Advertisement

ಏಕ ವ್ಯಕ್ತಿ ಶ್ರಮದಿಂದ ಕಟ್ಟ: ಊರಿಗೇ ನೀರಿನಾಸರೆ

08:43 PM Feb 09, 2018 | Karthik A |

ಪೆರಡಾಲ: ಏಕವ್ಯಕ್ತಿ ಕಟ್ಟದ ರೂವಾರಿ ಶಶಿಧರ್‌ ಕೂರ್ಲುಗಯ ಅನ್ನುತ್ತಾರೆ, ಕಳೆದ ವರ್ಷ ಬೇಸಗೆ ಕಾಲದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮಳೆಗಾಲದ ತನಕ ಕೊಳವೆ ಬಾವಿ ಕೊರೆಯುವುದು ನಿಷೇಧಿಸಲ್ಪಟ್ಟಿತ್ತು. ಈ ವರ್ಷ ನಮ್ಮೂರಿನಲ್ಲಿ ಕಳೆದೆರಡು ತಿಂಗಳಲ್ಲಿ 100 ಕ್ಕೂ ಹೆಚ್ಚು ಕೊಳವೆ ಬಾವಿಗಳು ಕೊರೆ‌ಯಲ್ಪಟ್ಟಿವೆ. ಕಾರಣ ಮುಂದೆ ಬೇಸಗೆಯಲ್ಲಿ ಬರಬಹುದಾದ ನೀರಿನ ಅಗತ್ಯ ಮತ್ತು ನಿಷೇಧದ ಭೀತಿ. ಕೊರೆದ ಕೊಳವೆ ಬಾವಿಗಳಲ್ಲಿ ಹೆಚ್ಚಿನವು ಬರಡು. ನೀರು ಸಿಕ್ಕಿದ ಕೆಲವು ಕಿರು ಬೆರಳು ಗಾತ್ರದ್ದು. ಮನೆ ಉಪಯೋಗಕ್ಕೆ ಸಾಕು. ಕೃಷಿಗೆ, ನಿರಂತ‌ರ ನೀರಿನ ಸೆಲೆಗೆ, ಊರಿನ ಹೊಳೆಗೆ ಕಟ್ಟ ಕಟ್ಟಿ ಜತೆಗೆ ಮಳೆಗಾಲದಲ್ಲಿ ಕೃತಕ‌ವಾಗಿ ಮಳೆ ನೀರಿಂಗಿಸಿ ಭೂಮಿಯ ಒಳಭಾಗದ ನೀರನ್ನು ಹರಿವನ್ನು  ಹೆಚ್ಚಿಸಬೇಕು.

Advertisement

ತಾನೂ ಹಲವು ಕೊಳವೆ ಬಾವಿಗಳನ್ನು ಕೊರೆಸಿದ್ದೇನೆ. ಕೃಷಿಗೆ ತಕ್ಕ ನೀರು ಸಿಗದೆ ಸೋತಿದ್ದೇನೆ. ತನ್ನ ಗೆಲುವು ಸೋಲಿನಿಂದ ಅನುಭವ‌ದ ಪಾಠ ಕಲಿತ ಕೂರ್ಲುಗಯ ಶಶಿಧರ ಭಟ್‌ ಊರವರು ಕಟ್ಟ ಕಟ್ಟಲು ಸಹಕರಿಸದಾಗ ತಾವೇ ಮುಂದೆ ನಿಂತು ಏಕಾಂಗಿಯಾಗಿ ಖರ್ಚು ವೆಚ್ಚಗಳನ್ನು ಭರಿಸಿ ಈ ವರ್ಷ ಹೊಸದಾಗಿ ಕಟ್ಟ ಕಟ್ಟಿಸಿದರು. ಊರಿಗೇ ನೀರಿನಾಸರೆ ನೀಡಿದರು.

