Advertisement

ಒಂದು ದೇಶ, ಒಂದು ಚುನಾವಣೆ ಕಾರ್ಯಸಾಧುವೇ? 

06:00 AM Sep 02, 2018 | |

ರಾಜ್ಯದಲ್ಲಿ ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಧೂಳು ಇನ್ನೂ ನಿಂತಿಲ್ಲ. ಅಂಟಿಸಿದ ಪೋಸ್ಟರ್‌ಗಳು, ಬ್ಯಾನರ್‌, ಫ್ಲೆಕ್ಸ್‌ , ಬಂಟಿಂಗ್ಸ್‌,  ಹೋರ್ಡಿಂಗ್ಸ್‌ಗಳು ಇನ್ನೂ ಪೂರ್ಣ ಮಾಸಿಲ್ಲ, ಹರಿದಿಲ್ಲ ಮತ್ತು ಕರಪತ್ರಗಳು ರದ್ದಿ ಅಂಗಡಿ ಅಥವಾ ಕಸದ ಬುಟ್ಟಿ ಸೇರಿಲ್ಲ. ಅಭ್ಯರ್ಥಿಗಳ ಪರ ಕೂಗಿದ ಘೋಷಣೆಗಳು ಇನ್ನೂ ಕಿವಿಯಲ್ಲಿ ಭೋರ್ಗರೆಯುತ್ತಿವೆ. ಅಭ್ಯರ್ಥಿಗಳು ಮತ್ತು ಅವರ  ಬೆಂಬಲಿಗರು ಹರಿಬಿಟ್ಟ ನುಡಿ ಮುತ್ತುಗಳು ಇನ್ನೂ ಕಿವಿಯಲ್ಲಿ ಗುಂಯ್‌ಗಾಡುತ್ತಿವೆ. ಸೋಲು ಗೆಲುವಿನ ಬಗೆಗೆ ಅತ್ಮಾವಲೋಕನ, ಚರ್ಚೆ ಇನ್ನೂ ಅಲ್ಲಲ್ಲಿ ಕಾಣುತ್ತಿದೆ. ಆರಿಸಿ ಬಂದವರ ಸಂಭ್ರಮ ಮುಗಿದಿಲ್ಲ ಮತ್ತು ಸೋತವರ ಕಣ್ಣಿರು ನಿಂತಿಲ್ಲ. 

Advertisement

ಸರ್ಕಾರ ಟೇಕ್‌ ಆಫ್ ಆಗಿಲ್ಲ, ಸಚಿವ ಮತ್ತು ನಿಗಮ ಮಂಡಳಿ ಆಧ್ಯಕ್ಷ ಸ್ಥಾನ ಆಕಾಂಕ್ಷಿಗಳ ದೆಹಲಿ ಯಾತ್ರೆ ಮತ್ತು ಹೈಕಮಾಂಡ್‌ನೊಂದಿಗೆ ಸಮಾಲೋಚನೆ ನಡೆಯುತ್ತಿದ್ದು, ಈಗ ಇನ್ನೊಂದು ಚುನಾವಣೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ ಚುನಾವಣೆ ರೂಪದಲ್ಲಿ ನಡೆದಿದೆ..ಇದು ವಿಧಾನಸಭೆ ಚುನಾವಣೆಯಷ್ಟು ವ್ಯಾಪಕವಾಗಿರದೇ ನಗರ, ಪಟ್ಟಣಗಳಿಗೆ ಸೀಮಿವಾಗಿದೆ. ಇದರ ಕಾವು ವಿಧಾನಸಭೆ ಚುನಾವಣೆಯಷ್ಟು  ಸುದೀರ್ಘ‌ವಾಗಿರದಿದ್ದರೂ ಎರಡು ಮೂರು ತಿಂಗಳಿಗಂತೂ ಬಾಯಿ ಚಪಲಕ್ಕೆ, ಮಾಧ್ಯಮದವರಿಗೆ ಮತ್ತು ಕೆಲವು ಬಿಜಿನೆಸ್‌ನವರಿಗೆ ಭರಪೂರ ಅಹಾರ. ಈ ಚುನಾವಣೆಯಿಂದ ಸಾವರಿಸಿ ಕೊಳ್ಳುವಷ್ಟರಲ್ಲಿ, ದೇಶದ ಮಹಾ ರಾಜಕೀಯ ಸಂಘರ್ಷ ಎಂದು ಕರೆಯುವ ಲೋಕಸಭಾ ಚುನಾವಣೆಯ ಗಂಟೆ ಬಾರಿಸುತ್ತದೆ. ಈ ಮಧ್ಯ ಅಸ್ಥಿರ ಸರ್ಕಾರಕ್ಕೆ ಕೊನೆ ಹಾಡಲು ಇನ್ನೊಮ್ಮೆ ವಿಧಾನ ಸಭೆ ಚುನಾವಣೆ ಬಂದರೂ ಬರಬಹುದು.. ಪ್ರಜಾಪ್ರಭುತ್ವ ಎನ್ನುವ ಪರಿಕಲ್ಪನೆಗೆ  ಪರಿಪೂರ್ಣ ಮತ್ತು ಅರ್ಥ ಪೂರ್ಣ ವ್ಯಾಖ್ಯೆ ನೀಡಿದ ಅಬ್ರಹಾಂ ಲಿಂಕನ್‌ ಇಂದು ಬದುಕಿದ್ದು, ಭಾರತದಲ್ಲಿನ ಚುನಾವಣೆಗಳನ್ನು ನೋಡಿದ್ದರೆ, ಪ್ರಜಾಪ್ರಭುತ್ವವೆಂದರೆ ನಿರಂತರ ಚುನಾವಣೆಗಳು, ಚುನಾವಣೆಗಾಗಿ ಚುನಾವಣೆಯಿಂದ ನಡೆಯುವ ಸರ್ಕಾರ ಎಂದು ಪುನರ್‌ ವ್ಯಾಖ್ಯಾನ ಮಾಡುತ್ತಿದ್ದರೇನೋ?

