Advertisement

ರಾಷ್ಟ್ರವ್ಯಾಪಿ ವಿಚಾರ ಮಂಥನ ಅತ್ಯವಶ್ಯ

12:42 AM Mar 20, 2021 | Team Udayavani |

“ಒಂದು ರಾಷ್ಟ್ರ-ಒಂದು ಚುನಾವಣೆ’ಯ ಸೂತ್ರ ಭಾರತ ಸಂವಿಧಾನ ಅಡಿಯಿಡುತ್ತಿದ್ದ ಆ ದಿನಗಳಲ್ಲಿ 1951 ಅಕ್ಟೋಬರ್‌ 25ರಿಂದ 1952 ಫೆಬ್ರವರಿ 21ರ ವರೆಗೆ ಕೇಂದ್ರ ರಾಜ್ಯಗಳಲ್ಲಿ ಸುಸೂತ್ರವಾಗಿ ಘಟಿಸಿತು. ಈ ಚೊಚ್ಚಲ ಪ್ರಯೋಗ ಕೇಂದ್ರದ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳ ಅವಧಿಯನ್ನು ಐದು ವರ್ಷಗಳ ಮಿತಿಗೆ ಅಚ್ಚುಕಟ್ಟಾಗಿಸಿತ್ತು. ಬ್ರಿಟಿಷ್‌ ಆಳ್ವಿ ಕೆಯ 1935ನೇ ಸಂವಿಧಾನ ಅಂತೆಯೇ ಇಂಗ್ಲೆಂಡಿನ ಪಾರ್ಲಿಮೆಂಟ್‌ ವ್ಯವಸ್ಥೆಗೆ ನೇರ್ಪುಗೊಳಿಸಿ, ಈ ಪಂಚ ವಾರ್ಷಿಕ ಅವಧಿಯನ್ನು ಜಾರಿಗೆ ತರಲಾಯಿತು. ಅದೇ ರೀತಿ ಮೇಲ್ಮನೆ ರಾಜ್ಯಸಭೆಯನ್ನು ಶಾಶ್ವತಗೊಳಿಸಿ, ಪ್ರತಿಯೊಬ್ಬ ಸದಸ್ಯರ ಅವಧಿಯನ್ನು 6 ವರ್ಷ ಮಿತಿಗೆ ಇರಿಸಿ, ಪ್ರತೀ ಎರಡು ವರ್ಷಗಳಿಗೊಮ್ಮೆ, ಸುಮಾರು ಮೂರನೇ ಒಂದಂಶ ಸದಸ್ಯರ ನಿವೃತ್ತಿಗೆ ಕದ ತೆರೆಯಲಾಯಿತು. ಅದರೊಂದಿಗೇ ಸ್ವತಂತ್ರ, ನಿರ್ಭೀತ ಚುನಾವಣೆಗಾಗಿ ರಾಷ್ಟ್ರವ್ಯಾಪಿಯಾಗಿ ಏಕೀಕೃತ ಚುನಾವಣ ಆಯೋಗಕ್ಕೆ 324ನೇ ವಿಧಿಯನ್ವಯ ನಮ್ಮ ರಾಜ್ಯಾಂಗ ಘಟನೆ ಜನ್ಮ ನೀಡಿತು. ವಿಶ್ವದ ಜನಸಂಖ್ಯಾತ್ಮಕ ಪ್ರಪ್ರಥಮ ಜನತಂತ್ರ ರಾಷ್ಟ್ರ ಭಾರತದ ಚುನಾವಣ ಕಾರ್ಯ ಬಾಹುಳ್ಯದ ಆಳ, ಎತ್ತರದ ಅರಿವು ಹೊಂದಿಯೇ, ಈ 14ನೇ ವಿಭಾಗವನ್ನು ಸಂವಿಧಾನ ಜನಕರು ಸೃಜಿಸಿದರು. ಆ ನಿಟ್ಟಿನಲ್ಲಿ ಶೇಷನ್‌ ಅವರಂಥವರು ಈ ಚುನಾವಣ ಆಯೋಗದ ನಿಷ್ಪಕ್ಷಪಾತ, ನಿರ್ಭೀತ ಘನತೆಯನ್ನು ಮುಂದಿನ ದಿನಗಳಲ್ಲಿ ಎತ್ತಿ ಹಿಡಿಯುವಲ್ಲಿಯೂ ಪ್ರಚಲಿತ ಇತಿಹಾಸವನ್ನು ನಿರ್ಮಿಸಿದರು.

