Advertisement

ಜೂನ್‌ನಿಂದ ಒಂದು ರಾಷ್ಟ್ರ –ಒಂದು ಓಂಬುಡ್ಸ್‌ಮನ್‌ : ದೂರು ನೀಡಲು ಏಕ ವೇದಿಕೆ

12:30 AM Feb 06, 2021 | Team Udayavani |

ಮುಂಬಯಿ: ಬ್ಯಾಂಕಿಂಗ್‌ ಗ್ರಾಹಕ ದೂರುಗಳ ಪರಿಹಾರವನ್ನು ಏಕತ್ರಗೊಳಿಸಿ ದೇಶಾದ್ಯಂತ ಒಂದೇ ಓಂಬುಡ್ಸ್‌ಮನ್‌ ವ್ಯವಸ್ಥೆ ಜಾರಿಗೆ ತರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಪ್ರಕಟಿಸಿದೆ. ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆಯ ಬಳಿಕ ಗವರ್ನರ್‌ ಶಕ್ತಿಕಾಂತ ದಾಸ್‌ ಈ ವಿಚಾರವನ್ನು ತಿಳಿಸಿದ್ದಾರೆ.

Advertisement

ಸದ್ಯ ಈ ಸಂಬಂಧ ಮೂರು ವ್ಯವಸ್ಥೆಗಳು ಜಾರಿಯಲ್ಲಿವೆ. ವ್ಯಾಜ್ಯ ಮತ್ತು ದೂರು ಪರಿಹಾರ ಪ್ರಕ್ರಿಯೆ ಯನ್ನು ಸರಳ ಮತ್ತು ಸುಲಭಗೊಳಿಸಲು ಮತ್ತು ವ್ಯವಸ್ಥೆಯನ್ನು ಹೆಚ್ಚು ಪ್ರತಿಸ್ಪಂದ ನಾತ್ಮಕಗೊಳಿಸುವುದಕ್ಕಾಗಿ “ಒಂದು ರಾಷ್ಟ್ರ- ಒಂದು ಓಂಬುಡ್ಸ್‌ಮನ್‌’ ನೀತಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಹೇಗೆ ನೆರವಾಗಲಿದೆ?
- ಏಕೀಕೃತ ನಿರ್ವಹಣ ಕೇಂದ್ರದಿಂದ ಆರ್‌ಬಿಐಗೆ ಎಷ್ಟು ಪ್ರಮಾಣದಲ್ಲಿ ದೂರುಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿ ಮತ್ತು ಅವುಗಳ ವಿಲೇವಾರಿ ಮೇಲೆ ನಿಗಾಕ್ಕೆ ಅನುಕೂಲ.
- ಯಾವ ಕ್ಷೇತ್ರಗಳ ಮೇಲೆ, ಯಾವ ಪ್ರದೇಶದಿಂದ ವ್ಯಾಜ್ಯ ದಾಖಲು ಎಂಬ ಬಗ್ಗೆ ನಿಖರ ಮಾಹಿತಿ.

ಬಡ್ಡಿ ದರ ಯಥಾಸ್ಥಿತಿ
ಬಜೆಟ್‌ ಬಳಿಕದ ಮೊದಲ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೋ ದರ ಮತ್ತು ರಿವರ್ಸ್‌ ರೆಪೋ ದರಗಳನ್ನು ಕ್ರಮವಾಗಿ ಶೇ. 4 ಮತ್ತು ಶೇ. 3.35ರಲ್ಲೇ ಮುಂದುವರಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ತೈಲ ದರ ಇಳಿಸಿ
ಹಣದುಬ್ಬರ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರ್‌ಬಿಐ, ಪೆಟ್ರೋಲ್‌ -ಡೀಸೆಲ್‌ ದರ ಇಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಲಹೆ ನೀಡಿದೆ. ಅಬಕಾರಿ ಸುಂಕ ಕಡಿಮೆ ಮಾಡಿ ತೈಲ ದರ ಇಳಿಸಿದರೆ ಹಣದುಬ್ಬರ ಇಳಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement

ಡಿಜಿಟಲ್‌ ಪಾವತಿಗೆ ಒಂದು ಹೆಲ್ಪ್ಲೈನ್‌
ಡಿಜಿಟಲ್‌ ಪಾವತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಸಮಸ್ಯೆಗಳು ಮತ್ತು ಪ್ರಶ್ನೆಗಳಿಗೆ ಪರಿಹಾರ ನೀಡುವುದಕ್ಕಾಗಿ ಕೇಂದ್ರೀಯ ಸಹಾಯವಾಣಿ ಸ್ಥಾಪಿಸಲು ಆರ್‌ಬಿಐ ನಿರ್ಧರಿಸಿದೆ. ಇದು ವಿವಿಧ ಡಿಜಿಟಲ್‌ ಪಾವತಿ ಉತ್ಪನ್ನಗಳ ಬಗ್ಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು, ಲಭ್ಯ ದೂರು ಪರಿಹಾರ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತದೆ ಎಂದು ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಖಾದ್ಯ ತೈಲ, ದ್ವಿದಳ ಧಾನ್ಯ ತುಟ್ಟಿ
ಪ್ರಸಕ್ತ ತ್ತೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ. 5.2ಕ್ಕೆ ಇಳಿಯಲಿದ್ದು, ಮುಂದಿನ ಹಣಕಾಸು ವರ್ಷದ 3ನೇ ತ್ತೈಮಾಸಿಕದಲ್ಲಿ ಅದು ಶೇ. 4.3ಕ್ಕೆ ತಲುಪಲಿದೆ. ಇದರಿಂದ ಕ್ರಮೇಣ ತರಕಾರಿ, ಮೊಟ್ಟೆ ದರಗಳು ಕುಸಿಯಲಿವೆ. ಆದರೆ ದ್ವಿದಳ ಧಾನ್ಯಗಳು, ಖಾದ್ಯ ತೈಲ, ಮಸಾಲೆ ಪದಾರ್ಥಗಳು, ಟೀ-ಕಾಫಿ, ಕೈಗಾರಿಕಾ ಕಚ್ಚಾ ವಸ್ತುಗಳ ದರ ಈಗಿನಂತೆಯೇ ತುಟ್ಟಿಯಾಗಿರಲಿವೆ ಎಂದು ದಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next