Advertisement

UV Fusion: ಒಂದು ತಿಂಗಳ ಸಂಬಳ ಹೋಯ್ತು ಕಣಪ್ಪ…

07:11 AM Dec 07, 2023 | Team Udayavani |

ಮಧ್ಯಾಹ್ನ ಹಾಸ್ಟೆಲಿನ ಕೊನೆಯ ಊಟದ ಗಂಟೆ ಬಾರಿಸಿತು. ಹಾಸಿಗೆಯಿಂದ ಎದ್ದು ಕಬೋರ್ಡ್‌ ನಿಂದ ಪ್ಲೇಟ್‌ ತೆಗೆದು ಎಂದಿಗಿಂತ ಸಾವಕಾಶದ ನಡೆಗೆಯಲ್ಲಿ ಮೆಸ್‌ ಕಡೆ ಹೊರಟೆ. ಊಟ ಬಡಿಸಿಕೊಂಡು ಎಲ್ಲರಿಂದ ದೂರವಿರುವ ಒಂದು ಟೇಬಲ್‌ ಎದುರು ಕುಳಿತೆ. ನಾನು ಬಡಿಸಿಕೊಂಡು ತಂದ ಊಟವನ್ನೇ ದಿಟ್ಟಿಸಿ ನೋಡ್ತಾ ಇದ್ದೆ. ಯಾಕೋ ಉಣ್ಣಲು ಮನಸಾಗಲಿಲ್ಲ. ಎಂದಿನಂತೆ ನಾನು ಚೆನ್ನಾಗಿದ್ದೇನೆ ಅಂತ ನನಗೆ ಭಾಸವಾಗಲಿಲ್ಲ. ಚೆನ್ನಾಗಿದ್ದೇನೆ ಎಂದು ಭಾವಿಸಿಕೊಂಡು ಗಬಗಬನೆ ತಿಂದು ಬಿಡೋಕೆ ಇದು ಮನೆ ಊಟ ಕೂಡ ಅಲ್ಲ. ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಓಡಾಡುತ್ತಾ ಇದ್ದವು. ಅವುಗಳನ್ನು ಅನ್ನ ಸಾಂಬಾರ್‌ ಜತೆ ಕಲಸಿ ಉದರಕ್ಕೆ ಇಳಿಸುವ ಪ್ರಯತ್ನ ಮಾಡಹೊರಟೆ.

Advertisement

ಒಂದು ತುತ್ತು ಉಂಡಿದ್ದನಷ್ಟೇ ನಮ್ಮ ಹಾಸ್ಟೆಲ್‌ ವಾಚ್‌ಮೆನ್‌ ಅಬೂಬಕರ್‌ ಅಣ್ಣ ತಟ್ಟೆ ಹಿಡಿದು ಮುಗುಳ್ನಗುತ್ತಾ ನಾನಿರುವಲ್ಲಿ ಬರುತ್ತಿರುವಂತೆ ಗೋಚರವಾಯಿತು. ಬೆಳಗಿನಿಂದ ನಿದ್ರಿಸಿ ಸಪ್ಪೆಯಾಗಿದ್ದ ನನ್ನ ಮುಖ ಅವರನ್ನು ಕಂಡು ಕೊಂಚ ಅರಳಿತು.  “ಹಾಯ್‌ ಬಾಸ್‌’ ಎಂದು ಎಂದಿನಂತೆ ನಾನು ಉದ್ಘರಿಸಿದೆ. ಯಾವತ್ತಿನ ಚೈತನ್ಯ ನನ್ನ ಧ್ವನಿಯಲ್ಲಿ ಇಲ್ಲ ಎಂಬುದನ್ನು ಅವರರಿತರು. ಏನಾಯ್ತು..? ಹುಷಾರ್‌ ಇಲ್ವಾ..! ಸಹಾನುಭೂತಿಯಿಂದ ಕೇಳಿದ್ರು. ಹಾ ಅಣ್ಣ ನಿನ್ನೆಯಿಂದ ಮೈಯಲ್ಲಿ ಸ್ವಲ್ಪ ಸರಿ ಇಲ್ಲ. ಶೀತ ಜ್ವರ ತಲೆನೋವು. ಬೇಸರಿಸುತ್ತಾ ಉತ್ತರಿಸಿದೆ.