Advertisement

ಮುಂದೆ ಸ್ವಾತಂತ್ರ್ಯೋತ್ತರ ಭಾರತದ ಸಾಂವಿಧಾನಿಕ ಹೆಜ್ಜೆ ಗಳನ್ನು ಗುರುತಿಸಿದಾಗ, ವಾಸ್ತವಿಕ ರಾಜಕೀಯದ ರಂಗಸ್ಥಳ ಹೊಸದಿಲ್ಲಿ ಹಾಗೂ ಆಯಾಯ ರಾಜ್ಯಗಳಲ್ಲಿ ಸಜ್ಜುಗೊಂಡಾಗ ಸಹಜವಾಗಿ ಚುನಾವಣೆಗಳು ಕಾಲವ್ಯತ್ಯಾಸದ ರಂಗೇರಿದವು. ಅಂತಹ ಸಾಧ್ಯತೆಗಳು ನಮ್ಮ ಸಂವಿಧಾನದ ಉಲ್ಲೇಖೀತ ಸೂತ್ರಗಳ ವಿಧಿಗಳ ಒಳಹೊಕ್ಕು ಅಧ್ಯಯನ ಮಾಡಿದಾಗ ಅನಿ ವಾರ್ಯತೆಯ ಗರ್ಭದಿಂದಲೇ ಉದಿಸಿ ಬಂದುದೇ ಆಗಿತ್ತು ಎಂಬ ಸತ್ಯ ಗೋಚರಿಸುತ್ತದೆ. 83 (2) ವಿಧಿಯ ಸ್ಪಷ್ಟ ಉಲ್ಲೇಖ ದಂತೆ ಅವಧಿ ಪೂರ್ವ ವಿಸರ್ಜನೆ ಆಗದಿದ್ದಲ್ಲಿ ಲೋಕ ಸಭೆಯು ಪ್ರಥಮ ಅಧಿವೇಶನದಿಂದಲೇ ಮೊದಲ್ಗೊಂಡು 5 ವರ್ಷಗಳ ಅವಧಿ ಹೊಂದತಕ್ಕದ್ದು ಹಾಗೂ ಒಂದೊಮ್ಮೆ ತುರ್ತು ಪರಿಸ್ಥಿತಿ ಘೋಷಣೆ ಆಗಿದ್ದರೆ, ಒಮ್ಮೆಗೆ ಒಂದು ವರ್ಷದ ಅವಧಿಗೆ ಮೀರದಂತೆ ಲೋಕಸಭೆಯ ಅವಧಿಯನ್ನು ಹೆಚ್ಚಿಸಬಹುದು. ಆದರೆ ಯಾವುದೇ ಕಾರಣಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಸಮಾಪ್ತಿಗೊಂಡ ಬಳಿಕ ಈ ಅವಧಿಯನ್ನು 6 ತಿಂಗಳ ಬಳಿಕ ಹೆಚ್ಚಿಸುವಂತಿಲ್ಲ. ಹೀಗೆ ಈ ಒಂದೇ ವಿಧಿಯಲ್ಲಿ 1) ಅವಧಿ ಪೂರ್ವ ಲೋಕಸಭಾ ವಿಸರ್ಜನೆ ಹಾಗೂ 11) ಅವಧಿ ಹೆಚ್ಚಳದ ಅನಿವಾರ್ಯತೆಯ ಬಗೆಗೆ ಸ್ಪಷ್ಟ ಉÇÉೇಖ ಗಮನಾರ್ಹ. ಹೀಗಿರುವಾಗ 368ನೇ ವಿಧಿಯನ್ನೇ ಪ್ರಯೋಗಿಸಿ, ಈ ಎರಡೂ “ಬೆಳಕಿನ ಕಿಂಡಿ’ಗಳಿಗೆ ಹೇಗೆ ಪರಿಧಿ, ಪರದೆ ಸರಿಸಬೇಕು ಎಂಬುದೇ ಇಲ್ಲಿನ ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದ ಮೇರು ಪ್ರಶ್ನೆ.

