Advertisement

ಇಲ್ಲೊಬ್ಬ 200 ತೀರ್ಥಕ್ಷೇತ್ರ ದರ್ಶನದ ಸಾಧಕ

10:40 AM Feb 28, 2018 | Team Udayavani |

ಉಡುಪಿ ಒಂದೆರಡು ವಾರ ಅಥವಾ ಕೆಲವು ತಿಂಗಳು ತೀರ್ಥಯಾತ್ರೆ ಮಾಡುವುದಿದೆ. ಇಲ್ಲೊಬ್ಬ ಸಾಧಕ ಬರೋಬ್ಬರಿ 200
ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ಅದೂ ಕೂಡ ಶ್ರೀ ವಾದಿರಾಜ ಸ್ವಾಮಿಗಳು ಬರೆದ “ತೀರ್ಥಪ್ರಬಂಧ’ದಲ್ಲಿ ತಿಳಿಸಿದಂತೆ…
ತೀರ್ಥಪ್ರಬಂಧದಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ -ಹೀಗೆ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಇದರಲ್ಲಿ ಒಟ್ಟು ಸುಮಾರು 150 ಕ್ಷೇತ್ರಗಳಿವೆ. ಇವಲ್ಲದೆ ಅಕ್ಕಪಕ್ಕದ ಕ್ಷೇತ್ರಗಳು, ವಿಜಯದಾಸರು-ಜಗನ್ನಾಥದಾಸರು ವರ್ಣಿಸಿದ ಕ್ಷೇತ್ರಗಳು ಹೀಗೆ ಇವರ ಕ್ಷೇತ್ರಗಳ ಸಂಖ್ಯೆ 200 ಮೀರಿವೆ. ಕ್ಷೇತ್ರ ದರ್ಶನದಲ್ಲಿ ನದಿಗಳ ಸ್ನಾನ, ಗಿರಿಪರ್ವತಗಳ ದರ್ಶನವೂ ಇದೆ. ಇದಕ್ಕೆ ತಗಲಿದ ಸಮಯ ಸುಮಾರು ಎರಡು ವರ್ಷ. ಕೆಲವೆಡೆ ಬಸ್‌, ಕೆಲವೆಡೆ ರೈಲು, ಇನ್ನು ಕೆಲವೆಡೆ ಕಾಲ್ನಡಿಗೆಯಲ್ಲಿ ಪ್ರವಾಸ ಮುಗಿಸಿದ್ದಾರೆ.

Advertisement

“ದೇವರು, ಗುರುಗಳು ನನ್ನಿಂದ ಈ ಪ್ರವಾಸವನ್ನು ಮಾಡಿಸಿಕೊಂಡಿದ್ದಾನೆ. ಇದರಲ್ಲಿ ನನ್ನ ದೊಡ್ಡ ತನವೇನೂ ಇಲ್ಲ’ ಎನ್ನುತ್ತಾರೆ ಈ ಕ್ಷೇತ್ರ ದರ್ಶನ ಮಾಡಿದ ನಿಜಾರ್ಥದ “ಪುಣ್ಯಾತ್ಮ’, ಕಲಬುರಗಿ ಮತ್ತು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಬೆಳೆದ ಗೋಪಿನಾಥರು.

ವಿಧವಿಧ ಅನುಭವ ವಿಶೇಷವೆಂದರೆ ಮೊದ ಮೊದಲು ಅವರಿವರು ಕೊಟ್ಟ ದಕ್ಷಿಣೆಯನ್ನು ಖರ್ಚಿಗೆ ಬಳಸಿಕೊಂಡರೆ, ಅದು ಖಾಲಿಯಾದ ಬಳಿಕ ಭಿಕ್ಷಾಟನೆ ಮಾಡಿದ್ದಿದೆ. ಉಳಿದುಕೊಳ್ಳಲು ದೇವಸ್ಥಾನ, ಮಠಗಳನ್ನು ಆಶ್ರಯಿಸಿಕೊಂಡರೆ ಕೆಲವಡೆ ಅವಕಾಶ ನಿರಾಕರಿಸಿ ಕಷ್ಟ
ಪಟ್ಟದ್ದೂ ಇದೆ. ವಸತಿ ಸಿಕ್ಕಿದಾಗ ವಾರ ಉಳಿದುಕೊಂಡದ್ದೂ, ವಸತಿ ಸಿಗದಾಗ ದರ್ಶನ ಮಾಡಿ ಮುಂದುವರಿದದ್ದೂ ಇದೆ.

