ಇಸ್ತಾಂಬುಲ್/ಹೊಸದಿಲ್ಲಿ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 12,000 ದಾಟಿದ್ದು, ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರ ಮಧ್ಯೆಯೇ, ಬೆಂಗಳೂರಿನಿಂದ ಟರ್ಕಿಗೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ವಿದೇಶಾಂಗ ಇಲಾಖೆಯ ಅಧಿಕಾರಿ ಸಂಜಯ್ ವರ್ಮಾ ಅವರ ಪ್ರಕಾರ, ಬೆಂಗಳೂರಿನ ಉದ್ಯಮಿಯೊಬ್ಬರು ಟರ್ಕಿಯಲ್ಲಿ ನಾಪತ್ತೆಯಾಗಿದ್ದಾರೆ.
ಸದ್ಯ ಇವರ ಕಂಪೆನಿ ಮತ್ತು ಕುಟುಂಬಸ್ಥರ ಜತೆ ಸಂಪರ್ಕ ಸಾಧಿಸಿದ್ದೇವೆ. ಇವರು ವ್ಯವಹಾರ ನಿಮಿತ್ತ ಟರ್ಕಿಗೆ ತೆರಳಿದ್ದರು ಎಂದು ಹೇಳಿದ್ದಾರೆ.
ಉಳಿದಂತೆ ಇನ್ನೂ 10 ಮಂದಿ ಭಾರತೀಯರು ಟರ್ಕಿಯ ವಿವಿಧ ಭಾಗಗಳಲ್ಲಿ ಸಿಲುಕಿರುವ ಮಾಹಿತಿ ತಿಳಿದು ಬಂದಿದೆ. ಇವರೆಲ್ಲರೂ ಸುರಕ್ಷಿತವಾಗಿದ್ದಾರೆ. ಇದಲ್ಲದೇ ಭಾರತೀಯರ ನೆರವಿಗಾಗಿ ಟರ್ಕಿಯ ಅಡಾನಾದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆೆ ಎಂದು ಇಲಾಖೆ ಹೇಳಿದೆ.
ಸಾವಿನ ಸಂಖ್ಯೆ ಹೆಚ್ಚಳ
ಭೂಕಂಪನದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 12,000 ದಾಟಿದೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಹುಡುಕಾಟ ನಡೆಯುತ್ತಿದೆ. ಭಾರತದಿಂದ 4 ವಿಮಾನಗಳಲ್ಲಿ ರಕ್ಷಣ ತಂಡ ತೆರಳಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದೆ. ಈ ಮಧ್ಯೆ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡಿರುವವರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೆ, ಬಹಳಷ್ಟು ಮಂದಿ ತೀವ್ರ ಚಳಿಯಿಂದಾಗಿಯೇ ಸಾವನ್ನಪ್ಪುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.