Advertisement

ಸಿನ್ಮಾದಲ್ಲೊಂದು ಸೀರಿಯಲ್

08:50 PM Jun 27, 2019 | Team Udayavani |

“ಅದು ಚಿತ್ರಾಪುರ. ನಟ ಶಂಕರ್‌ನಾಗ್‌ ಅವರು ಆಡಿ, ಬೆಳೆದ ಊರು. ಆ ಊರಲ್ಲೇ ಶಂಕರ್‌ನಾಗ್‌ ಅಭಿಮಾನಿಯೊಬ್ಬ “ನಾಲಿಗೆಗೆ ಜ್ವರ ಬಂದಂತಿದೆ…’ ಎಂದು ಹಾಡಿ ಕುಣಿದು ಕುಪ್ಪಳಿಸಿದ್ದಾನೆ…!

Advertisement

– ಹೀಗೆಂದಾಕ್ಷಣ ಸ್ವಲ್ಪ ಗೊಂದಲ ಆಗಬಹುದು. ವಿಷಯವಿಷ್ಟೇ, ಇದು “ಫ್ಯಾನ್‌’ ಚಿತ್ರದ ಸುದ್ದಿ. ಅಭಿಮಾನಿಯ ಅಭಿಮಾನದ ಕಥೆ ಇದಾಗಿರುವುದರಿಂದ ಶಂಕರ್‌ನಾಗ್‌ ಅವರ ಊರಲ್ಲಿ ಒಂದಷ್ಟು ಚಿತ್ರೀಕರಣಗೊಂಡಿದೆ. ಈಗ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಇತ್ತೀಚೆಗೆ ಹಾಡುಗಳನ್ನು ಬಿಡುಗಡೆ ಮಾಡಿತು. ಅಂದು ನಟ ರಕ್ಷಿತ್‌ಶೆಟ್ಟಿ ಆಡಿಯೋ ಸಿಡಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು. ಅದಕ್ಕೂ ಮುನ್ನ ಹಾಡೊಂದನ್ನು ತೋರಿಸುವ ಮೂಲಕ ನಿರ್ದೇಶಕ ದರ್ಶಿತ್‌ ಭಟ್‌ ಮಾತಿಗಿಳಿದರು. “ಇದು ಸೂಪರ್‌ಹಿಟ್‌ ಸೀರಿಯಲ್‌ ಒಂದರ ನಾಯಕ ಮತ್ತು ಆ ಸೀರಿಯಲ್‌ ಹಾಗು ಆ ನಾಯಕನನ್ನು ಅತಿಯಾಗಿ ಇಷ್ಟಪಡುವ ಅಭಿಮಾನಿಯೊಬ್ಬಳ ಕಥೆ ಹೊಂದಿದೆ. ಇನ್ನು ಚಿತ್ರದ ಮತ್ತೂಂದು ಆಕರ್ಷಣೆ ಎಂದರೆ ಅದು ಶಂಕರ್‌ನಾಗ್‌. ಇಲ್ಲಿ ಚಿತ್ರದ ಹೀರೋ ಶಂಕರ್‌ನಾಗ್‌ ಅವರ ಅಭಿಮಾನಿ. ಶಂಕರ್‌ನಾಗ್‌ ಸ್ಪೂರ್ತಿಯಿಂದ ಬೆಳೆದ ನಾಯಕ ಅವನು. ಉತ್ತರ ಕನ್ನಡ ಭಾಷೆ ಚಿತ್ರದ ಮತ್ತೂಂದು ಹೈಲೈಟ್‌. ಇಲ್ಲಿ ಮನರಂಜನೆಗೆ ಮೋಸವಿಲ್ಲ. ಹಾಡುಗಳು ಸಹ ಎಲ್ಲರಿಗೂ ಇಷ್ಟವಾಗುವಂತಿದ್ದು, ವಿನಾಕಾರಣ ತುರುಕದೆ, ಕಥೆಗೆ ಪೂರಕವಾಗಿ ಹಾಡುಗಳಿವೆ ‘ ಎಂದರು ಅವರು.

ಚಿತ್ರಕ್ಕೆ ವಿಕ್ರಮ್‌ ಚಂದನ್‌ ದಂಪತಿ ಸಂಗೀತ ನೀಡಿದ್ದು, ಅವರಿಲ್ಲಿ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರಂತೆ. ಆ ಪೈಕಿ ಮೂರು ಹಾಡುಗಳಷ್ಟೇ ಚಿತ್ರದಲ್ಲಿದ್ದು, ಒಂದು ಹಾಡು ಆಲ್ಬಂನಲ್ಲಿದೆ. ಯೋಗರಾಜ್‌ ಭಟ್‌ ಕೇವಲ ಮೂರು ತಾಸಿನಲ್ಲಿ ಸಾಹಿತ್ಯ ರಚಿಸಿದ್ದು ವಿಶೇಷ ಎನ್ನುವ ವಿಕ್ರಮ್‌, ಜಯಂತ್‌ಕಾಯ್ಕಿಣಿ, ದರ್ಶಿತ್‌ ಭಟ್‌ ಸಾಹಿತ್ಯವಿದೆ. ವಿಜಯಪ್ರಕಾಶ್‌, ಸಂಚಿತ್‌ ಹೆಗಡೆ, ಕಾರ್ತಿಕ್‌, ಅನನ್ಯ ಭಟ್‌, ಅಂಕಿತಾ ಕುಂದು ಹಾಡಿದ್ದಾರೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತವಿದೆ. ಇದು ಎರಡನೇ ಸಿನಿಮಾ. ಎಲ್ಲರ ಸಹಕಾರ ಇರಲಿ ‘ ಎಂದರು ವಿಕ್ರಮ್‌.

ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ, ಶಾಸಕ ಕೃಷ್ಣಪ್ಪ, ಭಾ.ಮಾ. ಹರೀಶ್‌, ಆನಂದ್‌ ಆಡಿಯೋದ ಆನಂದ್‌ ಛಾಬ್ರಿಯಾ, ನಾಯಕ ಆರ್ಯನ್‌, ನಾಯಕಿ ಅದ್ವಿತಿಶೆಟ್ಟಿ, ನಿರ್ಮಾಪಕರಾದ ಸವಿತಾ ಈಶ್ವರ್‌, ಕಾರ್ಯಕಾರಿ ನಿರ್ಮಾಪಕ ರಾಜಮುಡಿ ದತ್ತ, ಛಾಯಾಗ್ರಾಹಕ ಪವನ್‌ಕುಮಾರ್‌, ಸಂಕಲನಕಾರ ಗಣಪತಿ ಭಟ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next