Advertisement

ಒಂದು ದೇಶ ಒಂದು ಚುನಾವಣೆ

11:11 PM Jun 18, 2019 | mahesh |

ಪ್ರಧಾನಿ ಮೋದಿ “ಒಂದು ದೇಶ ಒಂದು ಚುನಾವಣೆ’ ವಿಚಾರದಲ್ಲಿ ಎಲ್ಲಾ ಪಕ್ಷಗಳಿಗೂ ಬುಧವಾರ ಚರ್ಚೆಗೆ ಆಹ್ವಾನಿಸಿದ್ದಾರೆ. ವಿಧಾನಸಭೆ-ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಈ ಯೋಚನೆಗೆ ಪರ-ವಿರೋಧ ಎದುರಾಗುತ್ತಿದೆ. ಈ ವಿಚಾರದಲ್ಲಿ ರಾಜ್ಯದ 3 ಪ್ರಮುಖ ಪಕ್ಷಗಳ ನಾಯಕರ ಅಭಿಪ್ರಾಯ ಇಲ್ಲಿದೆ..

Advertisement

ಡಾ. ಬಿ.ಎಲ್‌.ಶಂಕರ್‌ ಉಪಾಧ್ಯಕ್ಷರು, ಕೆಪಿಸಿಸಿ
ಒಂದು ದೇಶ – ಒಂದು ಚುನಾವಣೆ, ಒಂದು ದೇಶ-ಭಾಷೆ ಈ ಘೋಷಣೆಗಳು ಮೇಲ್ನೋಟಕ್ಕೆ ಆಕರ್ಷಣೀಯವಾಗಿವೆ. ವೈಯಕ್ತಿಕವಾಗಿ ನಾನಿದನ್ನು ಬೆಂಬಲಿ ಸುತ್ತೇನೆ. ಆದರೆ 6452 ಜಾತಿಗಳು, 6 ಮತಗಳು, 52 ಬುಡಕಟ್ಟುಗಳಲ್ಲಿ ಹಂಚಿ ಹೋಗಿರುವ, 29 ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ, 1618 ಭಾಷೆಗಳನ್ನು ಮಾತನಾಡುವ ಭಾರತದಂತಹ ವೈವಿಧ್ಯಮಯ ಹಾಗೂ 5,68,000 ಹಳ್ಳಿಗಳು, 600 ಜಿಲ್ಲೆಗಳನ್ನು ಹೊಂದಿರುವ ಬೃಹತ್‌ ರಾಷ್ಟ್ರದಲ್ಲಿ ವಾಸ್ತವಿಕವಾಗಿ ಇದು ಸಾಧ್ಯವೇ ಎಂಬುದು ನನ್ನ ಪ್ರಶ್ನೆ.

