವುದೂ ಸಾಮಾನ್ಯ.

ಅದಕ್ಕೇ ಅವನಿಗೆ, “ಈಗ ಒಂದಿಷ್ಟು ಗುಳಿಗಿ ಔಷಧ ಬರದ ಕೊಡ್ತೀನಿ, ಮುಂದಿನ ಸಲ ನಿಮ್ಮ ಪೈಕಿ ಯಾರನ್ನರ ಕರಕೊಂಡ್‌ ಬರ್ರಿ..’ ಅಂದೆ.
“ಹೂಂ ಸರ್‌’ ಅಂದು ಹೋಗಿಯೇ ಬಿಟ್ಟ. ಒಂದು ವಾರ ಬಿಟ್ಟು ಮತ್ತೆ ಬಂದ. ಆದರೆ ಈ ಸಲವೂ ಒಬ್ಬಂಟಿಯಾಗಿಯೇ ಬಂದಿದ್ದ. ನನಗೋ ಧಾವಂತ, ಇವನಿಗೆ ಇನ್ನಷ್ಟು ಪರೀಕ್ಷೆಗಳನ್ನು ಮಾಡಿಸಿ ಸಾಧ್ಯವಿರುವ ಏನಾದರೂ ಆರೈಕೆ ಮಾಡಿಸಬೇಕೆಂದು. ಆದರೆ ಆತ ಶಾಂತಮೂರ್ತಿ. ಈ ಸಲ ತಾಕೀತು ಮಾಡಿದೆ, ಮುಂದಿನ ಬಾರಿ ಬರುವಾಗ ಒಬ್ಬನೇ ಬರಬಾರದೆಂದೂ, ಮುಖ್ಯ ವಿಷಯ ಹೇಳುವುದಿದೆಯೆಂದೂ ಅದಕ್ಕಾಗಿ ಮಗನನ್ನೂ ಹೆಂಡತಿಯನ್ನೂ  ಜೊತೆಯಾಗಿಸಿಕೊಂಡು ಬರಲು ತಿಳಿಸಿ ಕಳಿಸಿದೆ. ಆದರೆ ಅವನು ಜಗ್ಗುವ ಆಸಾಮಿಯಲ್ಲ ಎಂದು ನನಗೆ ವಿದಿತವಾಗಿದ್ದು, ಮುಂದೆ ಮತ್ತೆ ಅವನೊಬ್ಬನೇ ಬಂದಾಗ! ಈ ಸಾರಿ ಬಯ್ದುಬಿಟ್ಟೆ, ಹೀಗೇಕೆ ಮಾಡುತ್ತೀಯೆಂದು. “ಅವರನ್ನ ಯಾಕ ಕರಕೊಂಡ ಬರಬೇಕು, ಏನು ಅನ್ನೂದು ನನ್ನ ಮುಂದ ಹೇಳ್ರಿ’ ಅಂದ.

“ಇಲ್ಲಪ, ನಿನ್ನ ಮುಂದ ಹೇಳುವಂಥದಲ್ಲ ಅದು’ ಅಂದೆ “ನನಗ ಗೊತೈತ್ರಿ , ನನಗ ಕ್ಯಾನ್ಸರ್‌ ಐತಿ, ಹೌದಲ್ರಿ?’ ಅಂದ. ಈತನಿಗೆ ಹೇಗೆ ಗೊತ್ತಾಯಿತು ಎಂದು ಆಶ್ಚರ್ಯವಾಯಿತು ನನಗೆ. ನಮ್ಮ ಹುಡುಗರು ಯಾರಾದರೂ ಹೇಳಿರಬಹುದೇ? ಅನೇಕ ಬಾರಿ ಹಾಗಾಗಿದೆ. ಯಾವುದನ್ನು ನಾವು ನಾಜೂಕಾಗಿ ಮುಚ್ಚಿಡಬೇಕೆಂದು ಬಯಸುತ್ತೇವೋ ಅದಕ್ಕೆ ನಮ್ಮವರು ಬಣ್ಣ ಕಟ್ಟಿ ಸುದ್ದಿ ಮಾಡುವುದೂ ಇದೆ. ಯಾಕೆಂದರೆ ಕೆಲವೊಬ್ಬರಿಗೆ ಸುದ್ದಿ ಮಾಡುವುದೇ ಒಂದು ಖುಷಿಯ ಕೆಲಸ.

“ಹೌದು, ನಿಮಗ ಯಾರು ಹೇಳಿದ್ರು?’ ಅಂದೆ. “ಮೊನ್ನೆ ನಿಮ್ಮಲ್ಲಿ ಬರೂಕಿಂತ ಮೊದಲ ಮಿರಜ್‌ ದವಾಖಾನಿಗಿ ಹೋಗಿದ್ದಿನ್ರಿ. ಅಲ್ಲಿ ಹೇಳಿ ಬಿಟ್ಟಾರ್ರಿ. ನಾ ಇನ್ನ ಭಾಳ ದಿನ ಬದುಕುದಿಲ್ಲ ಅಂತನೂ ನನಗ ಗೊತೈತ್ರಿ…’ ಅವನ ಮನೋಸ್ಥೈರ್ಯಕ್ಕೆ, ಬಂದ ಕಷ್ಟಗಳನ್ನು ನಿರ್ಲಿಪ್ತನಾಗಿ ಸ್ವೀಕರಿಸಿದ ಅವನ ಮನಸ್ಥಿತಿಗೆ ನಾನು ದಂಗಾಗಿ ಹೋದೆ. ಸಣ್ಣ ಪುಟ್ಟ ರೋಗಗಳಿಗೆ ಬೋರಾಡಿ ಆಳುವವರನ್ನು ಕಂಡ ನನಗೆ ಅವನ ಧೈರ್ಯದ ಬಗ್ಗೆ ಮೆಚ್ಚುಗೆಯೂ, ಅವನ ಬಗ್ಗೆ ಕರುಣೆಯೂ ಜೊತೆಯಾಗಿ ಉದ್ಭವಿಸಿದವು.

