Advertisement

ಶಾಲೆಗಳಲ್ಲಿ ಘಂಟೆ ಬಾರಿಸಲು ಒಂದೇ ದಿನ ಬಾಕಿ!

08:44 AM May 28, 2019 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೇಸಿಗೆ ರಜೆ ಕಳೆದು 2019-2020ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಶಾಲೆಗಳ ಪುನರಾರಂಭಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಶಾಲೆಗಳಲ್ಲಿ ಘಂಟೆ ಬಾರಿಸಲು 24 ಘಂಟೆ ಮಾತ್ರ ಬಾಕಿ ಇದ್ದು, ಮೇ 29 ರಂದು ಬುಧವಾರ ಜಿಲ್ಲಾದ್ಯಂತ ಶಾಲೆಗಳು ಕಾರ್ಯಾರಂಭ ಮಾಡಲಿವೆ.

Advertisement

ವರದಿ ರವಾನೆ: ಈಗಾಗಲೇ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಜಿಲ್ಲೆಯ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಶಾಲಾ ಮುಖ್ಯ ಶಿಕ್ಷಕರ ಸಭೆಗಳನ್ನು ನಡೆಸಿ ವಾರ್ಷಿಕವಾಗಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ನೀಡಿದ್ದು, ಅದರಂತೆ ಶಾಲೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಜಿಲ್ಲೆಯಲ್ಲಿ 1596 ಶಾಲೆ: ಜಿಲ್ಲೆಯ ಒಟ್ಟು 1,596 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಇದ್ದು, ಆ ಪೈಕಿ ಬಾಗೇಪಲ್ಲಿ 307, ಗೌರಿಬಿದನೂರು ತಾಲೂಕಿನಲ್ಲಿ 309, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 249, ಚಿಂತಾಮಣಿ 360, ಶಿಡ್ಲಘಟ್ಟ 263, ಗುಡಿಬಂಡೆಯಲ್ಲಿ 108 ಶಾಲೆಗಳು ಇವೆ.

ಸರ್ಕಾರಿ ಪ್ರೌಢ ಶಾಲೆಗಳು ಬಾಗೇಪಲ್ಲಿ 20, ಚಿಕ್ಕಬಳ್ಳಾಪುರ 14, ಚಿಂತಾಮಣಿ 23, ಗೌರಿಬಿದನೂರು 22, ಗುಡಿಬಂಡೆ 11, ಶಿಡ್ಲಘಟ್ಟದಲ್ಲಿ 17 ಶಾಲೆಗಳು ಇದ್ದು, ಸುಮಾರು 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮಕ್ಕಳ ನೋಂದಣಿಗೆ ಜಾಗೃತಿ: ಶಾಲೆ ಆರಂಭ ದಿನವೇ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಇಲಾಖೆ ಜಿಲ್ಲಾದ್ಯಂತ ವಿಶೇಷ ನೋಂದಣಿ ಜೊತೆಗೆ ಸಾಮಾನ್ಯ ದಾಖಲಾತಿ ನೋಂದಣಿ ಆರಂಭಿಸಿದ್ದು, ಮೇ 29 ರಂದು ಶಾಲೆಗೆ ಬರುವ ಮಕ್ಕಳನ್ನು ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ಶಾಲೆ ಬಿಟ್ಟು ಮಕ್ಕಳನ್ನು ಗುರುತಿಸುವಂತೆ ಇಲಾಖೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಿದೆ.

Advertisement

ಮಿಂಚಿನ ಸಂಚಾರ ಕಾರ್ಯಕ್ರಮ: ಶಾಲೆಯಿಂದ ಯಾವೊಬ್ಬ ಮಕ್ಕಳು ಹೊರಗೆ ಉಳಿಯಬಾರದೆಂಬ ಕಾರಣಕ್ಕೆ ಇಲಾಖೆ ಈ ಬಾರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಶಾಲೆಗಳು ಸಮರ್ಪಕವಾಗಿ ನಡೆಯುತ್ತವೆಯೇ ಎಂಬುದರ ಬಗ್ಗೆ ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಮಿಂಚಿನ ಸಂಚಾರ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. ಶಾಲೆಗಳ ಪುನರಾರಂಭದ ಬಗ್ಗೆ ಇಲಾಖೆ ಕೈಗೊಂಡಿರುವ ಸಿದ್ಧತೆಗಳ ಕುರಿತು ಸೋಮವಾರ ಉದಯವಾಣಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ತಿಳಿಸಿದರು.