ಇಲ್ಲಿಂದ ಮುಂದಿನ ಹಂತದಲ್ಲಿ “ಒಂದು ರಾಷ್ಟ್ರ- ಒಂದು ಚುನಾವಣೆ’ಯ ಚಿಂತನೆಯ ಪಥದಲ್ಲಿ ಸರಿದಾಗ ಥಟ್ಟನೆ ಎದುರಾಗುವಂತಹುದು ಇಂತಹುದೇ ಸಂವಿಧಾನದ 172ನೇ ವಿಧಿಯ ವಿಧಾನಸಭಾ ಚುನಾವಣೆಯ ಉÇÉೇಖ. ಈ ವಿಧಿಯ ಒಂದನೇ ಉಪವಿಧಿಯ ಶಬ್ದ ಶಬ್ದವೂ 83(2)ರ ಪಡಿಯಚ್ಚು. ಇಲ್ಲಿಯೂ ಅವಧಿಪೂರ್ವ ವಿಧಾನಸಭಾ ವಿಸರ್ಜನೆಗೆ, ಮಧ್ಯಾಂತರ ಚುನಾವಣೆಗೆ, ನೂತನ ವಿಧಾನಸಭಾ ಸಾಧ್ಯತೆಗೆ ನಮ್ಮ ಸಂವಿಧಾನ ಕದ ತೆರೆದಿದೆ. ಇಲ್ಲಿ 352ನೇ ವಿಧಿಯ ರಾಷ್ಟ್ರವ್ಯಾಪೀ ಜರೂರು ಪರಿಸ್ಥಿತಿಯ ಸ್ಥಿತಿಗತಿಯ ಅವಲಂಬಿತ ಮುಂದುವರಿಕೆಗೇ ಕೇಂದ್ರ ಸಂಸತ್ತೇ ಒಂದಿನಿತು ಅವಧಿಯನ್ನು ರಾಜ್ಯ ವಿಧಾನಸಭೆಗಳಿಗೆ ಹೆಚ್ಚಿಸಬಹುದು. ಇದಲ್ಲದೇ ರಾಜ್ಯ ವಿಧಾನಸಭೆಗಳೇ, ಯಾವುದೇ ಕಾರಣಕ್ಕೆ ಸ್ವಯಂ ಅವಧಿ ಹೆಚ್ಚಳಕ್ಕೆ ಅವಕಾಶ ಇಲ್ಲ ಎಂಬುದೂ ಇಲ್ಲಿನ ಸಾಂವಿಧಾನಿಕ ಒಳಮೆರುಗು. ಮಾತ್ರವಲ್ಲ 356ನೇ ವಿಧಿಯ ಅನ್ವಯ ರಾಜ್ಯವೊಂದರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದಾಗ ವಿಧಾನಸಭಾ ವಿಸರ್ಜನೆಯ ಸಾಧ್ಯತೆಯ ದಿಡ್ಡಿ ಬಾಗಿಲು ತೆರೆದಂತಾದೀತು. ಒಂದೊಮ್ಮೆ ಯಾವುದೇ ರಾಜಕೀಯ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲು ಸಂಖ್ಯಾಬಲ ಹೊಂದದಿ¨ªಾಗ, ವಿಧಾನಸಭಾ ಸದಸ್ಯರ, “ಒಳ-ಹೊರ ಬೆಂಬಲ’ದ ಅಥವಾ ಸಂಯುಕ್ತತೆ, ಒಕ್ಕೂಟದ ಚದುರಂಗದಾಟವೂ ಅಸಾಧ್ಯ ಎನಿಸಿದಾಗ ಪರಿಸ್ಥಿತಿ ಏನು? ಆಗ ಕೇವಲ ಮಧ್ಯಾಂತರ ಚುನಾವಣೆ ಇಲ್ಲವೇ “ಸುದೀರ್ಘ‌’ ಎನಿಸಬಹುದಾದ “ರಾಷ್ಟ್ರಪತಿ ಆಳ್ವಿಕೆ’ಯೇ ಮುಂದಿನ ಲೋಕಸಭಾ ಚುನಾವಣೆಯ ವರೆಗೆ ರಾಜ್ಯಗಳ ಪಾಲಿಗೆ ಒದಗಿ ಬರಬೇಕೆ? ಆಗ ಇಂತಹ ಡೋಲಾಯಮಾನ ರಾಜ್ಯ ವಿದ್ಯಮಾನಗಳ ಸರತಿ ಸಾಲೂ ಉದ್ಭವಿಸದೇ? ತನ್ಮೂಲಕ ಕೇಂದ್ರ-ರಾಜ್ಯಗಳ ಸೂಕ್ಷ್ಮ ಸಮತೋಲನ, ಒಕ್ಕೂಟ ವ್ಯವಸ್ಥೆ ಬಿರುಕು ಬಿಡಲಾರದೇ?