ಒಂದು ಕ್ಷಣ ನನ್ನನ್ನೇ ನಾನು ಸಾವರಿಸಿಕೊಂಡು, “ಎಲ್ಲಾ ಗೊತ್ತಿದ್ರೂ ನಿಮ್ಮವರನ್ನ ಯಾಕ ಕರಕೊಂಡ ಬರಲಿಲ್ಲ?’ ಅಂದೆ.  ಅದ್ದಕ್ಕೆ ಆತ “ನನ್ನ ಹೆಂಡ್ತಿ ಮಕ್ಕಳಿಗಿ ನಾ ಇದನ್ನ ಹೇಳಿಲ್ರಿ… ಸುಮ್ಮನೆ ಅವರಿಗಿ ಯಾಕ ತ್ರಾಸ ಕೊಡೂದು.? ನಾ ಅಂತೂ ಸಾಯ್ತಿàನ್ರಿ, ಎಷ್ಟ ದಿನ ಜಗ್ಗತೈತೋ ಜಗ್ಗಲಿ ಈ ಗಾಡಿ. ಆಮ್ಯಾಲೆ ಅವರಿಗೆ ಗೊತ್ತಾಗಲಿ. ಅವರ ದುಃಖ ಒಂದಿಷ್ಟು ಕಡಿಮಿ ಆಗಲಿ. ನಾನು ಸೀರಿಯಸ್‌ ಆಗೂತನಕನಾದ್ರೂ ಅವರು ಸುಖದಿಂದ ಇರ್ಲಿರಿ. ಅದರೂ ಸಾಹೇಬ್ರ… ನಾನೂ ಒಂದಿಷ್ಟು ಕನಸ ಕಂಡಿದ್ದೆ. ನಂದ(ನನ್ನದೇ) ಸ್ವಂತ ಮನಿ ಇರ್ಲಿ ಅಂತ. 

ಅದಕ್ಕ ಒಂದ ಮನಿ ಕಟ್ಟಾಕ ಸುರು ಮಾಡಿದ್ದೆ, ಅದರ ಮ್ಯಾಲ ಒಂದಿಷ್ಟು ಸಾಲ ಇತ್ರಿ. ಈ ರೋಗ ಯಾವಾಗ ಗೊತ್ತಾಯೊ¤à ಆವಾಗ ಎರಡ ಎಕರೆ ಹೊಲ ಮಾರಿ ಸಾಲ ಹರದೀನ್ರಿ(ತೀರಿಸಿದೆ). ಉಳದ ಆಸ್ತಿಯೆಲ್ಲ ಮಗನ ಹೆಸರಿಗೆ ಮಾಡಿ, ಆರಾಮ ಹೋಗಿ ಬಿಡ್ತೀನ್ರಿ. ಸಾಯೂದಕ್ಕ ನನಗೇನೂ ಅಂಜಿಕಿ ಇಲ್ರಿ. ಎಲ್ಲಾರೂ ಒಂದ ದಿನ ಸಾಯೋದು ಇದ್ದದ್ದ. ಆದರ ಹೊಸ ಮನಿಯೊಳಗ ಒಂದಿಷ್ಟು ದಿನ ಇರೂ ಮನಸ್ಸಿತ್ತು. ಮನಿ ಓಪನಿಂಗ್‌ಕ್ಕ ನಾ ಇರೂದಿಲ್ರಿ. ಸ್ವಲ್ಪ ಲಗೂನ(ಬೇಗನೇ) ಹೊಂಟೆ. ಅದೊಂದ ಸಂಕಟ ನನಗ.’ ಇಷ್ಟು ಹೇಳಿ ಕೊನೆಗೆ ಅವನಂದ, “ಅಂದಹಾಂಗ ಸಾಹೇಬ್ರ, ಮನಿ ಓಪನಿಂಗ್‌ಕ್ಕ ನಿಮ್ಮನ್ನ ಕರಿಬೇಕು ಅಂತ ನನ್ನ ಮಗನಿಗಿ ಹೇಳ್ತೀನ್ರಿ, ಬಂದ್‌ ಹೋಗ್ರಿ…’ ಮುಂದಿನದನ್ನು ನಾನು ಕೇಳಿಸಿಕೊಳ್ಳುವುದಕ್ಕೂ ಮೊದಲೇ ನನ್ನ ಕಣ್ಣು ತೇವಗೊಂಡವು. ಗಂಟಲು ಉಬ್ಬಿತು. ಅವನೆದುರು ಕುಳಿತುಕೊಳ್ಳಲಾಗಲಿಲ್ಲ. ರೌಂಡ್ಸ್ ಮಾಡುವ ನೆಪ ಮಾಡಿ ನಾನು ಎದ್ದುಬಿಟ್ಟೆ. ತಿರುಗಿ ಬಂದಾಗ ಆತ ನನ್ನ ಚೇಂಬರ್‌ನಲ್ಲಿ ಇರಲಿಲ್ಲ.

ಮುಂದೆ ಅನೇಕ ತಿಂಗಳುಗಳ ನಂತರ ಅವನ ಮಗ ಬಂದು ಮನೆಯ ಓಪನಿಂಗ್‌ಗೆ ನನ್ನನ್ನು ಕರೆದ…

ಡಾ. ಶಿವಾನಂದ ಕುಬಸದ

Advertisement

Udayavani is now on Telegram. Click here to join our channel and stay updated with the latest news.

Next