ನೋಯ್ಡಾ, ಉತ್ತರ ಪ್ರದೇಶ : ಸಣ್ಣ ಮಕ್ಕಳ ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳದಲ್ಲಿ ದೊಡ್ಡವರು ಭಾಗಿಯಾಗಿ ಭೀಕರ ಕಾದಾಟಕ್ಕೆ ಕಾರಣವಾಗಿ ಕಲ್ಲೆಸೆತ, ಗುಂಡು ಹಾರಾಟಕ್ಕೆ ಸಾಕ್ಷಿಯಾಯಿತಲ್ಲದೆ, ಗಂಭೀರವಾಗಿ ಗಾಯಗೊಂಡ ಐವರು ತರುಣರ ಪೈಕಿ 22 ವರ್ಷ ವಯಸ್ಸಿನ ಮೊಹಮ್ಮದ್ ರಿಜ್ವಾನ್ ಎಂಬಾತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಗ್ರೇಟರ್ ನೋಯ್ಡಾದ ಗ್ರಾಮವೊಂದರಿಂದ ವರದಿಯಾಗಿದೆ.
ತಲೆಗೆ ಗುಂಡೇಟು ಪಡೆದು ಗಂಭೀರ ಸ್ಥಿತಿಯಲ್ಲಿ ದಾದ್ರಿಯ ಆಸ್ಪತ್ರೆಗೆ ದಾಖಲಾಗಿದ್ದ ರಿಜ್ವಾನ್ ನನ್ನು ಬಳಿಕ ಗಾಜಿಯಾಬಾದ್ ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆತ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಎಂದು ಜಾರ್ಚಾ ಪೊಲೀಸ್ ಠಾಣೆಯ ಎಸ್‌ಎಚ್‌ಓ ಕೃಷನ್ ಕುಮಾರ್ ರಾಣಾ ತಿಳಿಸಿದ್ದಾರೆ.
ರಿಜ್ವಾನ್ ಹಾಗೆ ಗಂಭೀರವಾಗಿ ಗಾಯಗೊಂಡಿರುವ ನಸೀಮ್, ಮೊಹಮ್ಮದ್ ಆರಿಫ್, ವಾಕಿಲ್ ಖಾನ್ ಮತ್ತು ಉಮರ್ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಜ್ವಾನ್ ಚಿಕ್ಕಪ್ಪ ನೀಡಿರುವ ದೂರಿನ ಪ್ರಕಾರ್ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಆರು ಮಂದಿಯ ವಿರುದ್ದ ಕೊಲೆ ಯತ್ನ ಮತ್ತು ದೊಂಬಿಯ ಆರೋಪ ಹೊರಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಕೆಲವು ಆರೋಪಿಗಳನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ; ಆದರೆ ಯಾರನ್ನೂ ಈ ತನಕ ಬಂಧಿಸಿಲ್ಲ ಎಂದು ಎಸ್‌ಎಚ್‌ಓ ರಾಣಾ ಹೇಳಿದ್ದಾರೆ.
ಮಕ್ಕಳ ಜಗಳ ದೊಡ್ಡವರ ಕಾದಾಟಕ್ಕೆ ಕಾರಣವಾದ ಈ ಪ್ರಕರಣದಿಂದಾಗಿ ಕಲೋಂದಾ ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ತಲೆದೋರಿದೆ; ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.