1952ರ ಮೊದಲನೇ ಚುನಾವಣೆಯಿಂದ ಪ್ರಾರಂಭಿಸಿ 1967ರವರೆಗೆ ಲೋಕಸಭೆ ಹಾಗೂ ರಾಜ್ಯ ಶಾಸನಸಭೆಗಳಿಗೆ ಏಕಕಾಲದಲ್ಲಿಯೇ ಯಶಸ್ವಿಯಾಗಿ ಚುನಾವಣೆಗಳು ನಡೆದಿದ್ದವು. 1967ರ ನಂತರದಲ್ಲಿ ವಿವಿಧ ಕಾರಣಗಳಿಂದಾಗಿ ರಾಜಕೀಯ ಅಸ್ಥಿರತೆ ಉಂಟಾಗಿದ್ದರಿಂದ ಏಕಕಾಲದಲ್ಲಿ ಚುನಾವಣೆಗಳು ಸಾಧ್ಯವಾಗಿಲ್ಲ. ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಬಲರಾಗಿದ್ದ ಬಹಳಷ್ಟು ಪ್ರಾದೇಶಿಕ ನಾಯಕರುಗಳು ಕ್ರಮೇಣ ನಾನಾ ಕಾರಣಗಳಿಂದ ರಾಷ್ಟ್ರೀಯ ಪಕ್ಷಗಳ ಮುಖ್ಯವಾಹಿನಿಯಿಂದ ದೂರವಾಗಿ, ಜಾತಿ- ಮತ-ಪ್ರದೇಶ-ಭಾಷೆ-ಕುಟುಂಬ-ಸ್ವಾಭಿಮಾನ-ಪ್ರತಿಷ್ಠೆ ಮತ್ತಿತರ ಕಾರಣಗಳಿಂದಾಗಿ ತಮ್ಮದೇ ಸಂಘಟನೆ/ಪಕ್ಷ ಕಟ್ಟಿದರು. ಅನೇಕರು ಯಶಸ್ವಿಯೂ ಆಗಿದ್ದಾರೆ. 1967ರಿಂದ ಪ್ರಾರಂಭವಾದ ಪ್ರಾದೇಶಿಕ ಭಾವನೆಯ ಪ್ರಭಾವ ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಆವರಿಸಿದ್ದು ಸುಳ್ಳಲ್ಲ. ಅಲ್ಲದೆ, ಇದೇ ಪ್ರವೃತ್ತಿ 2019ರ ಚುನಾವಣೆಯಲ್ಲೂ ಮುಂದುವರಿದಿದ್ದನ್ನು ಕಾಣಬಹುದು. ಮುಂದಿನ ದಿನಗಳಲ್ಲಿಯೂ ಇದು ಹೆಚ್ಚಾಗಬಹುದೇ ವಿನ ಃ ಕಡಿಮೆಯಾಗುವ ಸಾಧ್ಯತೆಯಂತೂ ಕಂಡುಬರುತ್ತಿಲ್ಲ!

7 ರಾಷ್ಟ್ರೀಯ ಪಕ್ಷಗಳು, 150ಕ್ಕೂ ಮಿಕ್ಕಿದಂತೆ ರಾಜಕೀಯ ಪಕ್ಷಗಳು, 1200ಕ್ಕೂ ಮಿಕ್ಕಿರುವ ನೋಂದಾಯಿತ ರಾಜಕೀಯ ಪಕ್ಷಗಳು, 90 ಕೋಟಿ ಮತದಾರರು, 10 ಲಕ್ಷಕ್ಕೂ ಮಿಕ್ಕಿದ ಮತಗಟ್ಟೆಗಳನ್ನು ಹೊಂದಿರುವ ಚುನಾವಣಾ ಪ್ರಕ್ರಿಯೆ ಭಾರತ ದೇಶದ್ದು. ಈ ಹಿನ್ನೆಲೆಯಲ್ಲಿ “”ಒಂದು ದೇಶ – ಒಂದು ಚುನಾವಣೆ” ಪರಿಕಲ್ಪನೆಯನ್ನು ಸಾಧ್ಯವಾಗಿಸುವಲ್ಲಿನ ಪರಿಸ್ಥಿತಿಯ ಅವಲೋಕನ ವಿದು.

ಸಾಧ್ಯತೆಯಲ್ಲಿನ ಸಮಸ್ಯೆ: ಒಂದು ವೇಳೆ ಒಂದು ದೇಶ – ಒಂದು ಚುನಾವಣೆಯ ಸಾಧ್ಯತೆಯನ್ನೇ ಪರಿಗಣಿಸುವುದಾದಲ್ಲಿ; ಚುನಾವಣೆಯಲ್ಲಿ ಆಯ್ಕೆಯಾಗಿ ಅಧಿಕಾರದಲ್ಲಿರುವ ಸರ್ಕಾರ ಬಹುಮತ ಕಳೆದುಕೊಂಡಾಗ ಪರ್ಯಾಯ ಸರ್ಕಾರ ರಚಿಸಲು ಇತರ ಪಕ್ಷ/ಪಕ್ಷಗಳ ಒಕ್ಕೂಟಕ್ಕೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದಲ್ಲಿ ಸರ್ಕಾರದ ಅವಧಿಯನ್ನು ಮೊಟಕುಗೊಳಿಸಬೇಕೇ? ರಾಷ್ಟ್ರಪತಿ ಆಳ್ವಿಕೆ ಹೇರಬೇಕೆ? ಒಂದು ವೇಳೆ ಹೀಗೆ ಅಧಿಕಾರ ಮೊಟಕು ಮಾಡುವುದಾಗಲೀ, ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಲೀ ಮಾಡಿದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಪ್ರಬಲವಾಗಿ ರಾಜ್ಯ ಸರ್ಕಾರ ದುರ್ಬಲವಾಗುತ್ತದೆ ಎಂಬ ವಾದಕ್ಕೆ ಪುಷ್ಠಿ ನೀಡಿದಂತಾಗುವುದಿಲ್ಲವೇ?

