Advertisement

India ಒಂದು ದೇಶ-ಒಂದು ಚುನಾವಣೆ ದೊಡ್ಡ ಸವಾಲು

11:50 PM Sep 01, 2023 | Team Udayavani |

ಹೊಸದಿಲ್ಲಿ: ಒಂದು ದೇಶ-ಒಂದು ಚುನಾವಣೆಗೆ ಕೇಂದ್ರ ಸರಕಾರ ಸಮಿತಿಯನ್ನೇನೋ ರಚಿಸಿದೆ. ಆದರೆ ಸಮಿತಿಗೆ ಗುರುತರ ಸವಾಲೇ ಇದೆ. ಸದ್ಯ ದೇಶದ 18 ರಾಜ್ಯಗಳಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಆಡಳಿತದಲ್ಲಿ ಇವೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿಗೆ ಈ ರಾಜ್ಯಗಳ ಸರಕಾರಗಳನ್ನು ಒಪ್ಪಿಸುವುದು ಹರಸಾಹಸದ ಕೆಲಸವಾಗಿ ಪರಿಣಮಿಸಲಿದೆ. ಸಂಸತ್‌ನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗ ಬೇಕಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಏಕಕಾಲದ ಚುನಾವಣೆ ಮಸೂದೆಗೆ ಅಂಗೀಕಾರ ಸಿಗಬಹುದು. ಆದರೆ ವಿಪಕ್ಷಗಳ ಆಡಳಿತದಲ್ಲಿ ಇರುವ ರಾಜ್ಯಗಳನ್ನು ಮನವೊಲಿಸುವುದು ಕಷ್ಟವಾಗುವ ಸಾಧ್ಯತೆ ಇದೆ.

Advertisement

ಸಂವಿಧಾನಕ್ಕೆ ತರಬೇಕು ಐದು ತಿದ್ದುಪಡಿ
ಕೇಂದ್ರ ಸರಕಾರದ ಉದ್ದೇಶಿತ ಪ್ರಯತ್ನ ಈಡೇರುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಐದು ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಜತೆಗೆ ಬೃಹತ್‌ ಸಂಖ್ಯೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಮತ್ತು ಮತಧೃಡೀಕರಣ ಯಂತ್ರಗಳನ್ನು ಹೊಂದಬೇಕಾಗುತ್ತದೆ.

1. ಸಂವಿಧಾನ 83ನೇ ವಿಧಿ: ಅದರಲ್ಲಿ ಸಂಸತ್‌ನ ನಿಗದಿತ ಅವಧಿ ಬಗ್ಗೆ ಉಲ್ಲೇಖೀಸಲಾಗಿದೆ.
2. ಸಂವಿಧಾನದ 85ನೇ ವಿಧಿ: ರಾಷ್ಟ್ರಪತಿ ಲೋಕಸಭೆಯನ್ನು ವಿಸರ್ಜಿಸುವ ಬಗ್ಗೆ
3. ಸಂವಿಧಾನದ 172ನೇ ವಿಧಿ: ರಾಜ್ಯಗಳ ವಿಧಾನಸಭೆಗಳಿಗೆ ಇರುವ ಅವಧಿ
4. ಸಂವಿಧಾನದ 174ನೇ ವಿಧಿ: ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸುವ ಬಗ್ಗೆ ಇರುವ ನಿಯಮ
5. ಸಂವಿಧಾನದ 356ನೇ ವಿಧಿ: ರಾಜ್ಯ ಸರಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವ ನಿಯಮ

ಸಂಸತ್‌ ವಿಶೇಷ ಅಧಿವೇಶನಗಳು
ಸೆ.18ರಿಂದ 22ರ ವರೆಗೆ ಸಂಸತ್‌ನ ವಿಶೇಷ ಅಧಿವೇಶನ ನಡೆಯಲಿದೆ. ಇದರಲ್ಲಿ ಒಂದು ದೇಶ-ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಂಸತ್‌ ಅಧಿವೇಶನದ ಹಿಂದಿನ ವಿಶೇಷ ಸಭೆಗಳ ಮಾಹಿತಿ ಇಲ್ಲಿದೆ.

2015 ನ.26, 27: ಸಂವಿಧಾನಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ಜಯಂತಿ ಸಂದರ್ಭದಲ್ಲಿ ಲೋಕಸಭೆ, ರಾಜ್ಯಸಭೆಯ ವಿಶೇಷ ಅಧಿವೇಶನ ನಡೆದಿತ್ತು.
1997 ಆ.26ರಿಂದ ಸೆ.1: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 6 ದಿನಗಳ ವಿಶೇಷ ಅಧಿವೇಶನ.
1962 ನವೆಂಬರ್‌: ಭಾರತ ಮತ್ತು ಚೀನ ಯುದ್ಧದಿಂದ ಉಂಟಾಗಿದ್ದ ಪರಿಸ್ಥಿತಿ ಚರ್ಚಿಸಲು ವಿಶೇಷ ಅಧಿವೇಶನ. ಪ್ರಧಾನಿಯಾಗಿದ್ದ ಜವಾಹರ್‌ಲಾಲ್‌ ನೆಹರೂಗೆ ಈ ಅಧಿವೇಶನ ನಡೆಸುವಂತೆ ವಿಪಕ್ಷ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಒತ್ತಡ ಹೇರಿದ್ದರು. ನ.8,9ರಂದು ವಾಜಪೇಯಿ ತೀವ್ರ ವಾಗ್ಧಾಳಿ ನಡೆಸಿದ್ದರು.
ಮಧ್ಯರಾತ್ರಿಯ
ವಿಶೇಷ ಅಧಿವೇಶನ
1947 ಆ.14 15: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರಕ್ಕಾಗಿ ನಡೆದಿದ್ದ ಅಧಿವೇಶನ.
1972 ಆ.14 15: ಸ್ವಾತಂತ್ರ್ಯ ಪ್ರಾಪ್ತವಾಗಿ 25 ವರ್ಷಗಳು ಪೂರ್ಣಗೊಂಡಿದ್ದಕ್ಕೆ.
1992 ಆ.9: ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳವಳಿಗೆ 50 ವರ್ಷ ಪೂರ್ಣಗೊಂಡಿದ್ದಕ್ಕೆ.
1997 ಆ.14 15: ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗಿ 50 ವರ್ಷಗಳು ಪೂರ್ಣಗೊಂಡಿದ್ದಕ್ಕೆ.
2017 ಜು.30: ಜಿಎಸ್‌ಟಿ ಮಸೂದೆ ಅಂಗೀಕಾರಕ್ಕೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next