ಹೊನ್ನಾವರ: ಶಿಕ್ಷಕರು ಮತ್ತು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಗ್ರಾಪಂಗೆ ಒಂದು ಮಾದರಿ ಶಾಲೆ ಎಂಬ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಈಗಾಗಲೆ ಸಿದ್ಧತೆ ನಡೆದಿದ್ದು, ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಹಾಗೂ ಸಚಿವರಲ್ಲಿ ಚರ್ಚೆ ನಡೆಸಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕಡ್ನೀರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಪಂ ಉತ್ತರ ಕನ್ನಡ, ಪೂರ್ವ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕಡ್ನೀರು ಭಾಗಕ್ಕೆ ಚಂದಾವರ ವ್ಯಾಪ್ತಿಯಲ್ಲಿ 5 ಎಕರೆ ಜಾಗವನ್ನು ಖರೀದಿಸಿ 1ರಿಂದ 7ನೇ ತರಗತಿ ವರೆಗೆ ಪಾಠ ಮಾಡುವ ಒಂದೇ ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ಸಾವಿರ ಹಣತೆಗಳನ್ನು ಹಚ್ಚಿದ ಸರ್ಕಾರಿ ಶಾಲೆಗಳು ನಮ್ಮೂರಿನ ದೊಡ್ಡ ಆಸ್ತಿ. ಆಗಿನ ಕಾಲದಲ್ಲಿ ಹಿರಿಯರು ಶ್ರಮವಹಿಸಿ ಕಟ್ಟಿ ಬೆಳೆಸಿದ ಶಾಲೆಗಳು ಇಂದಿಗೂ ಬೆಳಗುತ್ತಲಿದೆ. ಯಾವ ವಿದ್ಯಾರ್ಥಿಗಳೂ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗದೇ ಕನ್ನಡ ಶಾಲೆಯಲ್ಲಿಯೇ ಪಾಠ ಕಲಿಯಬೇಕು ಎಂದರು.
ಜಿಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ವಿನಯ ನಾಯ್ಕ ಅವರು ತಮ್ಮ ತಾಯಿ ಮೋಹಿನಿ ನಾಯ್ಕ ಅವರ ಸ್ಮರಣಾರ್ಥವಾಗಿ 2017-18 ಹಾಗೂ 2018-19ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ಯೋಗಿನಿ ವೆಂಕಟ್ರಮಣ ನಾಯ್ಕ ಹಾಗೂ ಅಕ್ಷರ ದಾಸೋಹದ ಶುಶೀಲಾ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಪಂ ಇಒ ಸುರೇಶ ನಾಯ್ಕ “ಚಿಗುರು’ ಕೈಬರಹ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಊರಿನ ಗಣ್ಯರು, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ನಾಯ್ಕ ಮೊದಲಾದವರು ಇದ್ದರು. ಮುಖ್ಯಾಧ್ಯಾಪಕಿ ಶಾರದಾ ಶರ್ಮಾ ಸ್ವಾಗತಿಸಿದರು. ಸಭಾ ಕಾರ್ಯಕ್ರಮ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.