Advertisement

ಈ ರೀತಿಯ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಚುನಾವಣೆಯವರೆಗಿನ ಉಳಿದ ಅಧಿಕಾರಾವಧಿಯ ನಿಭಾವಣೆ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗುತ್ತವೆ. ಪರಿಹಾರ ಸಾಧ್ಯತೆಗಳು: ಲೋಕಸಭೆ ಹಾಗೂ ರಾಜ್ಯ ಶಾಸನಸಭೆಗಳಿಗೆ ನಿರ್ದಿಷ್ಟ ಅಧಿಕಾರಾವಧಿಯನ್ನು ನಿಗದಿ ಗೊಳಿಸಬೇಕು. ಬಹುಮತ ಕಳಕೊಂಡಾಗ ಅಧಿಕಾರದಲ್ಲಿರವ ಸರ್ಕಾರ ವಿಶ್ವಾಸಮತವನ್ನು ಹಾಗೂ ಪ್ರತಿಪಕ್ಷಗಳು ಅವಿಶ್ವಾಸಮತ ವನ್ನೂ ಏಕಕಾಲದಲ್ಲಿಯೇ ಎದುರಿಸುವಂತಾಗಬೇಕು. ಯಾವುದೇ ಶಾಸಕನ ರಾಜೀನಾಮೆ ಅಥವಾ ಸಾವಿನಿಂದ ಸ್ಥಾನ ತೆರವಾದಾಗ ಉಪಚುನಾವಣೆ ನಡೆಸದೆ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡನೇ ಅಭ್ಯರ್ಥಿಯನ್ನು ವಿಧಾನಸಭಾ/ಲೋಕಸಭಾ ಸದಸ್ಯನೆಂದು ಚುನಾವಣಾ ಆಯೋಗ ಘೋಷಿಸಬೇಕು. ಆರಿಸಿಬಂದ ಪಕ್ಷಕ್ಕೆ ರಾಜೀನಾಮೆ ನೀಡಿ, ಇನ್ನೊಂದು ಪಕ್ಷದಲ್ಲಿ ಸೇರ್ಪಡೆಯಾದರೆ ಅಂಥವರನ್ನು ಮುಂದಿನ ಕನಿಷ್ಠ 3 ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು. (ಪ್ರಸ್ತುತ ತೆಲಂಗಾಣ, ಗುಜರಾತ್‌, ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಇದರ ಅರಿವಾದೀತು.) ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಪೂರಕವಾದ ಆಮೂಲಾಗ್ರ ಸುಧಾರಣೆಗಳನ್ನು ತರಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು ಹಾಗೂ ಉಪಚುನಾವಣೆಗಳು ಇರಲೇಬಾರದು.

ಚುನಾವಣಾ ಪ್ರಕ್ರಿಯೆಯಲ್ಲಿ ತರಬೇಕಾದ ಸುಧಾರಣೆಗಳು: ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಹಾಗೂ ಅಧಿಕಾರಾವಧಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟಕ್ಕೂ ವಿಸ್ತರಿಸಬೇಕು. ಇಡೀ ಚುನಾವಣಾ ಪ್ರಕ್ರಿಯೆ ಈ ಬಾರಿಯಂತೆ ಸುದೀರ್ಘ‌ವಾಗಿರದೆ, ಗರಿಷ್ಠ 15 ದಿನಗಳಲ್ಲಿ ಪೂರ್ಣಗೊಳ್ಳುವಂತಿರಬೇಕು. (ಚುನಾವಣೆಯನ್ನು ಅಕ್ಟೋಬರ್‌- ನವಂಬರ್‌ ತಿಂಗಳಲ್ಲಿ ನಿಗದಿಪಡಿಸಿದರೆ ಉತ್ತಮ. ಈ ಅವಧಿಯಲ್ಲಿ ಕೃಷಿ ಸಂಬಂಧಿತ ಕಾರ್ಯಗಳು ಬಹುತೇಕ ಮುಗಿದಿದ್ದು, ವಾತಾವರಣವೂ ಪೂರಕವಾಗಿರುವುದರಿಂದ ಜನತೆಯ ಪಾಲ್ಗೊಳ್ಳುವಿಕೆಯ ಪ್ರಮಾಣವೂ ಗಣನೀಯವಾಗಿರುತ್ತದೆ.)

