Advertisement

ಮುದ್ದೇಬಿಹಾಳ: ಪಟ್ಟಣದ ಹಳೇ ಮುದ್ದೇಬಿಹಾಳ ಎಂದೇ ಕರೆಸಿಕೊಳ್ಳುವ ಕಿಲ್ಲಾಗಲ್ಲಿಯ ಹೆಸರನ್ನೇ ಪುರಸಭೆಯವರು ಮತದಾರರ ಪಟ್ಟಿಯಲ್ಲಿ ನಾಪತ್ತೆ ಮಾಡಿದ್ದಾರೆ. ವಾರ್ಡ್‌ ವಿಂಗಡಣೆಯೇ ಅವೈಜ್ಞಾನಿಕವಾಗಿದ್ದು ಮರುಪರಿಶೀಲನೆ ನಡೆಸಿ,
ಮೊದಲಿದ್ದ ಕಿಲ್ಲಾಗಲ್ಲಿ ಹೆಸರನ್ನೇ ಉಳಿಸಿಕೊಳ್ಳಬೇಕು, ಬಳಸಬೇಕು. ಸ್ಥಳಕ್ಕೆ ಜಿಲ್ಲಾ ಧಿಕಾರಿಯೇ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಧುರೀಣ ಉದಯಸಿಂಗ್‌ ರಾಯಚೂರು ಪುರಸಭೆ ಕಚೇರಿ ಎದುರು ಬುಧವಾರ ಏಕಾಂಗಿಯಾಗಿ ಧರಣಿ ನಡೆಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉದಯಸಿಂಗ್‌, ನಾನು ಕಿಲ್ಲಾ ಗಲ್ಲಿಯ ನಿವಾಸಿಯಾಗಿದ್ದೇನೆ. ನನ್ನಂತೆ ಬಹಳಷ್ಟು ಜನ ಅಲ್ಲಿ ವಾಸವಾಗಿದ್ದಾರೆ. ಮೊದಲು ಕಿಲ್ಲಾಗಲ್ಲಿಯನ್ನು 20ನೇ ವಾರ್ಡ್‌ಲ್ಲಿ ಸೇರ್ಪಡೆ ಮಾಡಿದ್ದರು. 2 ವರ್ಷದ ಹಿಂದೆ ನಡೆದ ಪುರಸಭೆ ಚುನಾವಣೆ ಸಂದರ್ಭ ವಾರ್ಡ್‌ ವಿಭಜಿಸಿ ಇದಕ್ಕೆ 19ನೇ ವಾರ್ಡ್‌ ಎಂದು ದಾಖಲಿಸಿದರು. ಈ ವಾರ್ಡ್‌ ವಿಂಗಡಣೆಯೇ
ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಕಿಲ್ಲಾದ ಸುತ್ತಲೂ ಇರುವ ಕೋಟೆ ಗೋಡೆಯನ್ನು ಆಧಾರವಾಗಿಟ್ಟುಕೊಂಡು ಕೋಟೆಯ ಒಳಗೆ 4 ಭಾಗಗಳಾಗಿ ವಿಂಗಡಿಸಿ ಕಿಲ್ಲಾದ ನಿವಾಸಿಗಳನ್ನು ಕಿಲ್ಲಾ ಹೊರಗಿನ ವಾರ್ಡ್‌ಗಳಿಗೆ ಹಂಚಿಕೆ ಮಾಡಿದ್ದಾರೆ.

ಇದೊಂದು ರೀತಿ ಹಳೇಯ ಮುದ್ದೇಬಿಹಾಳದ ಕಿಲ್ಲಾವನ್ನೇ ಛಿದ್ರ ಮಾಡಿದಂತಾಗಿದೆ. ಇದರಿಂದಾಗಿ ಹಳೇ ಕಿಲ್ಲಾದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಕಷ್ಟು ಅನಾನುಕೂಲತೆ ತಲೆದೋರಲಿದೆ ಎಂದರು.