ಈ ಎಲ್ಲ ಗಹನ ಸಾಂವಿಧಾನಿಕ ಪ್ರಶ್ನೆಗಳಿಗೆ ನೂರಕ್ಕೆ ನೂರು ಪ್ರತಿಶತಃ ಉತ್ತರ ಹುಡುಕುವಿಕೆ ಸುಲಭ ಸಾಧ್ಯವೇನಲ್ಲ. ವ್ಯಾಧಿಯಿಂದ ಕಟುವಾಗಿ ಔಷಧ ಎಂಬಂತೆ ಉಳಿತಾಯದ ಸಾಧ್ಯತೆ ಹೊಂದಿಸುವಲ್ಲಿ ರಾಜ್ಯಾಂಗ ವ್ಯವಸ್ಥೆಯ ಶಿಥಿಲತೆಯ “ಅಗಾಧ ಸಾಧ್ಯತೆ’ಯೇ ಒದಗಿ ಬರಲಾರದೇ? ಈ ರಾಷ್ಟ್ರವ್ಯಾಪಿ ವಿಚಾರ ಮಂಥನ ಇಂದಿನ ಆವಶ್ಯಕತೆ. ಅದೇ ರೀತಿ ಕೇಂದ್ರದ ಸಂಸತ್ತಿನಲ್ಲಿಯೇ ಪ್ರಾಯೋಗಿಕ ಸಾಂವಿಧಾನಿಕ ತಿದ್ದುಪಡಿಯ ಮೂಲಕವೇ ಈ ಬಗೆಯ ಚರ್ಚೆ ಶುಭಾರಂಭವಾಗಬೇಕು. ಏನಿದ್ದರೂ 28 ರಾಜ್ಯ ವಿಧಾನಸಭೆಗಳ ಅಂಗಳಕ್ಕೆ ಈ ವಿಷಯದ ಆಗಮನ ಬಹಳಷ್ಟು ಸಮಯದ ಬಳಿಕವಷ್ಟೇ. ಬಜೆಟ್‌ ಅಧಿವೇಶನದಂತಹ ಪ್ರಮುಖ ಭೂಮಿಕೆಯಲ್ಲಿ, ಇಂತಹ ಗಹನ ವಿಚಾರಗಳ ಲಾಭ, ಸಾಧ್ಯತೆ ಇವೆಲ್ಲದರ ಬಗೆಗೆ ಚರ್ಚೆ ಎಷ್ಟು ಸಮಂಜಸ ಎಂಬ ಆತ್ಮಾವಲೋಕನವೂ ಇಲ್ಲಿ ಪ್ರಸ್ತುತ. ಪûಾಂತರ ಪಿಡುಗಿಗೂ 10ನೇ ಶೆಡ್ನೂಲಿನ ಮೂಲಕ ಹಾಕಿದ ತಡೆ ಬೇಲಿಯನ್ನೂ ಜಿಗಿಯುವ ಚಾಣಕ್ಷತನದ ರಾಜಕಾರಣಕ್ಕೆ ಏಕಕಾಲದ ಚುನಾವಣೆಯನ್ನು ಗೆರೆಗಳಂಚಿನ ಒಳಗೆ ತರುವ ಸಾಹಸ, ಸಾಧ್ಯತೆ ಸೂಜಿ ತೂತಿನೊಳಗೆ ಆನೆ ತುರುಕಿಸು ವಂತಾದೀತೇ? ಇದೊಂದು ಭಾರತೀಯ ಚುನಾವಣ ರಂಗ ಮಂಚದ ಬರಲಿರುವ ದಿನಗಳ ಸ್ವಗತದ ಪ್ರಶ್ನೆ.