ಕೇರಳದ ಕಾಸರಗೋಡು ಜಿಲ್ಲೆಯ ಅಡ್ಯನಡ್ಕ ಸನಿಹದ ಕೂರ್ಲುಗಯ ಅಡಿಕೆ, ತೆಂಗು ಇದೀಗ ರಬ್ಬರ್‌ ಕೃಷಿಗೆ ಹೆಸರುವಾಸಿಯಾದ ಸ್ಥಳ. ಸೀರೆ ಹೊಳೆ ಈ ಪ್ರದೇಶದಲ್ಲಿ ಹರಿಯುತ್ತದೆ. ಇಲ್ಲಿ 4 ದಶಕಗಳ ಹಿಂದೆ ಸಹಭಾಗಿತ್ವದ ಮೂಲಕ ಕೃಷಿಕರು ಹೊಳೆಗೆ ತಡೆಕಟ್ಟಗಳನ್ನು ಹಾಕಿ ಆ ಮೂಲಕವೇ ಭೂಮಿಯಲ್ಲಿ ನೀರಿನ ಸೆಲೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಅದರೆ ಕೊಳವೆ ಬಾವಿಯ ಪ್ರಭಾವ ಇಲ್ಲಿಯೂ ಕಟ್ಟಗಳನ್ನು ಇನ್ನಿಲ್ಲವಾಗಿಸಿತ್ತು. ಕಳೆದ ವರ್ಷ ಕೂರ್ಲುಗಯದ ಕೃಷಿಕರೊಬ್ಬರು ಭಗೀರಥ ಯತ್ನದಿಂದ ಊರವರನ್ನು ಒಗ್ಗೂಡಿಸಿ ಈಗ ಕಟ್ಟ ಕಟ್ಟಿದ ಭಾಗದಿಂದ ಸುಮಾರು 1 ಕಿ.ಮೀ. ಕೆಳಭಾಗದಲ್ಲಿ ಹಿಂದೆ ಹಾಕುತ್ತಿದ್ದ ಕಟ್ಟವನ್ನು ಮತ್ತೆ ಕಟ್ಟಿ ನೀರಿನ ಸೆಲೆಯ ಬೆಲೆಯನ್ನು ಊರವರಿಗೆ ತಿಳಿಯುವಂತೆ ಮಾಡಿದರು. ಆದರೆ ಈ ವರ್ಷ ಜನರನ್ನು ಒಗ್ಗೂಡಿಸುವಲ್ಲಿ ಸೋತು ಕಟ್ಟ ಕಟ್ಟುವ ವಿಚಾರ ಕೈಬಿಟ್ಟಿದ್ದರು. ಕಳೆದ ವರ್ಷ ಶಶಿಧರ್‌ ಈ ಕಟ್ಟಕ್ಕೂ ತನ್ನ ದೇಣಿಗೆಯನ್ನು ನೀಡಿದ್ದರು.

ಶಶಿಧ‌ರ್‌ ಅನ್ನುವಂತೆ ತಡೆ‌ಗಟ್ಟ ಕಟ್ಟುವ ತಳಪಾಯವನ್ನು ಗಟ್ಟಿ ಮಾಡುವುದು ಬಹಳ ನಾಜೂಕಿನ ಕೆಲಸ. ಇಲ್ಲವಾದರೆ ನೀರು ಸೋರಿಹೋಗುತ್ತದೆ. ಇದಕ್ಕೆ ಬೇಸಗೆ ಕಾಲದಲ್ಲಿ 8-10 ಅಡಿ ಅಗಲಕ್ಕೆ ಮರಳು ಮಣ್ಣು ತೆಗೆದು ಕಾಂಕ್ರೀಟ್‌ ಬೆಡ್‌ ಹಾಕಿದರೆ ಮುಂದಿನ ಋತುವಿನಲ್ಲಿ ಕಟ್ಟ ಕಟ್ಟುವುದು ಸುಲಭ. ಆದರೆ ದೊಡ್ಡ ಮೊತ್ತದ ಹಣ ಬೇಕು. ಇವರು ತಡೆಗಟ್ಟ ಹಾಕಿ ಸ್ಥಳದಲ್ಲಿ ಮುಕ್ಕಾಲು ಭಾಗ ಗಟ್ಟಿ ಅಡಿ ಭಾಗ ಕಲ್ಲಿದೆಯಂತೆ. ಕಾಲು ಭಾಗದಷ್ಟು ಮಾತ್ರ ಕಾಂಕ್ರೀಟ್‌ ಬೆಡ್‌ ಹಾಕಿದರೆ ಸಾಕು. ಇದಕ್ಕೆ ಸರಕಾರದಿಂದ ಸಹಾಯಧನ ದೊರಕಬಹುದೇ ಎಂಬ ನಿರೀಕ್ಷೆ ಮತ್ತು ಪ್ರಯತ್ನದಲ್ಲಿದ್ದಾರೆ ಇವರು.