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ “ಚುನಾವಣಾ ಪ್ರಣಾಳಿಕೆ’ಯನ್ನೇ ಚುನಾಯಿತರಾಗಿ ಬಂದ ನಂತರದ “”ಕ್ರಿಯಾ ಯೋಜನೆ’ಯನ್ನಾಗಿಸಬೇಕು. ಪ್ರತಿಯೊಂದು ಪಕ್ಷವೂ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಚುನಾವಣಾ ಆಯೋಗ ಅಥವಾ ಉಚ್ಚನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣ ಪತ್ರದೊಂದಿಗೆ ಅಧಿಕೃತವಾಗಿ ಸಲ್ಲಿಸುವಂತಾದರೆ ಪ್ರಣಾಳಿಕೆಗೊಂದು ನ್ಯಾಯಬದ್ಧ ಮಾನ್ಯತೆ ಸಿಗುವಂತಾಗುತ್ತದೆ. ಅಧಿಕಾರಕ್ಕೆ ಬಂದ ಮೇಲೆ ಪಕ್ಷ ಯಾ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಜಾರಿಗೆ ತರದಿದ್ದಲ್ಲಿ ಅದನ್ನು ಚುನಾವಣಾ ಆಯೋಗ ಅಥವಾ ಉಚ್ಚನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಮತದಾರರು ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಪ್ರಶ್ನಿಸುವಂತಿರಬೇಕು. ಚುನಾವಣಾ ಅಕ್ರಮ ಪ್ರಕರಣಗಳು ನ್ಯಾಯಾಲಯದಲ್ಲಿ ತೀರ್ಮಾನ ಆಗಲು ಕಾಲಮಿತಿ ನಿಗದಿಪಡಿಸಬೇಕು. ಚುನಾವಣೆಯ ಪಾವಿತ್ರÂತೆ ಹಾಗೂ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಜಯಶೀಲನಾಗುವ ಅಭ್ಯರ್ಥಿ ಚಲಾವಣೆಯಾದ ಮತದಾನದ ಶೇ.50ನ್ನು ಪಡೆದಿರಬೇಕು. ಒಬ್ಬನೇ ಅಭ್ಯರ್ಥಿ ಎರಡೆರಡು ಕ್ಷೇತ್ರಗಳಿಂದ ಸ್ಫರ್ಧಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಮತದಾನವನ್ನು ಕಡ್ಡಾಯವಾಗಿಸಬೇಕು.

ಶಾಸಕರು ಹಾಗೂ ಜನಪ್ರತಿನಿಧಿಗಳು ಸರ್ಕಾರದಿಂದ ನೇರವಾಗಿ ವೇತನ, ವಿಶ್ರಾಂತಿ ವೇತನ ಹಾಗೂ ಇತರ ಸೌಲಭ್ಯಗಳನ್ನು ಪಡೆಯುವುದರಿಂದ ಅವರುಗಳನ್ನು ಸರ್ಕಾರದ ಆರ್ಥಿಕ ನೀತಿ ಸಂಹಿತೆಗೆ ಒಳಪಡಿಸುವ ಮೂಲಕ ಜನತೆಗೆ ಉತ್ತರದಾಯಿಯನ್ನಾಗಿಸಬೇಕು. ಲೋಕಸಭೆ ಹಾಗೂ ವಿಧಾನಸಭೆಯ ಅನೇಕ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನೀಡಿರುವ ಮೀಸಲಾತಿ ಕಳೆದ 20-25 ವರ್ಷಗಳಿಂದಲೂ ಮುಂದುವರಿದಿದ್ದು, ಈ ಮೀಸಲಾತಿ ಪ್ರಕ್ರಿಯೆಯನ್ನು ಆವರ್ತನ ಮಾದರಿಯಲ್ಲಿ ಜಾರಿಗೊಳಿಸಬೇಕು.

