Advertisement

ಬೆಳ್ಮಣ್‌ ಜಂತ್ರದಲ್ಲೊಂದು ಅಪಘಾತ ವಲಯ

12:15 PM Jul 06, 2019 | sudhir |

ಬೆಳ್ಮಣ್‌: ಇಲ್ಲಿಂದ ಶಿರ್ವಕ್ಕೆ ಸಾಗುವ ದಾರಿಯ ಜಂತ್ರ ಎಂಬಲ್ಲಿ ಅಪಾಯಕಾರಿ ತಿರುವಿನೊಂದಿಗೆ ಇಳಿಜಾರಿನ ರಸ್ತೆಯೊಂದಿದ್ದು, ತೀರ ಅಪಾಯಕಾರಿಯಾಗಿದೆ. ಈ ರಸ್ತೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದ್ದರೂ, ಅದನ್ನು ಸರಿಪಡಿಸುವ ಗೋಜಿಗೆ ಲೋಕೋಪಯೋಗಿ ಇಲಾಖೆ ಹೋಗಿಲ್ಲ.

Advertisement

ತಿರುವು ಮತ್ತು ಇಳಿಜಾರಿನ ಕಾರಣ ಶಿರ್ವದಿಂದ ಬೆಳ್ಮಣ್‌ಗೆ ಬರುವ ವಾಹನಗಳು ಅತಿ ವೇಗವಾಗಿ ಬರುತ್ತವೆ. ಎದುರಿನಿಂದ ವಾಹನಗಳು ಬರುವುದು ಅರಿವಿಲ್ಲದೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ತಜ್ಞರು, ಪೊಲೀಸ್‌ ಇಲಾಖೆ, ವಾಹನ ಚಾಲಕರು ಹಲವು ಬಾರಿ ಸಲಹೆಗಳನ್ನು ನೀಡಿದ್ದರೂ ಇಲಾಖೆ ಕೇಳಿಸಿಕೊಂಡಿಲ್ಲ.

ಅಪಘಾತಗಳ ಸರಮಾಲೆ

ರಸ್ತೆ ಸಮಸ್ಯೆಯಿಂದಾಗಿ ಇಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಪೊಲೀಸ್‌ ಪೇದೆಯೊಬ್ಬರ ಸಹೋದರ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದರೆ, ಕಳೆದ ಫೆ. 23ರಂದು ಖಾಸಗಿ ಬಸ್‌ ಟಿಪ್ಪರಿಗೆ ಢಿಕ್ಕಿಯಾಗಿ ಮೋಕ್ಷಿತಾ ಎಂಬವರು ಮೃಪಟ್ಟಿದ್ದರು.

ವಿವಾಹಿತ ಮಹಿಳೆ ಸಹಿತ ಹಲವು ಪ್ರಯಾಣಿಕರು ಗಾಯ ಗೊಂಡಿದ್ದರು. ಬಸ್ಸಿನ ಚಾಲಕನ ಕಾಲು ಊನವಾಗಿತ್ತು. ಟಿಪ್ಪರ್‌ ಚಾಲಕನೂ ಹಾಸಿಗೆ ಹಿಡಿದಿದ್ದಾರೆ. ಮೇ 28ರಂದು ಬೈಕ್‌ಗಳು ಢಿಕ್ಕಿಯಾಗಿ ಒಬ್ಬರು ಮೃತಪಟ್ಟಿದ್ದರು. ಹೀಗೆ ತಿರುವಿನ ಬಗ್ಗೆ ತಿಳಿಯದೆ ಅಪಘಾತಗಳು ನಡೆಯುತ್ತಲೇ ಇವೆ.

Advertisement

ಎಚ್ಚರಿಕೆ ಫಲಕವೂ ಬೇಕು

ಈಗಾಗಲೇ ಬೆಳ್ಮಣ್‌ ರೋಟರಿ ಸಂಸ್ಥೆ ಇಲ್ಲಿ ಅಪಘಾತ ವಲಯ ಎಂಬ ಎಚ್ಚರಿಕೆ ಫಲಕ ಹಾಕಿದೆ. ಆದರೆ ದೊಡ್ಡದಾದ ಫ‌ಲಕವೊಂದನ್ನು ಲೋಕೋಪ‌ಯೋಗಿ ಇಲಾಖೆ ಆಥವಾ ಪೊಲೀಸ್‌ ಇಲಾಖೆಯ ವತಿಯಿಂದ ಸೂಚನ ಫ‌ಲಕ ಅಳವಡಿಸಿದರೆ ಉತ್ತಮ ಎಂದು ಜನರು ಹೇಳುತ್ತಿದ್ದಾರೆ.

ಹಂಪ್ಸ್‌ ಅಳವಡಿಸಿ

ರಸ್ತೆಯ ಇಳಿಜಾರು ತೆಗೆದು ಅಗಲೀಕರಣ ನಡೆಸಿ, ಎರಡೂ ಭಾಗಗಳಲ್ಲಿ ರಸ್ತೆ ಉಬ್ಬು (ಹಂಪ್ಸ್‌ ) ಅಳವಡಿಸಬೇಕೆಂಬ ಆಗ್ರಹವಿದೆ. ಇದರಿಂದ ಎರಡೂ ಕಡೆಗಳಿಂದ ಬರುವ ವಾಹನಗಳ ವೇಗಕ್ಕೆ ತಡೆ ಬೀಳಲಿದ್ದು, ಅಪಘಾತ ತಪ್ಪಿಸ ಬಹುದಾಗಿದೆ.

ಭರವಸೆ ಸಿಕ್ಕಿದೆ

ರಸ್ತೆ ಅಗಲೀಕರಣಕ್ಕೆ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಭರವಸೆಯೂ ಸಿಕ್ಕಿದೆ.
– ನಾಸಿರ್‌ ಹುಸೇನ್‌, ಠಾಣಾಧಿಕಾರಿ, ಕಾರ್ಕಳ ಗ್ರಾ. ಪೊಲೀಸ್‌ ಠಾಣೆ
ಕ್ರಮ ಕೈಗೊಂಡಿಲ್ಲ

ಜಂತ್ರ ರಸ್ತೆಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಚ್ಚರಿಕೆ ಫಲಕ ಮಾತ್ರ ಆಳವಡಿಸಿದರೆ ಸಾಲದು ಬದಲಾಗಿ ಈ ಅವೈಜ್ಞಾನಿಕ ರಸ್ತೆಯನ್ನು ಅಗಲೀಕರಣಗೊಳಿಸಿ ತಿರುವು ತೆಗೆದು ಇಳಿಜಾರು ಮುಕ್ತವನ್ನಾಗಿಸಬೇಕು.
-ಸರ್ವಜ್ಞ ತಂತ್ರಿ, ವಕೀಲರು ಬೆಳ್ಮಣ್‌
Advertisement

Udayavani is now on Telegram. Click here to join our channel and stay updated with the latest news.

Next