ಓಹೋ ಹಾಗಾಗಿ ನಿನ್ನೆಯಿಂದ ಕಾಣಿಸಲಿಲ್ಲ ಅನ್ನು. ಏನಾಯ್ತಪ್ಪ ಎಲ್ಲೋದ ಅಂತ ಯೋಚಿಸಿದೆ ಅಂದ್ರು. ಪ್ರತಿದಿನ ಉತ್ಸಾಹದಲ್ಲಿ ಕಾಲೇಜಿಗೆ ಹೊರಡುವ ನಾನು, ಕಾಲೇಜಿನಿಂದ ಸುಸ್ತಾಗಿ ಮರಳುವಾಗ ಹಾಸ್ಟೆಲ್‌ ಜಗುಲಿಯಲ್ಲಿ ಬೆಳಗಿನಿಂದ ಒಬ್ಬಂಟಿಯಾಗಿ ಡ್ನೂಟಿ ಮಾಡ್ತಾ ತಮ್ಮಷ್ಟಕ್ಕೆ ಕುಳಿತಿರುವ ಪ್ರೀತಿಯ ವಾಚ್‌ಮೆನ್‌ ಅಣ್ಣಂಗೆ ‘ಹಾಯ್‌ ಬಾಸ್‌’ ಅಂತ ಕೈ ಬೀಸುತ್ತಿದ್ದೆ. ಅವರೂ ಮುಗುಳ್ನಗುತ್ತಾ ನನ್ನಂತೆಯೇ ಪ್ರತಿಯಾಗಿ ಸಂಬೋಧಿಸಿ ಪರಸ್ಪರ ಹದುಳೊರೆ ವಿನಿಮಯ ಮಾಡಿಕೊಳ್ಳೋದನ್ನು ನಮಗೇ ಗೊತ್ತಿಲ್ಲದಂತೆ ರೂಢಿಸಿಕೊಂಡು ಬಿಟ್ಟಿದ್ವಿ.

ಏನೋ ತುಂಬಾ ಬಿಕೋ ಅನಿಸ್ತಾ ಇತ್ತು ಕಣೋ. ನಡುಗುವ ಅರವತ್ತೈದರ ಆಸುಪಾಸಿನ ಅವರ ಕೈ ಮಜ್ಜಿಗೆ ತುಂಬಿದ ಲೋಟವನ್ನು ಎತ್ತಿಕೊಂಡಿತು. ನನ್ನನುದ್ದೇಶಿಸಿ ಆಸ್ಪತ್ರೆಗೆ ಹೋಗಿದ್ಯಾ? ಮಾತ್ರೆ ತೆಗೆದುಕೊಂಡೆಯಾ? ಕನಿಕರದಿಂದ ಕೇಳಿದರು. ಈಗ ಸ್ವಲ್ಪ ಪರವಾಗಿಲ್ಲ ಅಣ್ಣ. ಆಸ್ಪತ್ರೆಗೆ ಹೋಗೋಣ ಅಂತ ಒಮ್ಮೆ ಅನ್ಕೊಂಡೆ ಸುಮ್ನೆ ಯಾಕೆ 500 ರೂಪಾಯಿ ಪಾಕೆಟ್‌ ಮನಿ ನಷ್ಟ ಮಾಡಿಕೊಳ್ಳೋದು ಅಂತ ಅನಿಸಿ ಸುಮ್ಮನಾದೆ ಎಂದೆ.