ಒಂದು ದೇಶ- ಒಂದು ಚುನಾವಣೆ, ಒಂದು ದೇಶ- ಭಾಷೆ, ಒಂದು ದೇಶ- ಒಂದು ಕಾನೂನು ಎಂಬುದು ಕಾಲಕ್ರಮೇಣ ಚೀನಾ, ರಷ್ಯಾದಲ್ಲಿರುವಂತೆ “”ಒಂದೇ ದೇಶ, ಒಂದೇ ಪಕ್ಷ” ಎಂಬಂತಾಗಬಾರದು! ನಮ್ಮ ಸಂವಿಧಾನದ ಮೂಲ ಆಶಯ, ಅಗಾಧ ವೈವಿಧ್ಯತೆಯ ರಕ್ಷಣೆ, ವಿಶ್ವದ ಅತ್ಯಂತ ದೊಡ್ಡ ಹಾಗೂ ಪ್ರಬುದ್ಧ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಧಕ್ಕೆಯುಂಟಾಗಬಾರದೆಂಬುದೇ ನನ್ನ ಕಳಕಳಿ…

ತುರ್ತಾಗಿ ಜಾರಿಗೆ ಬರಲಿ
ರಾಮಚಂದ್ರಗೌಡ ಬಿಜೆಪಿ ನಾಯಕ

ಲೋಕಸಭಾ ಚುನಾವಣೆ ಹೊತ್ತಿನಲ್ಲೇ ರಾಜ್ಯ ವಿಧಾನಸಭೆಗಳಿಗೂ ಚುನಾವಣೆ ನಡೆಸುವ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವುದು ಸ್ವಾಗತಾರ್ಹ. ದೀರ್ಘ‌ ಕಾಲದಿಂದ ಬಾಕಿಯಿರುವ ಈ ಪ್ರಸ್ತಾವವನ್ನು ತುರ್ತಾಗಿ ಜಾರಿಗೆ ತರಬೇಕಾದ ಅಗತ್ಯವಿದೆ. ಸ್ವಾತಂತ್ರಾನಂತರ 1967ರವರೆಗೆ ಲೋಕಸಭೆ ಹಾಗೂ ಹಲವು ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿತ್ತು. ಆದರೆ 1967ರಲ್ಲಿ ಕಾಂಗ್ರೆಸ್‌ ಪ್ರಭಾವ ತಗ್ಗಿದ ತರುವಾಯ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವ ಚಿಂತನೆ ಮೂಡಿತು. ಕ್ರಮೇಣ ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭೆಗಳ ಚುನಾವಣೆ ನಡೆಯುವ ಪದ್ಧತಿ ಕಡಿಮೆಯಾಗುತ್ತಾ ಬಂದಿತು.

ಪ್ರಧಾನಿ ನರೇಂದ್ರ ಮೋದಿಯವರ ಈ ಪ್ರಸ್ತಾವವನ್ನು ನಾನು ಸಂಪೂರ್ಣ ಸ್ವಾಗತಿಸುತ್ತೇನೆ. ದೇಶದ ಪ್ರಗತಿ, ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಎಲ್ಲ ಪಕ್ಷಗಳು ಸರ್ವಾನುಮತದಿಂದ ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಬೇಕು. ಚುನಾವಣಾ ಆಯೋಗವು ಯಾವುದೇ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತ ಆಗುತ್ತವೆ. ಚುನಾವಣೆ ಪ್ರಕ್ರಿಯೆ ಮುಗಿಯುವ ಸುಮಾರು 45 ದಿನಗಳ ಕಾಲ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಿಯೇ ಇರುತ್ತವೆ. ಅಧಿಕಾರಿಗಳು ನೇರವಾಗಿ ಚುನಾವಣಾ ಆಯೋಗದ ನಿಯಂತ್ರಣದಲ್ಲಿರುವುದರಿಂದ, ಈ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದು.