ಈ ರೀತಿಯ ಹೊಳೆಗೆ ಹಾಕುವ ಕಟ್ಟದಿಂದ ಸುಮಾರು 3 ತಿಂಗಳ ನೀರಿನ ಹೆಚ್ಚಳ ಖಂಡಿತ ವಾಗಿಯೂ ಪರಿಸರದ ಕೃಷಿಕರಿಗೆ ಇದೆ.  ಕಟ್ಟ ಕಟ್ಟಿಸುವ ವ್ಯಕ್ತಿಗೆ ಹುಮ್ಮಸ್ಸು ಮೂಡಲು ಈ ನೀರು ಉಪಯೋಗದಿಂದ ತಮಗೆ ಸಿಗುವ ಹೆಚ್ಚಳದ ಉತ್ಪತ್ತಿಯ ಒಂದಂಶ ನೀಡಿದರೂ ಸಾಕು. ಕೃಷಿಕರ ಸಹಭಾಗಿತ್ವದಲ್ಲಿ ಇಂತಹ ಕಟ್ಟಗಳು ಅಲ್ಲಲ್ಲಿ ಕಟ್ಟಲ್ಪಟ್ಟರೆ ಖಂಡಿತ ಕೃಷಿಗೆ ಜಲಕ್ಷಾಮ ಖಂಡಿತ ಬಾರದು ಎನ್ನುತ್ತಾರೆ ಶಶಿಧರ್‌.

Advertisement

ಶಶಿಧರ್‌ ಉವಾಚ
ನಿರಂತ‌ರ ನೀರಿನ ಸೆಲೆಗೆ, ಊರಿನ ಹೊಳೆಗೆ ಕಟ್ಟ ಕಟ್ಟಿ ಜತೆಗೆ ಮಳೆಗಾಲದಲ್ಲಿ ಕೃತಕವಾಗಿ ಮಳೆ ನೀರಿಂಗಿಸಿ ಭೂಮಿಯ ಒಳಭಾಗದ ನೀರಿನ ಹರಿವನ್ನು  ಹೆಚ್ಚಿಸಬೇಕು. ಹೊಳೆಗೆ‌ ಕಟ್ಟುವ ಕಟ್ಟದಿಂದ ಸುಮಾರು 3 ತಿಂಗಳ ನೀರಿನ ಹೆಚ್ಚಳ ಖಂಡಿತವಾಗಿಯೂ ಪರಿಸರದ ಕೃಷಿಕರಿಗೆ ಇದೆ. ಕಟ್ಟ ಕಟ್ಟಿಸುವ ವ್ಯಕ್ತಿಗೆ ಹುಮ್ಮಸ್ಸು ಮೂಡಲು ಈ ನೀರು ಉಪಯೋಗದಿಂದ  ತಮಗೆ ಸಿಗುವ ಹೆಚ್ಚಳದ ಉತ್ಪತ್ತಿಯ ಒಂದಂಶ ನೀಡಿದರೂ ಸಾಕು. ಕೃಷಿಕರ ಸಹಭಾಗಿತ್ವದಲ್ಲಿ  ಇಂತಹ ಕಟ್ಟಗಳು ಅಲ್ಲಲ್ಲಿ  ಕಟ್ಟಲ್ಪಟ್ಟರೆ  ಕೃಷಿಗೆ  ಜಲಕ್ಷಾಮ ಖಂಡಿತ ಬಾರದು.

