ಹನೂರು: ಮಲೆ ಮಹಾದೇಶ್ವರ ಬೆಟ್ಟದ ವನ್ಯಧಾಮ ವ್ಯಾಪ್ತಿಯ ಪೊನ್ನಾಚಿ, ರಾಮೇಗೌಡನಹಳ್ಳಿ, ಮರೂರು ವಲಯ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದು ನೂರು ಎಕರೆ ಬೆಂಕಿ ಅಹುತಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಕಾಡ್ಗಿಚ್ಚು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಗೆ ಅಹುತಿಯಾದ ಗುಡ್ಡಗಳು: ಮಲೆ ಮಹಾದೇಶ್ವರ ವನ್ಯಜೀವಿವಲಯ ಹಾಗೂ ಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಯ ಮರೂರು, ರಾಮೇಗೌಡನಹಳ್ಳಿ, ದೊಡ್ಡ ಹಳ್ಳ, ದೇವರ ಬೆಟ್ಟ, ಜೇನುಗುಡ್ಡ, ಸೇರಿದಂತೆ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿದ್ದ ಬೆಲೆ ಬಾಳುವ ಮರಗಳು ಸೇರಿದಂತೆ ಬಿದಿರುಗಳು ಬೆಂಕಿಗೆ ಆಹುತಿಯಾಗಿವೆ.
ಗ್ರಾಮಸ್ಥರ ಸಹಕಾರದಿಂದ ಬೆಂಕಿ ಹತೋಟಿಗೆ: ಮರೂರು ಗ್ರಾಮದ ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಹನೂರು ಅಗ್ನಿ ಶಾಮಕ ದಳ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಜನರು ಬೆಂಕಿ ನಂದಿಸಲು ಗುರುವಾರ ಶ್ರಮಿಸಿದ ಕಾರಣ ಹೆಚ್ಚಿನ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗದಂತೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲೆ ಮಹಾದೇಶ್ವರ ವನ್ಯಧಾಮ ಡಿಎಫ್ಒ ಏಡುಕುಂಡಲು ಕಾವೇರಿ ವನ್ಯಧಾಮ ಅರಣ್ಯ ಸಂರಕ್ಷಣಾಧಿಕಾರಿ ರಮೇಶ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದು ಸಿಬ್ಬಂದಿಗೆ ಸೂಚನೆ ನೀಡಿ ಗುರುವಾರ ರಾತ್ರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲೆ ಮಹಾದೇಶ್ವರ ವನ್ಯಧಾಮದ ಅರಣ್ಯ ಪ್ರದೇಶದಲ್ಲಿನ ಅರಣ್ಯ ಸಂಪತ್ತು ನಾಶವಾಗಿದೆ. ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ್ದ ಬಿದಿರಿನ ಬೆಟ್ಟ ಸೇರಿದಂತೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ನಾಶಗೊಂಡಿರುವುದು ಪರಿಸರ ಪ್ರೇಮಿಗಳಿಗೆ ನೋವನ್ನುಂಟುಮಾಡಿದೆ.