ಹಾಗಾಗಿ ವರ್ಷವಿಡೀ ಒಂದಲ್ಲ ಒಂದು ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಚುನಾವಣೆ ಅವಧಿಯಲ್ಲಿ ರಾಜ್ಯಗಳಲ್ಲಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಣ್ಣ ಚಟುವಟಿಕೆಯೂ ನಡೆಯದಂತೆ ಸಂಪೂರ್ಣ ಸ್ಥಗಿತವಾಗಿರುತ್ತದೆ. ಉಸ್ತುವಾರಿಗೆ ಎಂಬಂತೆ ಸರ್ಕಾರವಿದ್ದು, ಅಭಿವೃದ್ಧಿ ಕಾರ್ಯದ ನಿಟ್ಟಿನಲ್ಲಿ ಯಾವುದೇ ಅರ್ಥಪೂರ್ಣ, ಯೋಜಿತ ಕಾರ್ಯ ನಡೆಯುವುದಿಲ್ಲ. ಇದು ದೇಶ ಹಾಗೂ ರಾಜ್ಯಗಳ ಅಭಿವೃದ್ಧಿಗೆ ಒಳಿತಲ್ಲ. ಇದಷ್ಟೇ ಅಲ್ಲದೇ ಇನ್ನೂ ಅನೇಕ ಅಂಶಗಳಿವೆ.

ಚುನಾವಣಾ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿದರೆ ಇಲ್ಲವೇ ಕೆಲ ಯೋಜನೆಗಳನ್ನು ಘೋಷಿಸಿದರೂ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಬಿಡುಗಡೆ ಮಾಡಿದ ಅನುದಾನ ಬಳಸಲು, ಘೋಷಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದು. ಹಾಗಾಗಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ರಾಜ್ಯ ಹಿಂದುಳಿಯುತ್ತದೆ.

ಇನ್ನು ಚುನಾವಣಾ ವೆಚ್ಚದ ಬಗ್ಗೆ ಹೇಳುವುದಾದರೆ ಚುನಾವಣೆ ಘೋಷಣೆಯಾದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣಾ ವೆಚ್ಚಕ್ಕೆಂದು ಇಂತಿಷ್ಟು ಹಣವನ್ನು ಬಜೆಟ್‌ನಲ್ಲಿ ಕಾಯ್ದಿರಿಸುತ್ತವೆ. ವೆಚ್ಚದ ಬಗ್ಗೆ ರಾಜ್ಯದ ಲೆಕ್ಕಪತ್ರ ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕಿದ್ದು, ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ಹೊರೆ ಬೀಳುತ್ತದೆ.

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದರೆ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ದುರುದ್ದೇಶದಿಂದ ಪ್ರಧಾನಿಯವರು ಈ ಚರ್ಚೆ ಶುರು ಮಾಡಿದ್ದಾರೆ ಎಂಬ ಭಾವನೆ, ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ರಾಜ್ಯ, ದೇಶದ ಜನ ಪ್ರಬುದ್ಧ ರಿದ್ದಾರೆ. ಕೇಂದ್ರ ಹಾಗೂ ರಾಜ್ಯಕ್ಕೆ ಯಾವ ಸರ್ಕಾರ ಬೇಕು ಎಂಬುದನ್ನು ಯೋಚಿಸಿಯೇ ಮತ ಹಾಕುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆ ನೀಡಬಹುದು.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 28ರಲ್ಲಿ 25 ಸ್ಥಾನ ಗೆದ್ದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿತು. 1999ರಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಾಗ ಬಿಜೆಪಿ 16 ಲೋಕಸಭಾ ಸ್ಥಾನ ಗೆದ್ದರೆ ವಿಧಾನಸಭೆಗೆ ಜನ ಕಾಂಗ್ರೆಸ್‌ಗೆ ಬಹುಮತ ನೀಡಿದ್ದರು. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಘಡ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.