ಪ್ರಜಾಪ್ರಭುತ್ವದ ಮುಖ್ಯ ಅಂಗವೇ (Essence of democracy) ಚುನಾವಣೆ. ಅದು ಸಮಯಕ್ಕೆ ಸರಿಯಾಗಿ ನಡೆದಾಗಲೇ ಪ್ರಜಾಪ್ರಭುತ್ವ ಅರ್ಥವನ್ನು ಕಾಣುತ್ತದೆ. ಅದರೆ, ಅದು ಆಗೊಮ್ಮೆ-ಈಗೊಮ್ಮೆ ಬರದೇ ನಿರಂತರವಾಗಿ ಬರಲು ಆರಂಭಿಸಿದರೆ, ಮತದಾರ ಅಸಕ್ತಿ ಕಳೆದುಕೊಳ್ಳುತ್ತಾನೆ ಮತ್ತು ಕಾಟಾಚಾರಕ್ಕೆ ಮತ ನೀಡುತ್ತಾನೆ. ಮತದಾನ ಒಂದು ಪವಿತ್ರ ಪಕ್ರಿಯೆ ಎನ್ನುವ ಭಾವನೆ ಹೋಗಿ, ಅದೊಂದು ಅನಿವಾರ್ಯ ಪೀಡೆ ಎನ್ನುವ ಅಭಿಪ್ರಾಯ ಮೆಲುಕು ಹಾಕುತ್ತದೆ. ಬಹುಶಃ ಇದೇ ಕಾರಣಕ್ಕೋ ಏನೋ ಮತದಾನದ ಪ್ರಮಾಣ ಕ್ರಮೇಣವಾಗಿ ಕಡಿಮೆ ಅಗುತ್ತಿದೆ. ಯಾರು ಗೆದ್ದರೆ ಏನು? ನಮಗೆ ರಾಗಿ ಬೀಸುವುದು ತಪ್ಪದು ಎನ್ನುವ   ಹತಾಶ ಮಾತು ಇನ್ನೊಮ್ಮೆ ಮೇಲ್ಮೆಗೆ ಬರುತ್ತದೆ.

