ಚೆನ್ನೈ: ಇತ್ತೀಚೆಗೆ ಇಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿರುವ ಘಟನೆಗಳು ವರದಿಯಾಗುತ್ತಿದ್ದು, ಇದೀಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಶನಿವಾರ (ಏಪ್ರಿಲ್ 30) ಬೆಳಗ್ಗೆ ಮತ್ತೊಂದು ಇಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದ ಘಟನೆ ನಡೆದಿದೆ.
ಇದನ್ನೂ ಓದಿ:ಬೇಕಾದಷ್ಟು ಕಲ್ಲಿದ್ದಲು ಸಂಗ್ರಹವಿದೆ, ಗಾಬರಿಯಾಗುವ ಅವಶ್ಯಕತೆಯಿಲ್ಲ: ಪ್ರಹ್ಲಾದ್ ಜೋಶಿ
ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಸತೀಶ್ ಎಂಬವರು ಕಳೆದ ವರ್ಷ ಒಕಿನಾವಾ ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದರು. ಇಂದು ಬೆಳಗ್ಗೆ ಸತೀಶ್ ಅವರು ತಮ್ಮ ಕಚೇರಿಯ ಬಳಿ ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಿದ ವೇಳೆ ಹೊಗೆ ಬರಲು ಪ್ರಾರಂಭವಾಗಿತ್ತು.
ಕೂಡಲೇ ಸತೀಶ್, ಸೀಟ್ ಅನ್ನು ಎತ್ತಿದಾಗ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದರು. ನಂತರ ಇಡೀ ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿ ತಿಳಿಸಿದೆ. ಕೆಲವು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರು ಕೂಡಾ ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ವರದಿ ವಿವರಿಸಿದೆ.
ಈಗಾಗಲೇ ಹಲವೆಡೆ ಇಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾದ ನಂತರ ಒಕಿನಾವಾ, ಒಲಾದಂತಹ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ತಮ್ಮ ಹಲವಾರು ಸ್ಕೂಟರ್ ಗಳನ್ನು ವಾಪಸ್ ಪಡೆದಿರುವುದಾಗಿ ವರದಿ ತಿಳಿಸಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಒಕಿನಾವಾ ಇಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದ ಘಟನೆ ವರದಿಯಾಗಿತ್ತು. ಬ್ಯಾಟರಿ ಸ್ಫೋಟಗೊಂಡು ಇ ಸ್ಕೂಟರ್ ಸುಟ್ಟು ಹೋದ ಪ್ರಕರಣದ ನಂತರ ಒಕಿನಾವಾ ಕಂಪನಿ 3,215 ಇ ಸ್ಕೂಟರ್ ಗಳನ್ನು ಹಿಂಪಡೆದಿತ್ತು.