ಅಲ್ಲದೇ ಏಕಕಾಲಕ್ಕೆ ಚುನಾವಣೆ ನಡೆದರೆ ಎರಡು ಪ್ರತ್ಯೇಕ ವಿದ್ಯುನ್ಮಾನ ಮತಯಂತ್ರಗಳಿರಲಿದ್ದು, ಜನ ತಮ್ಮ ಇಚ್ಛೆಯ ಪಕ್ಷಕ್ಕೆ ಮತ ಹಾಕಲು ಅವಕಾಶವಿರಲಿದೆ. ಹಾಗಾಗಿ ಪ್ರಧಾನಿಯವರ ಚಿಂತನೆಯ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂಬುದು ಸ್ಪಷ್ಟ. ಅಭಿವೃದ್ಧಿ ಹಾಗೂ ವೆಚ್ಚ ನಿಯಂತ್ರಣಕ್ಕಾಗಿ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಯುವುದು ಸೂಕ್ತ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯನ್ನು ಸಂಪೂರ್ಣ ಬೆಂಬಲಿಸುತ್ತೇನೆ. ಹಾಗೆಯೇ ದೇಶದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳು ಪ್ರಧಾನಿಯವರ ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡುತ್ತೇನೆ.

ಪರಿಕಲ್ಪನೆ ಆದರ್ಶವಾಗಿದೆ! ಆದರೆ ನಮ್ಮದು ಬಹುತ್ವದ ದೇಶ
ವೈ.ಎಸ್‌.ವಿ.ದತ್ತಾ, ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷರು

“ಒಂದು ದೇಶ, ಒಂದೇ ಚುನಾವಣೆ’ ಪರಿಕಲ್ಪನೆ ಆದರ್ಶವಾಗಿ ಕಾಣುವುದರ ಜತೆಗೆ ತಾತ್ವಿಕವಾಗಿಯೂ ಸರಿ ಎನಿಸಬಹುದು. ಆರ್ಥಿಕ ದೃಷ್ಟಿಯಿಂದಲೂ ಮಿತ ವ್ಯಯಕಾರಿಯೂ ಆಗಿರುವುದರಿಂದ ಸ್ವಾಗತಿಸಲಾಗುತ್ತಿದೆ.

ನಾವು ಪಾರ್ಲಿಮೆಂಟರಿ ಡೆಮಾಕ್ರಸಿಯನ್ನು (ಸಂಸದೀಯ ಪ್ರಜಾಪ್ರಭುತ್ವವನ್ನು) ಒಪ್ಪಿಕೊಂಡಿದ್ದೇವೆ. ಆದರೆ, ನಮ್ಮದು ಬಹುತ್ವದ ದೇಶ, ಒಕ್ಕೂಟ ವ್ಯವಸ್ಥೆಯಡಿ ಇದ್ದೇವೆ. ದೇಶದಲ್ಲಿ ಆಯಾ ರಾಜ್ಯದ ಸಾಮಾಜಿಕ, ಭೋಗೋಳಿಕ ವ್ಯವಸ್ಥೆ ಬೇರೆ ಬೇರೆಯೇ ಇರುತ್ತದೆ.

ಆಯಾ ರಾಜ್ಯಗಳ ಪ್ರಾದೇಶಿಕತೆ, ಸ್ವಾಭಿಮಾನ, ಆಸ್ಮಿತೆಗಳನ್ನೂ ಗಮನಿಸುವ ಅಗತ್ಯವಿರುತ್ತದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ. ಪ್ರಾದೇಶಿಕ ಆಸ್ಮಿತೆ ಉಳಿಯಬೇಕು. ಪ್ರಮುಖವಾಗಿ ಹೇಳುವುದಾರೆ ಜನತೆ, ಲೋಕಸಭೆ ಚುನಾವಣೆಗೆ ಮತ ಚಲಾವಣೆ ಮಾಡುವಾಗ ಯೋಚಿಸುವ ಧಾಟಿ ಬೇರೆ, ರಾಜ್ಯ ವಿಧಾನಸಭೆ ಚುನಾವಣೆಗೆ ಮತ ಹಾಕುವಾಗ ನೋಡುವುದು ಬೇರೆ. ಲೋಕಸಭೆ ಚುನಾವಣೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಗೆ ಜನಪ್ರತಿನಿಧಿಗಳ ಆಯ್ಕೆಗೆ ವಿಷಯಗಳೇ ಬೇರೆ, ಬೇರೆಯಾಗಿರುತ್ತವೆ.