ಭಾರತವು ರಾಜಕೀಯವಾಗಿ ಬಹು ಜಾಗೃತ ದೇಶ. ಚುನಾವಣೆ ಬಂತೆಂದರೆ, ಅದು ಆರಂಭವಾಗಿ, ಗೆದ್ದವರು ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೆ ಆಡಳಿತ ಯಂತ್ರ ಸ್ತಬ್ಧವಾಗುತ್ತದೆ. ಕಠಿಣವಾದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದು ಅಭಿವೃದ್ಧಿ ಕಾರ್ಯಕ್ರಮಗಳು ನಿಲ್ಲುತ್ತವೆ. ಹೊಸ ಯೋಜನೆಗಳಿಗೆ ಅನುಮತಿ ಇಲ್ಲ…ಬಳಸಲು ರೆಡಿಯಾದ ಯೋಜನೆಗಳಿಗೆ ಉದ್ಘಾಟನೆ ಭಾಗ್ಯವಿಲ್ಲ…ಅಡಿಗಲ್ಲು ಸಮಾರಂಭಗಳಿಲ್ಲ.. ನಡೆಯುತ್ತಿರುವ ಯೋಜನೆಗಳಿಗೆ ಅಗತ್ಯಬಿದ್ದ ಹೆಚ್ಚಿನ ಹಣಕಾಸು ನೆರವಿಲ್ಲ. ಪ್ರತಿಯೊಂದಕ್ಕೂ ಚುನಾವಣಾ ಅಯೋಗದ ಒಪ್ಪಿಗೆ ಬೇಕು. ಚುನಾವಣೆಗಾಗಿ ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಈ ಪ್ರಕ್ರಿಯೆ ಸುಮಾರು ಎರಡು ತಿಂಗಳ ಮೊದಲೇ ಅರಂಭವಾಗುತ್ತಿದ್ದು ತರಬೇತಿ ಹೆಸರಿನಲ್ಲಿ ಸರ್ಕಾರಿ ಕಚೇರಿಗಳು ಬಿಕೋ ಎನಿಸುತ್ತವೆ. ಬ್ಯಾಂಕ್‌ ಗೃಹ ಸಾಲಕ್ಕೆ ಬೇಕಾದ ನಿವೇಶನದ ಖಾತಾ ಪಡೆಯಲು ಒಬ್ಬರು ಬರೋಬ್ಬರಿ ಎರಡು ತಿಂಗಳು ಕಾಯಬೇಕಾಯಿತು. ಅಡಳಿತ ಯಂತ್ರ ಹೇಗೆ ಸ್ತಬ್ಧವಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ. ಬಹುತೇಕ ಕಚೇರಿಗಳಲ್ಲಿ ದಿನನತ್ಯದ ಕೆಲಸ ಹಿನ್ನೆಲೆಗೆ ಬಿದ್ದು, ಸಂಭಾವ್ಯ ಅಭ್ಯರ್ಥಿಗಳು, ಗೆಲ್ಲುವ ಮತ್ತು ಸೋಲುವ ಕುದುರೆಗಳ ಬಗೆಗೆ, ಗೆಲ್ಲುವ ಮತ್ತು ಸೋಲುವ ಮಾರ್ಜಿನ್‌ ಬಗೆಗೆ, ಚುನಾವಣೋತ್ತರ ಹೊಂದಾಣಿಕೆಯ ಸಾಧ್ಯತೆ ಬಗೆಗೆ ಅಂತ್ಯವಿಲ್ಲದ ಚರ್ಚೆ ಆಗುತ್ತಿರುತ್ತದೆ. ವಿದೇಶಗಳಲ್ಲಿ ಭಾರತೀಯರಂತೆ ಯಾರೂ ರಾಜಕೀಯವನ್ನು ಚರ್ಚಿಸುವುದಿಲ್ಲ. ಇದು ಅವರ ಕೊನೆ ಆದ್ಯತೆ. ಭಾರತದಲ್ಲಿ ಇದು ಮೊದಲ ಆದ್ಯತೆ ಮತ್ತು ದೌರ್ಬಲ್ಯ ಕೂಡಾ. ಕ್ರಿಕೆಟ್‌ ಮತ್ತು ರಾಜಕೀಯದ ಬಗೆಗೆ  ಮಾತನಾಡದಿದ್ದರೆ, ಅವರ ಭಾರತೀಯ ಮೂಲದ ಬಗೆಗೆ ಸಂದೇಹ ಬರುವಷ್ಟು ಈ ದೇಶದಲ್ಲಿ ರಾಜಕೀಯ ಸರ್ವವ್ಯಾಪಿ.