ಒಂದೊಮ್ಮೆ ಏಕಕಾಲದ ರಾಷ್ಟ್ರವ್ಯಾಪಿ ಚುನಾವಣೆಯ ಮಹಾದ್ವಾರ ಸಾಂವಿಧಾನಿಕ ಚೌಕಟ್ಟಿನಲ್ಲಿ ತೆರೆಯಲೇಬೇಕೆಂ ದಾದರೆ ಹಲವಾರು ಕಾಯಕಲ್ಪ ಅತ್ಯಗತ್ಯ. ಪ್ರಪ್ರಥಮವಾಗಿ ಲೋಕಸಭೆಯ 5 ವರ್ಷಗಳ ಅವಧಿಯನ್ನೇ ಆಧಾರವಾಗಿರಿಸಿ ಎಲ್ಲ ರಾಜ್ಯಗಳ ವಿಧಾನಸಭೆಯ ಅವಧಿಯನ್ನು ನಿಖರವಾಗಿ ಮಿತಿಗೊಳಿಸಬೇಕು. ಇಲ್ಲಿ ತಾತ್ಕಾಲಿಕವಾಗಿಯಾದರೂ ಸಂವಿಧಾನ ತಿದ್ದುಪಡಿಯನ್ನೇ ಆಧರಿಸಿ ಎಲ್ಲ ವಿಧಾನಸಭೆಗಳ ಮಿತಿಯನ್ನು ಒಂದಿನಿತು ಹಿರಿದುಗೊಳಿಸುವ ಅಥವಾ ಕಿರಿದುಗೊಳಿಸುವ ಹಾಗೂ ತನ್ಮೂಲಕ ಲೋಕಸಭೆಯ ಅವಧಿಗೆ ನೇರವಾಗಿ ನೇರ್ಪುಗೊಳಿಸುವ ಪ್ರಕ್ರಿಯೆ ನಡೆಯಬೇಕು. ಎರಡನೆಯದಾಗಿ, ರಾಷ್ಟ್ರವ್ಯಾಪಿ ಈ ಕೇಂದ್ರ- ರಾಜ್ಯ ಜನಪ್ರತಿ ನಿಧಿ ಸಭೆಗಳ ಅಂದರೆ ಲೋಕಸಭೆ ಹಾಗೂ ವಿಧಾನಸಭೆಗಳ ಅವಧಿಯನ್ನು ಸಮಾನಾಂತರ ರೇಖೆಯೊಳಗೇ ತಂದ ಬಳಿಕ ಆ ತಿದ್ದುಪಡಿಯನ್ನು ಇನ್ನೊಂದು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸ್ಥಗಿತಗೊಳಿಸಬೇಕು. ಮೂರನೇಯದಾಗಿ, ಇನ್ನೊಂದು ತಿದ್ದುಪಡಿಯ ಮೂಲಕ ಕೇಂದ್ರದ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಯ ಅವಧಿಪೂರ್ವ ವಿಸರ್ಜನೆಯ ಎಲ್ಲ ಸಾಧ್ಯತೆಗಳನ್ನು ಪಟ್ಟಿ ಮಾಡಬೇಕು ಹಾಗೂ ಪುನರಾವರ್ತನೆಯ ಮೂಲಕ ಅವಧಿಪೂರ್ವ ಸರಕಾರದ ಪತನ ಅಥವಾ ಅಸ್ಥಿರತೆಯ ಎಲ್ಲ ಕದಗಳಿಗೆ ಭದ್ರ ಬೀಗ ಜಡಿಯಬೇಕು.