ಒಂದು ಕ್ಷಣ ತಮ್ಮ ಊಟ ನಿಲ್ಲಿಸಿ, ನನ್ನನ್ನೇ ಗುರಾಯಿಸಿ ನಗೆ ಬೀರಿದರು. ಪ್ರತೀ ಬಾರಿ ಅವರು ಈ ತರಹದ ನಗೆ ಬೀರಿದಾಗ ನನಗೇನೋ ಕಾತರ. ಯಾಕಂದರೆ ಅವರ ನೆನಪಿನ ಅಥವಾ ಜೀವನಾನುಭವದ ಕತೆಗಳು ಪ್ರಕಟವಾಗುವುದು ಇಂಥದ್ದೇ ಸಮಯದಲ್ಲಿ. ನಾನಂದುಕೊಂಡಂತೆಯೇ ಆಯ್ತು. ನಮ್‌ ಕಾಲದಲ್ಲಿ ಪಾಕೆಟ್‌ ಮನೀನೂ ಇರ್ಲಿಲ್ಲ ಅದನ್ನು ಕಳ್ಕೊಳ್ಳೋದಕ್ಕೆ ಸಣ್ಣಪುಟ್ಟ ರೋಗಗಳೂ ಇರ್ಲಿಲ್ಲ ಬಿಡು. ಎಲ್ಲ ಈಗಿನ ವಾತಾವರಣದ ಮಹಿಮೆ ಎನ್ನುತ್ತ ವ್ಯತಿರಿಕ್ತತೆಯನ್ನು ಬಿಚ್ಚಿಟ್ಟರು.

Advertisement

ನನಗೂ ಹೋದ ತಿಂಗಳು ಹುಷಾರಿರಲಿಲ್ಲಪ್ಪ,  ಹೊರದೇಶದಲ್ಲಿರುವ ನನ್ನ ಮಗನತ್ರ ಹೇಳಿಕೊಂಡೆ. ಎಲ್ಲೆಂದರಲ್ಲಿ ತೋರಿಸಿಕೊಳ್ಳಬೇಡಿ ಅಪ್ಪ. ಒಳ್ಳೆಯ ಆಸ್ಪತ್ರೆ ನಾನು ಹೇಳ್ತೀನಿ ಅಲ್ಲೇ ಹೋಗಿ ಅಂದ. ಮಗ ನನ್ನ ಮೇಲೆ ವಾತ್ಸಲ್ಯ ತೋರಿದನಲ್ಲಾ ಅಂತ ನೆಮ್ಮದಿ ಆಯ್ತು. ಮಗ ಹೇಳಿದ ದೊಡ್ಡಾಸ್ಪತ್ರೆಗೆ ಹೋದೆ. ದೊಡ್ಡ ಆಸ್ಪತ್ರೆಯವರು ನನ್ನನ್ನು ದೊಡ್ಡವನಂತೆಯೇ ಸತ್ಕರಿಸಿದರು. ಪ್ರವೇಶ, ದಾಖಲೀಕರಣ, ತಪಾಸಣೆ, ಚಿಕಿತ್ಸೆ ಎಲ್ಲವೂ ದೊಡ್ಡದಾಗಿಯೇ. ಸ್ಕ್ಯಾನು, ಇ.ಸಿ.ಜಿ, ಬ್ಲಿಡ್‌ ಟೆಸ್ಟು, ಗಂಟೆಗಟ್ಟಲೆ ಇನ್ನೂ ಏನೇನೋ ಮಾಡಿ ಔಷಧ ಬರೆದು ಬಿಲ್ಲುಕೊಟ್ಟಾಗ ನಾನು ದೊಡ್ಡವನಲ್ಲ ಅಂತ ನನಗನಿಸಿತು.