ಈ ವರ್ಷ ಕಟ್ಟ ಕಟ್ಟಲು ಯಾರೂ ಮನ ಮಾಡದಾಗ ಇವರು ತಾನೇ ತನ್ನ ಕೃಷಿ ಭೂಮಿಯ ಬದಿಯ ಸೀರೆ ಹೊಳೆಗೆ ಈ ತನಕ ಕಟ್ಟ ಕಟ್ಟಿದ ಚರಿತ್ರೆ ಇಲ್ಲದ ಹೊಸ ಸ್ಥಳದಲ್ಲಿ ಹೊಳೆಗೆ ತಡೆಗಟ್ಟ ಕಟ್ಟಲು ಮನ ಮಾಡಿದರು. ಕೊಡಂಗಾಯಿ ನಿವಾಸಿ ಕಟ್ಟದ ಅನುಭವಿ ಕೃಷಿಕ ಪಿದಮಲೆ ಗೋವಿಂದ ಭಟ್ಟರ ಸಲಹೆ ಪಡೆದರು. 2,500 ಪ್ಲಾಸ್ಟಿಕ್‌ ಗೋಣಿ ಚೀಲಗಳಲ್ಲಿ ಮರಳು ತುಂಬಿಸಿ ಅದನ್ನು ಸುಮಾರು 200 ಅಡಿ ಅಗಲದ ಹೊಳಗೆ ಅಡ್ಡಲಾಗಿ ಇರಿಸಿ ನಡುವೆ ಮಣ್ಣು ತುಂಬಿದರು. 5 ಅಡಿ ತನಕ ಕಟ್ಟದ ಎತ್ತರವನ್ನು ಏರಿಸಿದರು. ಡಿಸೆಂಬರ್‌ 22 ಕೆಲಸ ಆರಂಭಿಸಿ, ಡಿ. 30ರಂದು ಕೆಲಸ ಮುಕ್ತಾಯ ಗೊಂಡಿತು. ಕೂಲಿ ಕಾರ್ಮಿಕರ 75 ದಿನ ದ ಕೆಲಸ. ರೂ. 50 ಸಾವಿರ ವೆಚ್ಚವಾಯಿತು. ಸುಮಾರು ಅರ್ಧ ಕಿ.ಮೀ. ತನಕ ನೀರು ಹೊಳೆಯಲ್ಲಿ ಶೇಖರಣೆಗೊಂಡಿತು. ಇದೀಗ ಈ ತಡೆ ಕಟ್ಟದ ಸುಮಾರು 1-2  ಕಿ.ಮೀ. ಚದರ ವಿಸ್ತೀರ್ಣ ಪ್ರದೇಶದಲ್ಲಿ ಭೂಮಿಯಲ್ಲಿ ನೀರಿನ ಒರತೆ ಹೆಚ್ಚಾಗಿರುವುದನ್ನು ಎಲ್ಲ ಫಲಾನುಭವಿಗಳೂ ಒಪ್ಪುತ್ತಾರೆ. ಆದರೆ  ಇವರ ಖರ್ಚನ್ನು ಹಂಚಿಕೊಳ್ಳಲು ಯಾರೂ ಸಿದ್ಧರಿಲ್ಲ.

– ಶಂಕರ್‌ ಸಾರಡ್ಕ

Advertisement

Udayavani is now on Telegram. Click here to join our channel and stay updated with the latest news.

Next