Advertisement
ಹೆಂಡತಿ: ಹಗಲು ರಾತ್ರಿ ಅಂತ ಮಳೆ ಸುರಿಯುತ್ತಲೇ ಇದೆ, ಅದ್ರಿಂದ ಏನಾದರೊಂದು ಒಳ್ಳೆಯ ಕಥೆ ಹೇಳಿ.ಗಂಡ: ಯಾವ ಕಥೆ ಹೇಳಲಿ? ಭೋಜ ಪ್ರಬಂಧ? ವಿಕ್ರಮ ವಿಜಯ? ಮಹಾವೀರ ಚರಿತ?
ಹೆಂಡತಿ: ಇಸ್ಸಿ ! ಇವೆಲ್ಲ ನನಗೆ ಇಷ್ಟ ಇಲ್ಲ.
ಗಂಡ: ನಿನಗೆ ಯಾವ ರಸ ಇಷ್ಟ?
ಹೆಂಡತಿ: ಯಾವ ರಸ ಆದರೇನು? ನವರಸದಲ್ಲಿ.
ಗಂಡ: ಹಾಗಾದರೆ ಆ ಕಥೆ ಯಾವುದು?
ಹೆಂಡತಿ: ರಾಮಾಯಣದಲ್ಲಿ ಯಾವುದಾದರೊಂದು.
ಗಂಡ: ಹಾಗೆಯೇ ಆಗಲಿ, ಸೀತಾಸ್ವಯಂವರವನ್ನು ಹೇಳುತ್ತೇನೆ.
ಹೆಂಡತಿ: ನಾನು ಮೊದಲೇ ಕೇಳಿರುವೆನಲ್ಲ?
ಗಂಡ: ಏನು ಸೀತಾಪಹರಣದ ಬಯಕೆಯೆ?
ಹೆಂಡತಿ: ನನಗೆ ಬೇಡ !
ಗಂಡ: ಮತ್ತೆ ಯಾವ ಕಥೆಯನ್ನು ಹೇಳುವೆನೊ?
ಹೆಂಡತಿ: ಯಾಕೆ ಹೀಗೆ ಹೇಳ್ತೀಯಾ? ನಾಡಲ್ಲಿ ಎಷ್ಟೋ ರಾಮಾಯಣಗಳಿರುವವು. ನೀನು ಕೇಳಿರುವುದರಲ್ಲಿ ಒಂದನ್ನು ಪ್ರೀತಿಯಿಂದ ಹೇಳು.
ಗಂಡ: ನೀನೇ ಆರಿಸಿಕೋ !
ಹೆಂಡತಿ: ಶ್ರೀರಾಮ ಅಶ್ವಮೇಧವನ್ನು ಕೈಗೊಂಡ ಅಂತಾರಲ್ಲ- ಆ ಕಥೆಯೇ ಆಗಬಹುದು.
ಹೆಂಡತಿ: ಹೌದು ಹೌದು. ಆದರೆ, ಮೊದಲು ಮೊದಲು ಯಾರಿಗೆ ಇದನ್ನು ಹೇಳಿದರು?
ಗಂಡ: ಮೊದಲು ಶೇಷನು, ವಾತ್ಸಾಯನನಿಗೆ ಇದನ್ನು ಹೇಳಿದ, ಅದನ್ನೇ ನಿನಗೂ ಹೇಳುತ್ತೇನೆ. ಆದರೆ, ದೊಡ್ಡ ಕಥೆ.
ಹೆಂಡತಿ: ಇರಲಿ ಒಂದೊಂದು ದಿವಸ ಇಷ್ಟಿಷ್ಟು ಹೇಳಿದರಾಯಿತು.
ಗಂಡ: ಆಗಲಿ, ಗದ್ಯದಲ್ಲಿ ಹೇಳಲೇ, ಪದ್ಯದಲ್ಲಿ ಹೇಳಲೇ?
ಹೆಂಡತಿ: ಪದ್ಯ ವದ್ಯ, ಗದ್ಯ ಹೃದ್ಯ: ಹೃದ್ಯವಾದ ಗದ್ಯದಲ್ಲಿಯೇ ಹೇಳು.