ವರ್ಷಪೂರ್ತಿ ದೇಶದಲ್ಲಿ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆಗಳು  ನಡೆಯುತ್ತಿರುತ್ತವೆ. ಪ್ರತಿವರ್ಷ 6-7 ರಾಜ್ಯಗಳಲ್ಲಿ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿರುತ್ತವೆ. ಇವುಗಳಿಂದಾಗಿ ದೇಶದ ಬೊಕ್ಕಸಕ್ಕೆ ಭಾರೀ ಹೊರೆ ಬೀಳುತ್ತದೆ. ಸಮೀಕ್ಷಾ ಸಂಸ್ಥೆ ಸಿಎಮ್‌ಎಸ್‌ ಪ್ರಕಾರ 2014ರ ಲೋಕಸಭೆ ಚುನಾವಣೆಗೆ ಸರ್ಕಾರ 3426 ಕೋಟಿ ಖರ್ಚು ಮಾಡಿದೆ. ಭಾರತೀಯ ಜನತಾ ಪಕ್ಷ 700 ಕೋಟಿ ವ್ಯಯಿಸಿದ್ದರೆ, ಕಾಂಗ್ರೆಸ್‌ 486 ಕೋಟಿ ಖರ್ಚು ಮಾಡಿದೆಯಂತೆ.  ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸುಮಾರು 30,000 ಕೋಟಿ ಖರ್ಚು ಮಾಡಿರಬಹುದು ಎನ್ನುವ ಅಂದಾಜಿದ್ದು, ಮುಂಬರುವ 2019ರ ಲೋಕಸಭಾ ಚನಾವಣೆಯಲ್ಲಿ ಇದು 60,000 ಕೋಟಿಯನ್ನು ತಲುಪಬಹುದು ಎನ್ನುತ್ತಾರೆ. ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸೇರಿ 9,000-10,500 ಕೋಟಿ ಖರ್ಚು ಮಾಡಿವೆ ಎಂಬ ಅಂದಾಜಿದೆ. ಇದನ್ನು ದೇಶದ ಅತಿ ವೆಚ್ಚದ ಚುನಾವಣೆ ಎಂದು ಹೇಳಲಾಗುತ್ತದೆ.

Advertisement

ಇವುಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸಿದ ಮೋದಿ ಸರ್ಕಾರ ಪದೆ ಪದೆ ನಡೆಯುವ ಚುನಾವಣೆಯಿಂದ ಆಡಳಿತದ ಮೇಲೆ ಆಗುವ ಪರಿಣಾಮ, ಜನತೆಗಾಗುವ ಅನನುಕೂಲ, ದೇಶದ ಬೊಕ್ಕಸಕ್ಕೆ ಅಗುವ ಹೊರೆ, ಅನಿವಾಸಿಗಳು ಪುನಃಪುನಃ ಬಂದು ಮತಹಾಕಲಾಗದ ಅಸಹಾಯಕತೆ ಮತ್ತು ಚುನಾವಣಾ ಹೆಸರಿನಲ್ಲಿ ಅನುತ್ಪಾದಕ ವೆಚ್ಚವನ್ನು ನೋಡಿ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆಯನ್ನು ಹರಿಬಿಟ್ಟಿದ್ದು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಲ್ಲಿ ಒಟ್ಟಾಭಿಪ್ರಾಯ ಇರುವುದಿಲ್ಲ. ಭಾರತೀಯ ಜನತಾ ಪಕ್ಷವು ಈ ನಿಟ್ಟಿನಲ್ಲಿ ಚುನಾವಣಾ ಅಯೋಗಕ್ಕೆ ಅಧಿಕೃತ ಪ್ರಸ್ತಾವವನ್ನು ಸಲ್ಲಿಸಿದೆ. ಈ ವ್ಯವಸ್ಥೆ ಈಗಾಗಲೇ ಇಂಡೋನೇಷಿಯಾ, ದಕ್ಷಿಣ ಆಫ್ರಿಕಾ, ಸ್ವೀಡನ್‌, ಬೆಲ್ಜಿಯಂ ಮತ್ತು ಇಟಲಿ ದೇಶಗಳಲ್ಲಿ ಇದ್ದು, ಭಾರತದಲ್ಲೂ 1952ರ ಮೊದಲ ಚುನಾವಣೆ ಇದೇ ರೀತಿ ನಡೆದಿತ್ತು ಮತ್ತು 1957, 1962 ಮತ್ತು 1967ರಲ್ಲಿ ಕೂಡಾ ಎಲ್ಲಾ ಚುನಾವಣೆಗಳು ಒಟ್ಟಿಗೇ ನಡೆದಿದ್ದವು. 1967ರಲ್ಲಿ ಮಧ್ಯ ಪ್ರದೇಶದಲ್ಲಿ, ಜಿ.ಎನ್‌.ಸಿಂಗ್‌ ಎನ್ನುವವರು ತನ್ನ ಸಹಚರರೊಂದಿಗೆ ಪಕ್ಷಾಂತರ ಮಾಡಿ ಅಂದಿನ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿ, ಸಂಯುಕ್ತ ವಿಧಾಯಕದಳ ಹೆಸರಿನಲ್ಲಿ ಹೊಸ ಸರ್ಕಾರ ರಚನೆ ಮಾಡಿ, ದೇಶದಲ್ಲಿ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದ ಮೇಲೆ, ಈ ವ್ಯವಸ್ಥೆ ಹಳಿ ತಪ್ಪಿತು.   

