Advertisement

ಕೆಜಿ ಪ್ಲಾಸ್ಟಿಕ್‌ ಕೊಟ್ಟರೆ ಒಂದು ಊಟ ಉಚಿತ

12:05 PM Oct 21, 2019 | Team Udayavani |

ಜಮಖಂಡಿ: 1 ಕೆಜಿ ಪ್ಲಾಸ್ಟಿಕ್‌ ಕೊಟ್ಟರೆ ಒಂದು ಊಟ ಉಚಿತ. ಹೌದು. ನಗರದ ಹೋಟೆಲ್‌ ಉದ್ಯಮಿಯೊಬ್ಬರು ಪ್ಲಾಸ್ಟಿಕ್‌ ಬಳಕೆಯನ್ನು ಮುಕ್ತಗೊಳಿಸಲು ಇಂತಹ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Advertisement

ತಾವು ಬಳಸಿ ಬೀಸಾಡುವ ಬದಲು 1 ಕೆ.ಜಿ. ಪ್ಲಾಸ್ಟಿಕ್‌ ನಿರುಪಯುಕ್ತ ಸಾಮಗ್ರಿಗಳನ್ನು ತಂದು ಕೊಟ್ಟರೆ ಅವರಿಗೆ ಒಂದೊತ್ತಿನ ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ ಅನ್ನಪೂರ್ಣೇಶ್ವರ ಫ್ಯಾಮಿಲಿ ರೆಸ್ಟೋರೆಂಟ್‌ ಮಾಲಿಕ ಬಸಲಿಂಗಯ್ಯ ಕಲ್ಯಾಣಿ. ಕಳೆದು 3 ದಿನಗಳ ಹಿಂದೆ ಆರಂಭಿಸಿದ ಹೊಸ ಪ್ರಯೋಗಕ್ಕೆ ಎಲ್ಲ ಕಡೆಯಿಂದಲೂ ಬೆಂಬಲ, ಪ್ರೋತ್ಸಾಹ ಬರುತ್ತಿದೆ.  ಜನರಲ್ಲಿ ಜಾಗೃತಿ, ಪ್ರಚಾರದ ಅವಶ್ಯಕತೆ ಇದೆ ಎನ್ನುತ್ತಾರೆ ಬಸಲಿಂಗಯ್ಯ.

ರಾಷ್ಟ್ರೀಯ ಹಬ್ಬ-ಸೈನಿಕರ ಕುಟುಂಬಕ್ಕೆ  ರಿಯಾಯಿತಿ: ಕಳೆದ 3 ವರ್ಷಗಳಿಂದ ಅನ್ನಪೂರ್ಣೇಶ್ವರಿ ರೆಸ್ಟೋರೆಂಟ್‌ ಸಾರ್ವಜನಿಕ, ಸಾಮಾಜಿಕ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ. ಆಗಸ್ಟ್‌ 15, ಜನವರಿ 26, ಗಾಂಧಿ  ಜಯಂತಿ, ಭಗತಸಿಂಗ್‌ ಜಯಂತಿ ಹೀಗೆ ಮಹಾನ್‌ ನಾಯಕರ ಜಯಂತಿ ದಿನದಂದು ಛದ್ಮವೇಷಧರಿಸಿದ ಮಕ್ಕಳಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು, ಮಾಜಿ ಸೈನಿಕರಿಗೆ ಹಾಗೂ ಯುದ್ಧದಲ್ಲಿ ಮೃತಗೊಂಡ ಸೈನಿಕರ ತಂದೆ-ತಾಯಿಗೆ ಹಾಗೂ ಕುಟುಂಬ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಊಟ-ಉಪಹಾರ ನೀಡಲಾಗುತ್ತಿದೆ. ಯುದ್ಧದಲ್ಲಿ ಮೃತಗೊಂಡ ಯೋಧನ ತಂದೆ-ತಾಯಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತದೆ.

ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಶೇ.25 ರಿಯಾಯತಿ, ನಿವೃತ್ತ ಯೋಧರಿಗೆ ಶೇ.5 ರಿಯಾಯತಿ ನೀಡುತ್ತಾರೆ. ಎಲ್ಲ ಯೋಧರು ಕಡ್ಡಾಯವಾಗಿ ಸೇನೆಯ ಗುರುತಿನ ಚೀಟಿ ಹೊಂದಿರಬೇಕು. ಪ್ಲಾಸ್ಟಿಕ್‌ ನಿಷೇಧ ವ್ಯವಸ್ಥೆಯಲ್ಲಿ ಸಂಪೂರ್ಣ ತೊಡಗಿಕೊಂಡಿರುವ ಅನ್ನಪೂರ್ಣೇಶ್ವರಿ ಹೋಟೆಲ್‌ ಮಾಲಿಕರು ಪ್ಲಾಸ್ಟಿಕ್‌ ಬಳಸದ ಮನೆಗಳ ಸ್ಪರ್ಧೆ ಕೂಡ ಏರ್ಪಡಿಸಿದ್ದರು. ಅದರಲ್ಲಿ ಪ್ರತಿನಿತ್ಯ ಪ್ಲಾಸ್ಟಿಕ್‌ ಬಳಸದ ನಗರದ 3 ಕುಟುಂಬದವರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಉಚಿತವಾಗಿ ಉಪಹಾರ ನೀಡಿ ಉಪಚರಿಸಿದ್ದಾರೆ.

 

Advertisement

-ಮಲ್ಲೇಶ ರಾ.ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next