ಪೇಜಾವರ ಮಠ ಇದ್ದಲ್ಲೆಲ್ಲ ಭಾರೀ ಅನುಕೂಲವಂತೆ. ಗುರುತು ಚೀಟಿ ಇದ್ದರೂ ರೈಲು ನಿಲ್ದಾಣ, ಬಸ್ಸು ನಿಲ್ದಾಣಗಳಲ್ಲಿ ಪೊಲೀಸರು ಬಿಡದೆ ಇದ್ದ ಅನುಭವವೂ ಇವರಿಗೆ ಆಗಿದೆ. ಇದು ಒಂದೇ ಸಮನೆ ಎರಡು ವರ್ಷಗಳಲ್ಲಿ ಮಾಡಿದ ಸಂಚಾರವಲ್ಲ. ವಿಶೇಷ ಉತ್ಸವಗಳು ನಡೆದಾಗ ಅಲ್ಲಿಗೆ ಬಂದು ಅಲ್ಲಿಂದ ಮರಳಿ ಪ್ರವಾಸವನ್ನು ಮುಂದುವರಿಸಿದರು.

ತೀರ್ಥ ಪ್ರಬಂಧ ಗ್ರಂಥ ಶುರುವಾಗುವುದು ಉಡುಪಿಯಿಂದ, ಕೊನೆಗೊಳ್ಳುವುದು ಕೇರಳದ ಅನಂತಶಯನದಲ್ಲಿ. ಎರಡು ದಿನಗಳ ಹಿಂದೆ ಅನಂತಶಯನಕ್ಕೆ ಬಂದು ಅಲ್ಲಿಂದ ಗುರುವಾಯೂರು, ರವಿವಾರ ಕಾಂಞಂಗಾಡ್‌ ರಾಮದಾಸ ಆಶ್ರಮಕ್ಕೆ ಬಂದು ಸೋಮವಾರ ಉಡುಪಿಗೆ ಆಗಮಿಸಿದ್ದಾರೆ.

Advertisement

ಆಟೊಮೊಬೈಲ್‌ ಟೆಕ್ನಿಶಿಯನ್‌ ಆದ ಇವರು ಬೆಂಗಳೂರಿನ ಅಯಾಚಿತ ಧೀರೇಂದ್ರಾಚಾರ್ಯರಲ್ಲಿ ದಾಸದೀಕ್ಷೆ ಪಡೆದು ಕೆಲವು ಕಾಲ ದಾಸ ಪದ್ಧತಿಯಂತೆ ಊಂಛವೃತ್ತಿ (ಯಯಾವಾರ= ಭಿಕ್ಷೆ) ನಡೆಸಿದ್ದರು. ಉಡುಪಿಯಲ್ಲಿಯೂ 2 ಬಾರಿ ನಡೆಸಿದ್ದರಂತೆ. ಎರಡು ವರ್ಷಗಳ ಹಿಂದೆ ಅನಾರೋಗ್ಯಪೀಡಿತರಾದಾಗ ತಾಳತಂಬೂರಿ ಯನ್ನು ಗಂಗಾ ನದಿಯಲ್ಲಿ ಬಿಟ್ಟರು. ಆರೋಗ್ಯ ಸುಧಾರಿಸಿದ ಬಳಿಕ ತೀರ್ಥಯಾತ್ರೆಯನ್ನು ಕೈಗೊಂಡರು. ಆಗಲೂ ಈಗಲೂ ಗಂಟೆಗಟ್ಟಲೆ ದಾಸರ ಹಾಡುಗಳನ್ನು ಪುಸ್ತಕದ ನೆರವಿಲ್ಲದೆ ನಿರರ್ಗಳವಾಗಿ ಹೇಳುತ್ತಾರೆ. ತೀರ್ಥಕ್ಷೇತ್ರಗಳಲ್ಲಿ ಇವರ ಸಮರ್ಪಣೆ ಎಂದರೆ ಹಾಡುಗಳೇ!

Advertisement

Udayavani is now on Telegram. Click here to join our channel and stay updated with the latest news.

Next