Advertisement
1933 ನವೆಂಬರ್ 3ರಂದು ಮದರಾಸಿನಲ್ಲಿ ಪದ್ಮಾರವರ ಜನನ. ಇವರ ತಂದೆ ರಾಮ ಬಾಳಿಗ. ತಾಯಿ ಲಕ್ಷ್ಮೀದೇವಿ. ತಮ್ಮ ಬಾಲ್ಯದ ದಿನಗಳನ್ನು ಬೇರೆ ಬೇರೆ ಊರುಗಳಲ್ಲಿ ಕಳೆದ ಪದ್ಮಾರವರು ಮೆಟ್ರಿಕ್ ಮುಗಿಸಿ ನೆಲೆನಿಂತದ್ದು ಉಡುಪಿಯಲ್ಲಿ. ಕಾಲೇಜು ಪ್ರಾಧ್ಯಾಪಕರಾಗಿದ್ದ ತಂದೆಯವರ ಪ್ರಭಾವವು ಎಳೆಯ ವಯಸ್ಸಿನಲ್ಲಿಯೇ ಇವರ ಮೇಲೆ ಪರಿಣಾಮ ಬೀರುತ್ತದೆ. ಉಡುಪಿಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿಯೂ ಸುಮಾರು ನಾಲ್ಕು ವರ್ಷಗಳ ಕಾಲ ವೃತ್ತಿನಿರತರಾಗಿದ್ದರು. ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯನಿರ್ವಾಹಕರಾಗಿದ್ದ ಉದ್ಯಮಿ ಮೋಹನ ಶೆಣೈಯವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ಪದ್ಮಾ ಉದ್ಯೋಗಸ್ಥೆ, ಗೃಹಿಣಿಯಾಗಿ ತಮ್ಮ ಭವಿಷ್ಯದ ಬದುಕಿನ ರೂಪಣೆಯಲ್ಲಿ ಸಂಪೂರ್ಣವಾಗಿ ಮಗ್ನರಾದರು.
Related Articles
Advertisement
ಇವರ ಕೆಲವು ಪ್ರಸಿದ್ಧ ಕಥಾಸಂಕಲನಗಳಲ್ಲಿ ಹರಿದ ಗಾಳಿಪಟ, ಅನುತಾಪ, ಯಾರಿಗೆ ಯಾರು, ವರಾನ್ವೇಷಣೆ, ಯಾರು ಹಿತವರು ಎನಗೆ ಇತ್ಯಾದಿಗಳು ಪ್ರಸಿದ್ಧವಾಗಿವೆ. ಹೆಚ್ಚಿನ ಕಥೆಗಳು ಸ್ತ್ರೀಯರ ಸಮಸ್ಯೆಗಳನ್ನೇ ಮೂಲವಾಗಿಟ್ಟು ಬರೆದವುಗಳು. ನೂಲಿನಂತೆ ಸೀರೆ- ಕಥೆ ತರಂಗ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಬಹಳ ಮೆಚ್ಚುಗೆ ಗಳಿಸಿತ್ತು. ಇದೇ ಕಥೆಯನ್ನು ತೆಲುಗಿಗೂ ಭಾಷಾಂತರಿಸಲಾಗಿದೆ.
ಆದಿಶಂಕರರ ಜೀವನ ಚರಿತ್ರೆ ಮಹಾಸನ್ಯಾಸಿ, ಅಮೆರಿಕದಲ್ಲಿರುವ ಮಗನ ಮನೆಯಲ್ಲಿದ್ದು, ಅಮೆರಿಕ ಸುತ್ತಿ ಬರೆದ ಪ್ರವಾಸ ಕಥನ ಅಮೆರಿಕ-ವಾಸ-ಪ್ರವಾಸ ಅತ್ಯುತ್ತಮ ಮಾಹಿತಿಯ ಆಗರ.
ಪದ್ಮಾ ಶೆಣೈಯವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಮ್ಮಾಯಿಯ ಆನಂದ ಕುಟೀರದಲ್ಲಿ ವಾಸವಾಗಿದ್ದ ಮಹಾನ್‌ಚೇತನ ಎಲ್ಲರಿಂದಲೂ “ಅಜ್ಜ’ ಎಂದೇ ಕರೆಯಲ್ಪಡುತ್ತಿದ್ದ ಮಹಾತ್ಮನ ಸಹಯೋಗದಲ್ಲಿ ಆಧ್ಯಾತ್ಮದ ದಾರಿಯಲ್ಲಿ ಹೆಜ್ಜೆಯೂರಿದ್ದಾರೆ. ಉಪನಿಷತ್ತುಗಳ ಸಾರವೋ ಎಂಬಂತೆ ರಚಿಸಲ್ಪಟ್ಟ ಆನಂದೋಪನಿಷತ್ತು, ತಾತ್ವಿಕ ಕಥೆಗಳು, ತಾತ್ವಿಕ ಹಾಡುಗಳು ಓದುಗರ ಮನತಟ್ಟುತ್ತವೆ.