ಗಂಡ: ಅದಿರಲಿ, ಇಂತಹ ಒಳ್ಳೆಯ ಕಥೆಯನ್ನು ಅರಮನೆಯಲ್ಲಿ ನಾನು ಹೇಳಿದರೆ ನನಗೆ ರತ್ನದ ಕಡಗವನ್ನೋ, ಚಿನ್ನದ ಕಂಠ ಸರವನ್ನೋ ಕೊಡುವರು. ನೀನೇನು ಕೊಡುವೆ?
ಹೆಂಡತಿ: ಬೇರೇನು, ನನ್ನನ್ನೇ ನಾನು ಕೊಡುತ್ತೇನೆ.
ಗಂಡ: ಬಹಳ ಜೋರಿನವಳು, ಗೊತ್ತಿಲ್ಲವೇ, ಮೊದಲೇ ನಿನ್ನ ತಾಯ್‌ತಂದೆಯರು ನನಗೆ ಕೊಟ್ಟರೆಂದು?
ಹೆಂಡತಿ: ಹೋಗ! ನಾನು ಪರಾಧೀನೆಯಂತೆ, ಪುರಾಣವನ್ನು ಓದಿದ ಮೇಲೆ ತಾನೇ ದಕ್ಷಿಣೆಯನ್ನು ಕೊಡುವುದು. ಅರಮನೆಯವರೂ ಕಾವ್ಯವನ್ನು ಕಂಡ ಮೇಲೆ ಅಲ್ಲವೇ ಬಹುಮಾನವನ್ನು ಕೊಡುವುದು, ನಾನೂ ಕಥೆ ಕೇಳಿದ ಮೇಲೆ ಸೊಗಸಾಗಿದ್ದರೆ ತಿಳಿದಂತೆ ಸನ್ಮಾನಿಸುತ್ತೇನೆ.
.
-ಹೀಗೆ ಈ ಸರಸ ಸಲ್ಲಾಪ ಸಾಗುತ್ತದೆ. ಇಲ್ಲಿಯ ಗಂಡ ಮುದ್ದಣ- ಹೆಂಡತಿ ಮನೋರಮೆ ಅಂತ ಸಾಹಿತ್ಯಪ್ರಿಯರು ಬಲ್ಲರು. ಹೀಗೆ, ಈ ಕಥೆ ಮುಂದುವರೆಯುತ್ತದೆ. ಮುದ್ದಣ ಕವಿಯ ಕಥಾ ಹೂರಣವೇ ಹೀಗಿದೆ. ಅದು ಗಂಡಹೆಂಡಿರ ಸರಸ-ಸಲ್ಲಾಪದೊಂದಿಗೆ ಸಾಗುವ ಸರಸ ಕಾವ್ಯ. ಒಂದರ್ಥದಲ್ಲಿ ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕವನಗಳಲ್ಲಿ ಹೆಂಡತಿಯೇ ಪ್ರಧಾನವಾಗಿರುವಂತೆ ಇಲ್ಲಿಯೂ ಹೆಂಡತಿಯೇ ಮುಖ್ಯ ಪಾತ್ರ. ದಕ್ಷಿಣ ಕನ್ನಡದ ಕಡೆ ಮನೆಗೆ ಬಂದವರನ್ನು ಮೊದಲು ಮಾತಾಡಿಸುವುದು ಮಹಿಳೆಯರೇ. ಹಾಗೆಯೇ ಇಲ್ಲಿಯೂ ತುಳುನಾಡಿನ ಪರಂಪರೆಯಂತೆ ಸಹೃದಯರನ್ನು ಮೊದಲು ಮಾತಾಡಿಸುವುದು ಮನೋರಮೆಯೇ. ಮನೆಯಲ್ಲಿ ಗಂಡ ಹೆಚ್ಚು-ಕಡಿಮೆ ಹೆಂಡತಿಯ ಮುಖವಾಣಿಯಷ್ಟೇ. ಇಲ್ಲಿಯೂ ಅಷ್ಟೇ. ಮುದ್ದಣನ ಪಾತ್ರ ಏನಿದ್ದರೂ ಹೆಂಡತಿಗೆ ಬೇಕಾದ ಹಾಗೆ ಕಥೆ ಹೇಳುವ ಕೆಲಸ ಮಾಡುವುದಷ್ಟೇ ಆಗಿದೆ.