ಚುನಾವಣಾ ಆಯೋಗವು ಸದ್ಯದ ಪರಿಸ್ಥಿತಿಯಲ್ಲಿ, ಒಂದು ದೇಶ ಒಂದು ಚುನಾವಣೆ ಬಗೆಗೆ ಒಲವು ತೋರಿಸಿಲ್ಲ. ದೇಶದ ಭೌಗೋಳಿಕ ವಿಸ್ತಾರ, ಜನಸಂಖ್ಯೆ, ವಿವಿಪ್ಯಾಟ್‌ಗಳ ಲಭ್ಯತೆ, ಮಾನವ ಸಂಪನ್ಮೂಲ ಕೊರತೆ, ಭದ್ರತೆ, ಸರ್ಕಾರದ ಅವಧಿಯನ್ನು  ವಿಸ್ತರಿಸುವ ಅಥವಾ ಮೊಟಕುಗೊಳಿಸುವಲ್ಲಿನ ಸಾಂವಿಧಾನಿಕ ಅಡಚಣೆಯನ್ನು ಉಲ್ಲೇಖೀಸುತ್ತಿದೆ. ಹಾಗೆಯೇ ಎಲ್ಲಾ ರಾಜ್ಯಗಳನ್ನು ಒಪ್ಪಿಸುವುದೂ ಕಷ್ಟ ಸಾಧ್ಯ. ಇದಕ್ಕೆ ಸಂವಿಧಾನದ ತಿದ್ದುಪಡಿಯೂ ಅವಶ್ಯವಿದ್ದು, ಅದು ಸುಲಭವಾಗಿ ಫ‌ಲಿಸದು. ಚುನಾವಣೆ ಯಾರಿಗೆ ಏನೇ ಇರಲಿ, ಚುನಾವಣೆಗಳು 3 ತಿಂಗಳ ಅವಧಿಯ  ತತ್ಕಾಲದ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ರ್ಯಾಲಿ ಅಯೋಜನೆ, ಕ್ಯಾಟರಿಂಗ್‌, ಸಾರಿಗೆ, ಧ್ವನಿವರ್ಧಕ, ಕರಪತ್ರ ಮತ್ತು ಹೋರ್ಡಿಂಗ್ಸ್‌, ಬ್ಯಾನರ್‌ ತಯಾರಿಕೆ ಹೀಗೆ ಹಲವಾರು ವಿಧದಲ್ಲಿ ಲಕ್ಷಾಂತರ ಗೋಚರ ಮತ್ತು ಅಗೋಚರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಸಾವಿರಾರು ಕೋಟಿಗಳ ವ್ಯವಹಾರ ನಡೆಯುತ್ತಿದ್ದು, ಚುನಾವಣೆಗಳು ಕಡಿಮೆ ಆದರೆ ಇವರ ಬದುಕಿಗೆ ಬರೆ ಬೀಳುವುದನ್ನು ಅಲ್ಲಗಳೆಯಲಾಗದು. ಹಲವು ರಾಷ್ಟ್ರಗಳಲ್ಲಿ ರಾಜಕೀಯ ಒಂದು  ಹವ್ಯಾಸ ಮತ್ತು ಅಲ್ಪಾವಧಿ ಉದ್ಯೋಗ. ಆದರೆ, ನಮ್ಮ ದೇಶದಲ್ಲಿ ಇದೊಂದು ವೃತ್ತಿಯಾಗಿದ್ದು, ಪೂರ್ಣಾವಧಿ ಕೆಲಸ. ಅಂತೆಯೇ ಚುನಾವಣೆಗಳ ಸಂಖ್ಯೆಯನ್ನು ಮೊಟಕುಗೊಳಿಸುವ ಹೆಜ್ಜೆ ಮುಗ್ಗರಿಸುವ ಸಾಧ್ಯತೆಯೇ ಹೆಚ್ಚು. ಅದಕ್ಕೂ ಮಿಗಿಲಾಗಿ ವಿದ್ಯಾವಂತ ವರ್ಗ ಚುನಾವಣೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಈಗ ಇರುವ ಚುನಾವಣಾ ವ್ಯವಸ್ಥೆಯ ಮುಂದುವರಿಕೆ ಅಥವಾ ಬದಲಾವಣೆ ಅವರಿಗೆ ಅಂಥ ಮಹತ್ವದ ವಿಷಯವಲ್ಲ.

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next