ಇವರ ಹಾಗೆ ಇವರ ಇಬ್ಬರು ಮಕ್ಕಳೂ ಕೂಡ ಸಾಹಿತ್ಯಾಸಕ್ತರೇ. ಇಬ್ಬರೂ ಹೆಸರಾಂತ ವೈದ್ಯರು. ಹಿರಿಯ ಮಗ ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಪಟ್ಟ ಪಠ್ಯಪುಸ್ತಕ ಗಳನ್ನು ಕೂಡ ರಚಿಸಿದ್ದಾರೆ. ಕಿರಿಯ ಮಗ ಅಮೆರಿಕದಲ್ಲಿ ಹೆಸರಾಂತ ವೈದ್ಯರು.
ಪದ್ಮಾ ಶೆಣೈ ಕರಾವಳಿ ಲೇಖಕಿ-ವಾಚಕಿಯರ ಸಂಘದ ಸ್ಥಾಪಕ ಅಧ್ಯಕ್ಷೆ ಆಗಿ ಸಂಘಟನೆಯನ್ನು ಮುನ್ನಡೆಸಿದವರು. ಕರ್ನಾಟಕ ಲೇಖಕಿಯರ ಸಂಘದ ರಾಜ್ಯಮಟ್ಟದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡ ಇವರಿಗೆ ಸಂದಿದೆ. ಕಿನ್ನಿಗೋಳಿಯಲ್ಲಿ ಜರಗಿದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದರು. ಪದ್ಮಾ ಶೆಣೈ ಅವರ ಸಾಹಿತ್ಯ ಪ್ರತಿಭೆಗೆ ಅನೇಕ ಗೌರವ, ಪ್ರಶಸ್ತಿ, ಸನ್ಮಾನಗಳು ಸಂದಿವೆ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ.
ಪದ್ಮಾ ಶೆಣೈಯವರ ಬದುಕು-ಬರಹದ ಸಾಧನೆ ಯುವ ಬರಹಗಾರರಿಗೆ ಒಂದು ಪ್ರೇರಣೆಯಾಗಿದೆ. ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಅವರದು ವಿನಯವಂತಿಕೆಯ ವ್ಯಕ್ತಿತ್ವ. ಅವರ ಸಮಗ್ರ ಸಾಹಿತ್ಯವು ಸಾಹಿತ್ಯಾಸಕ್ತರಿಗೆ ಲಭ್ಯವಾಗಬೇಕಾಗಿದೆ. ಇಂದಿಗೂ ಕ್ರಿಯಾಶೀಲರಾಗಿರುವ ಪದ್ಮಾ ಶೆಣೈ ಮಂಗಳೂರು ತಾಲೂಕಿನ ಗುರುಪುರದ ಸಮೀಪದ ಪೆರಾರಿಯ “ಅವತಾರ್’ ಹಿರಿಯ ನಾಗರಿಕರ ನಿವಾಸದಲ್ಲಿ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ.
ತಾವು ಕೇಳಿದ, ಕಂಡ ಅನುಭವಗಳನ್ನು ಸೇರಿಸಿದರೆ ಪದ್ಮಾಶೆಣೈಯವರದು ಶತಮಾನದ ಸಾಕ್ಷಿಯಂತಿರುವ ಬದುಕು. ಅವರು, ದಕ್ಷಿಣಕನ್ನಡದ ಸಾರಸ್ವತಲೋಕದ ಇತಿಹಾಸವನ್ನು ಸನಿಹದಲ್ಲಿ ಕಾಣುತ್ತ ಬದುಕಿದವರು, ಬರೆದವರು.
ಅವರಿಗೆ ಈಗ 87 ರ ಹರೆಯ.ಅವರ ಕತೆ, ಕಾದಂಬರಿಗಳನ್ನು ಮತ್ತೆ ಓದೋಣ, ಅಭಿನಂದಿಸೋಣ.
ಈಮೇಲ್ ವಿಳಾಸ : padmashenoy1933@gmail.com
ವಾಟ್ಸಾಪ್ ನಂಬರ್ : 98451 22616 ನಳಿನಾಕ್ಷಿ ಉದಯರಾಜ್