ಕೋಟೆ ಒಳ ಭಾಗದಲ್ಲಿ ಮೊದಲಿನಿಂದಲೂ 2 ವಾರ್ಡ್‌ಗಳು ಇದ್ದವು. ಜನಸಂಖ್ಯೆಯೂ ಸಾಕಷ್ಟಿತ್ತು. ಕಿಲ್ಲಾ ಒಡೆದು ಬೇರೆ ವಾರ್ಡ್‌ಗಳಲ್ಲಿ ಸೇರಿಸೋ ಅಗತ್ಯ ಇರಲಿಲ್ಲ. ದೊಡ್ಡ ವಾರ್ಡ್‌ ಮಾಡಬೇಕಿದ್ದರೆ ಕಿಲ್ಲಾ ಪ್ರದೇಶವನ್ನೇ ಒಂದು ವಾರ್ಡ್‌ ಮಾಡಿದ್ದರೆ ಇಲ್ಲಿನ ಜನರಿಗೆ ಅನುಕೂಲ ಆಗುತ್ತಿತ್ತು. ಈ ಬಗ್ಗೆ ಮನವಿ ಸಲ್ಲಿಸಿದರೂ ಪುರಸಭೆಯವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಪಾದಿಸಿದರು.

Advertisement

ಕಿಲ್ಲಾ ಹೆಸರೇ ನಾಪತ್ತೆ: ವಾರ್ಡ್‌ ವಿಂಗಡಣೆಯ ನಂತರ ಮೊದಲಿನ ದಾಖಲೆಗಳಲ್ಲಿದ್ದ ಕಿಲ್ಲಾಗಲ್ಲಿ ಹೆಸರಿನ ಪ್ರಸ್ತಾಪವನ್ನೇ ನಾಪತ್ತೆ ಮಾಡಲಾಗಿದೆ. ವಾರ್ಡ್‌ ವಿಂಗಡಣಾ ಪಟ್ಟಿಯಲ್ಲಾಗಲಿ, ಮತದಾರರ ಪಟ್ಟಿಯಲ್ಲಾಗಲಿ ಕಿಲ್ಲಾಗಲ್ಲಿ ಎನ್ನುವುದನ್ನು ಬಳಕೆ ಮಾಡುತ್ತಿಲ್ಲ. ಇದರ ಬದಲು ಸೋಠೆ ಗಲ್ಲಿ, ಅವಟಿ ಗಲ್ಲಿ, ನಾಯ್ಕೋಡಿ ಗಲ್ಲಿ ಎಂದೆಲ್ಲ ಬಳಸಲಾಗುತ್ತಿದೆ.
ಕೂಡಲೇ ಪುರಸಭೆ ಆಡಳಿತ ಎಚ್ಚೆತ್ತುಕೊಂಡು ಮೊದಲಿದ್ದ ಕಿಲ್ಲಾಗಲ್ಲಿ ಹೆಸರನ್ನೇ ಬಳಕೆ ಮಾಡಬೇಕು. ಇಡೀ ಕಿಲ್ಲಾ ಸೇರಿಸಿ ಮೊದಲಿದ್ದಂತೆ ಎರಡೇ ವಾರ್ಡ್‌ ಮಾಡಿ ಅನುಕೂಲ ಮಾಡಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಏಕಾಂಗಿ ಧರಣಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು, ವಿಷಯ ಹಾಗೂ ಬೇಡಿಕೆಯನ್ನು ಪುರಸಭೆ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯೆ ಗಮನಕ್ಕೆ ತಂದು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ.
ಸದ್ಯ ಧರಣಿ ಕೈಬಿಡಬೇಕು ಎಂದು ಕೋರಿದರು. ಆದರೆ ಇದನ್ನು ಒಪ್ಪದ ಉದಯಸಿಂಗ್‌ ಅವರು ಸಮಸ್ಯೆ ಬಗೆಹರಿಸುವತನಕ, ಇಲ್ಲವೇ ಜಿಲ್ಲಾಧಿಕಾರಿ ಇಲ್ಲಿಗೇ ಬಂದು ಭರವಸೆ ಕೊಡುವ ತನಕ ಧರಣಿ ಕೈ ಬಿಡುವುದಿಲ್ಲ. ನಿತ್ಯವೂ ಬೆಳಗ್ಗೆ 10:30ರಿಂದ
ಸಂಜೆ 5ರವರೆಗೂ ಕಚೇರಿ ಅವಧಿಯಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next