Advertisement

ನಾಲ್ಕನೇಯದಾಗಿ, 352ನೇ ವಿಧಿಯ ಅನ್ವಯದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ, 356ನೇ ವಿಧಿಯ ರಾಜ್ಯಮಟ್ಟದ ರಾಷ್ಟ್ರಪತಿ ಆಳ್ವಿಕೆ ಹಾಗೂ ಈ ತನಕ ಒಮ್ಮೆಯೂ ಪ್ರಯೋಗಿಸದ ತಣ್ಣನೆ ಮಲಗಿರುವ 366ನೇ “ಆರ್ಥಿಕ ತುರ್ತು ಪರಿಸ್ಥಿತಿ’ಯ ಸಂದರ್ಭದಲ್ಲೂ ಏಕಕಾಲದÇÉೇ ಕೇಂದ್ರ-ರಾಜ್ಯ ಜನಪ್ರತಿನಿಧಿ ಸಭಾ ಚುನಾವಣೆ ನಡೆಯತಕ್ಕದ್ದು ಎಂಬ ಸಾಂವಿಧಾನಿಕ ಒಕ್ಕಣೆ ತಿದ್ದುಪಡಿಯಲ್ಲಿ ನಮೂದಿಸಬೇಕು. 5ನೇಯದಾಗಿ ಸದಸ್ಯರ ದಿಢೀರ್‌ ರಾಜೀನಾಮೆ, ಮರು ಚುನಾವಣೆಯಲ್ಲಿ ಬಹುಮತ ಕೊರತೆಯಿಂದಾಗಿ ಲೋಕಸಭೆ, ವಿಧಾನಸಭೆಗಳ ಬಹುಮತ ನಷ್ಟ, ಸರಕಾರ ಪತನದ ಸಂದರ್ಭ “ಯಾವ ಪರಿಹಾರ’? ಎಂಬ ಸಾಂವಿಧಾನಿಕ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕಂಡು ಹುಡುಕಬೇಕು.

ವಿಧಾನಸಭೆ, ಲೋಕಸಭೆ ಮತ್ತು ಸರಕಾರವನ್ನು ಒಂದಿನಿತು ಕಾಲ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಗೆ ನಮ್ಮ ರಾಜ್ಯಾಂಗ ಘಟನೆ ಕದವೇನೋ ತೆರೆದಿದೆ. ಆದರೆ ಇಲ್ಲಿಯೂ ಗರಿಷ್ಠ ಮಿತಿಯ ಅವಧಿಯನ್ನು ನಮೂದಿಸಬೇಕಾಗಬಹುದು. ಆದರೆ ಹೊಸ ದಿಲ್ಲಿಯಲ್ಲಿ ಯಾವತ್ತೂ ರಾಷ್ಟ್ರಾಧ್ಯಕ್ಷರ ಆಳ್ವಿಕೆ ನಿಷಿದ್ಧ. ಈ ಎಲ್ಲ ಸಾಂವಿಧಾನಿಕ ತಡೆಬೇಲಿಗಳನ್ನೂ ಸರಿಸಿ ಕಾಯಕಲ್ಪ ಹಾಗೂ ನೂತನ ರಾಷ್ಟ್ರೀಯ ರಂಗಮಂಚ ನಿರ್ಮಾಣಕ್ಕೆ ಕಷ್ಟ ಸಾಧ್ಯ; ಆದರೆ ಅಸಾಧ್ಯವೇ ಸರಿ ಎನ್ನುವಂತೆಯೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next