ಆರೂವರೆ ಸಾವಿರ ಮೊತ್ತದ ಬಿಲ್ಲು ಕಂಡು ಬೆಳಗಿನಿಂದ ಪಡೆದ ವೈದ್ಯಕೀಯ ಚಿಕಿತ್ಸೆಗೆ ನಾನು ಅನರ್ಹ ಎನಿಸಿ ಕಣ್ಣೀರು ತುಂಬಿತು. ಒಂದು ತಿಂಗಳ ಸಂಬಳ ಕೈಜಾರಿತಲ್ಲ ಎಂದು ದುಖಃ ಉಮ್ಮಳಿಸಿ ಬಂತು. ದೊಡ್ಡವನಾಗಿ ಹುಷಾರಾಗಲು ಹೋಗಿ ಸಣ್ಣ ಮೋರೆ ಹಾಕಿ ಆಸ್ಪತ್ರೆಯಿಂದ ಹೊರನಡೆದೆ. ಖಾತೆ ಖಾಲಿಯಾಗಿರುವುದು ತಿಳಿದೂ ಔಷಧ ಅಂಗಡಿಯ ಬಾಗಿಲಲ್ಲಿ ನಿಂತು ಮಗನಿಗೆ ಫೋನ್‌ ಮಾಡಿ ನೀನು ಹೇಳಿದಹಾಗೆ ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿದೆ ಎಲ್ಲ ಚೆನ್ನಾಗಿತ್ತು ಕಣಪ್ಪ ಡಾಕ್ಟ್ರು, ಆರೈಕೆ, ಬಿಲ್ಲು ಎಲ್ಲ ಎಂದೆ.

ತತ್‌ಕ್ಷಣ ಮರುತ್ತರಿಸಿದ ಮಗ ನಾನು ಮೊದಲೇ ಎಷ್ಟು ಸಲ ಹೇಳಿದ್ದೇನೆ ನಿಂಗೆ ಅಪ್ಪ, ಈಗಾದರೂ ಬುದ್ಧಿ ಬಂತಲ್ಲಾ ಅಂದ. ಸ್ವಲ್ಪ ಹಣ ಬೇಕಿತ್ತು ಮಗನೇ ಅಂತ ಕೇಳ್ಬೇಕು ಅನಿಸಿತು ಆದ್ರೆ ಸ್ವಾಭಿಮಾನ ಬಿಡಲಿಲ್ಲ. ಅವನಿಗೂ ಅಪ್ಪನತ್ರ ದುಡ್ಡಿದೆಯೋ, ಬೇಕೋ ಎಂದು ಕೇಳುವ ಸೌಜನ್ಯ ನಾನು ಕಲಿಸಲಿಲ್ಲವೋ ಏನೋ ಗೊತ್ತಿಲ್ಲ. ಬ್ಯುಸಿ ಇದ್ದೇನೆ ಅಪ್ಪ. ಹುಷಾರು ಮಾತ್ರೆ ಎಲ್ಲ ಸರಿಯಾಗಿ ತಗೊಳ್ಳಿ ಅಂತ ಹೇಳಿ ಫೋನಿಟ್ಟ. ಅಬೂಬಕರ್‌ ಅಣ್ಣನ ಕಣ್ಣು ತೇವವಾಗಿತ್ತು. ಖಾಲಿಯಾದ ಊಟದ ತಟ್ಟೆಗೆ ಕಣ್ಣೀರು ಜಿನುಗಿತ್ತು. ಒಂದೆಡೆ ಸಮಾಧಾನಪಡಿಸುವ ಹಂಬಲ ಇನ್ನೊಂದೆಡೆ ಆಮೇಲೆ ಏನು ಮಾಡಿದಿರಿ ಅಂತ ಕೇಳ್ಳೋ ಕುತೂಹಲ ಆದರೂ ನಾನು ಕೇಳಲಿಲ್ಲ. ನಾನಾಗಲೇ ಆ ಘಟನೆಯಿಂದ ದೊಡ್ಡ ಪಾಠವನ್ನು ಕಲಿತಾಗಿತ್ತು.

-ಪ್ರಸಾದ್‌ ಕೋಮಾರ್‌

ಆಳ್ವಾಸ್‌ ಕಾಲೇಜು ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next