ದೇಶದಲ್ಲಿ ಈ ಹಿಂದೆ ನಡೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳ ಫ‌ಲಿತಾಂಶ ನೋಡಿದಾಗ ಮತದಾರರ ಆಯ್ಕೆ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ.
ಎಲ್ಲದಕ್ಕಿಂತ ಹೆಚ್ಚಾಗಿ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಮತ ಹಾಕುವಂತೆ ಮತದಾರರನ್ನು ಮಾನಸಿಕವಾಗಿ ತಯಾರಿ ಮಾಡಬೇಕಾಗಿದೆ. ಯಾಕೆಂದರೆ, ಮತದಾರರಿಗೆ ವಿಧಾನಸಭೆಗೆ ತನ್ನ ಆಯ್ಕೆ ಬೇರೆ, ಲೋಕಸಭೆಗೆ ತನ್ನ ಆಯ್ಕೆಯೇ ಬೇರೆ ಇರುತ್ತದೆ.

ಒಂದೇ ಕಾಲದಲ್ಲಿ ಎರಡೂ ಚುನಾವಣೆಗಳಿಗೆ ಮತ ಹಾಕಬೇಕಾದರೆ ಮತದಾರ ದೇಶ ಹಾಗೂ ರಾಜ್ಯದ ವಿಷಯಗಳನ್ನು ಬೇರ್ಪಡಿಸಿ ಪ್ರತ್ಯೇಕಿಸಿ ಮತದಾನ ಮಾಡಬೇಕು. ಅಷ್ಟು ವ್ಯವಧಾನ ಹಾಗೂ ಮಾನಸಿಕವಾಗಿ ಸಿದ್ಧತೆಯೂ ಆಗಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ಅದು ಕಷ್ಟ ಎನಿಸುತ್ತದೆ.

ಬುಧವಾರ ಪ್ರಧಾನಮಂತ್ರಿ ನರೇಂದ್ರಮೋದಿಯವರು ಒಂದು ದೇಶ ಒಂದೇ ಚುನಾವಣೆ ವಿಚಾರದಲ್ಲಿ ಚರ್ಚೆಗೆ ಸಭೆ ಕರೆದಿರುವುದು ಸ್ವಾಗತಾರ್ಹ. ಆದರೆ, ಈಗ ಅದಕ್ಕಿಂತ ಪ್ರಮುಖವಾಗಿ ಚುನಾವಣೆ ಪದ್ಧತಿಯ ಸುಧಾರಣೆ ಬಗ್ಗೆ ಚರ್ಚೆಯಾಗಬೇಕಿದೆ. ಅದು ದೇಶವ್ಯಾಪಿ ಕೇಳಿಬರುತ್ತಿರುವ ಬೇಡಿಕೆಯೂ ಹೌದು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಚುನಾವಣೆ ವ್ಯವಸ್ಥೆ ಬಗ್ಗೆ ಒಂದು ರೀತಿಯಲ್ಲಿ ಬೇಸರ ಮೂಡಿಸಿದೆ. ಚುನಾವಣಾ ಪದ್ಧತಿ ಸಾಕಷ್ಟು ಸುಧಾರಣೆಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಚುನಾವಣೆ ಪದ್ಧತಿ ಸುಧಾರಣೆ ವಿಷಯ ಪ್ರಮುಖವಾಗಿಟ್ಟುಕೊಂಡು ಅದಕ್ಕೆ ಪ್ರಾತಿನಿಧ್ಯ ಹೆಚ್ಚು ನೀಡಿ ಚರ್ಚೆ ಹಾಗೂ ಸಭೆಗಳು ನಡೆದು ಅದರಲ್ಲಿ ಒಂದು ಭಾಗವಾಗಿ ಒಂದು ದೇಶ ಒಂದೇ ಚುನಾವಣೆ ವಿಚಾರವೂ ಇದ್ದರೆ ಸೂಕ್ತ.

Advertisement

Udayavani is now on Telegram. Click here to join our channel and stay updated with the latest news.

Next