Related Articles
Advertisement
ಈ ಕಥೆ ಮುಗಿಯುವಾಗ ಕಥೆಯ ಮಧ್ಯೆ ಮೂಗು ತೂರಿಸುತ್ತಿದ್ದ ಹೆಂಡತಿ ಸೀದಾ ಎದ್ದು ಹೋಗುತ್ತಾಳೆ. ಆಗ ಗಂಡ, “ಬಹುಮಾನ ಕೊಡದೆ ಹೋಗಲು ಬಿಡುವುದಿಲ್ಲ’ ಎನ್ನುತ್ತಾನೆ. ಅದಕ್ಕೆ ಆಕೆ, “ಕಥೆಗೆ ಮಂಗಳ ಮಾಡದೆ ಉಡುಗೊರೆ ಕೇಳುವುದೇ?’ ಎನ್ನುತ್ತಾಳೆ. ಆಗ ಹೆಂಡತಿ, “ಈ ಕಾಟಕ್ಕೆ ಇನ್ನೆಲ್ಲಿ ಹೋಗಲಿ ನೀನೇನು ಬೇಡುವುದು’ ಎಂದು ಮಾರುತ್ತರ ಕೊಡುತ್ತಾಳೆ.
ಆಗ ಗಂಡ, “ನಾನೇನು ತಿರುಕನೇ, ಮನೆಗೆ ಬಂದವನೇ? ಬಹುಮಾನ ಕೊಟ್ಟರೆ ತೆಗೆದುಕೊಳ್ಳುವೆ’ ಎನ್ನುತ್ತಾನೆ. ಆಗ ಹೆಂಡತಿ, “ನಾನಂತು ಪರಾಧೀನೆ ನನಗೇನು ಒಡವೆ? ಏನನ್ನು ಕೊಡಲಿ’ ಎನ್ನುತ್ತಾಳೆ. ಆಗ ಗಂಡ, “ನಾನು ಮೆಚ್ಚುವ ಹಾಗೆ ಏನೋ ಎಂತೋ ಒಂದನ್ನು ಕೊಡು, ಕಥೆಯ ತಿರುಳಿಗೆ ಮೆಚ್ಚುವಂತೆ ನಾಲ್ವರು ತಲೆದೂಗುವಂತೆ ಉಡುಗೊರೆ ಕೊಟ್ಟರೆ ಆಯಿತು’ ಎನ್ನುತ್ತಾನೆ.
ಆಗ ಹೆಂಡತಿ, “ಹಾಗಾದರೆ, ನಿನ್ನ ಈ ಕಾವ್ಯವನ್ನು ಓದುವ ಜಾಣರು ಯಾವ ರೀತಿಯ ಉಡುಗೊರೆಯನ್ನು ಕೊಡಬೇಕೆಂದು ಹೇಳುವರೋ ಆವಾಗ ಬಹುಮಾನವನ್ನು ಕೊಡುತ್ತೇನೆ’ ಎನ್ನುತ್ತಾಳೆ. ಅದಕ್ಕೆ ಗಂಡ, “ಹಾಗೆಯೇ ಆಗಲಿ’ ಎನ್ನುತ್ತಾನೆ. ಹೀಗೆ ಬಹುಮಾನ ಕೊಡುವುದು ಇನ್ನೂ ಹಾಗೆಯೇ ಉಳಿದಿದೆ. ಸಹೃದಯರು ಅದನ್ನು ಮುಂದಕ್ಕೆ ದೂಡುತ್ತಲೇ ಇದ್ದಾರೆ, ಅದು ಹಾಗೆಯೇ ಸಾಗುತ್ತಿರಲಿ!
ಮಾಧವ ಪೆರಾಜೆ