ಹಳೆ ಕಟ್ಟಡಗಳ ಕೆಡವಲು ಸೂಚನೆ: ಮಳೆಗಾಲ ಶುರುವಾಗಿರುವುದರಿಂದ ಪಾಳು ಬಿದ್ದ ಹಾಗೂ ಹಳೆ ಕಟ್ಟಡಗಳ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಇಲಾಖೆ ಕಟ್ಟೆಚ್ಚರ ನೀಡಿದೆ. ಹಳೆಯ ಕಟ್ಟಡಗಳನ್ನು ಕೆಡವುವಂತೆ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪಾಳು ಬಿದ್ದ ಕಟ್ಟಡಗಳು ಇದ್ದು ಈಗಾಗಲೇ ಹಲವು ಕೊಠಡಿಗಳನ್ನು ಇಲಾಖೆ ಮಾರ್ಗದರ್ಶನದಂತೆ ಕೆಡವಲಾಗುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ತಿಳಿಸಿದರು.

ಶಾಲೆಗಳಲ್ಲಿ ಕೈ ತೋಟ ಕಡ್ಡಾಯ: ಜಿಲ್ಲೆಯಲ್ಲಿ ಈ ಬಾರಿ ಕೈ ತೋಟ ಸಜ್ಜುಗೊಳಿಸಬೇಕೆಂದು ಸೂಚಿಸಲಾಗಿದೆ. ಕಡ್ಡಾಯವಾಗಿ ಶಾಲೆಗಳ ಆವರಣದಲ್ಲಿ ಕರಿಬೇವು, ನಿಂಬೆ ಹಾಗೂ ನುಗ್ಗೆ ಸಸಿಗಳನ್ನು ಬೆಳೆಸುವಂತೆ ಸೂಚಿಸಲಾಗಿದೆ. ಶಾಲೆಗಳ ಆವರಣದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಿ ಜೂನ್‌ 5 ವಿಶ್ವ ಪರಿಸರ ದಿನದಂದು ಶಾಲೆಗಳಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷರಿಗೆ ಸೂಚಿಸಲಾಗಿದೆ. ಉಳಿದಂತೆ ವರ್ಷವಿಡೀ ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆಯು ಇಲಾಖೆ ಈಗಾಗಲೇ ಪಟ್ಟಿ ಮಾಡಿ ಶಾಲೆಗಳಿಗೆ ತಲುಪಿಸಿದೆ.

ತಳಿರು, ತೋರಣಗಳಿಂದ ಶಾಲೆಗಳ ಸಿಂಗಾರ:

ಮೇ 29 ರಂದು ಜಿಲ್ಲೆಯಲ್ಲಿನ ಪ್ರತಿ ಶಾಲೆಯನ್ನು ತಳಿರು, ತೋರಣಗಳಿಂದ ಸಿಂಗಾರ ಮಾಡಿ ಮಕ್ಕಳನ್ನು ಸ್ವಾಗತಿಸುವ ಬ್ಯಾನರ್‌ ಕಟ್ಟಲಾಗುತ್ತದೆ. ಶಾಲೆ ಆರಂಭದ ದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಕಾರ್ಯಗತವಾಗಲಿದ್ದು, ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಸಿಹಿ ಊಟ ಮಾಡಿ ಬಡಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲೆಯ ಆರಂಭ ದಿನವೇ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಕರೆಸಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲು ಆದೇಶಿಸಲಾಗಿದೆ.
● ಕಾಗತಿ ನಾಗರಾಜಪ್ಪ
Advertisement

Udayavani is now on Telegram. Click here to join our channel and stay updated with the latest news.

Next