ಪರ್ತ್: ಹಿರಿಯ ವೇಗಿ ಡೇಲ್ ಸ್ಟೇನ್ ಅವರ ಘಾತಕ ಸ್ಪೆಲ್‌ಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯ ಪರ್ತ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ಗಳಿಂದ ಶರಣಾಗಿದೆ. 3 ಪಂದ್ಯಗಳ ಸರಣಿಯಲ್ಲಿ ಹರಿಣಗಳ ಪಡೆ 1-0 ಮುನ್ನಡೆ ಸಾಧಿಸಿದೆ.
ರವಿವಾರದ ಮೊದಲ ಮುಖಾಮುಖೀಯಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಇದರಲ್ಲಿ ಭರಪೂರ ಯಶಸ್ಸು ಸಾಧಿಸಿತು. ಆರನ್ ಫಿಂಚ್ ಪಡೆಯನ್ನು 38.1 ಓವರ್‌ಗಳಲ್ಲಿ 152 ರನ್ನಿಗೆ ಹಿಡಿದು ನಿಲ್ಲಿಸಿತು. ಸಾಮಾನ್ಯ ಮೊತ್ತವನ್ನು ಬೆನ್ನಟ್ಟಿದ ಡು ಪ್ಲೆಸಿಸ್ ಬಳಗ 29.2 ಓವರ್‌ಗಳಲ್ಲಿ 4ಕ್ಕೆ 153 ರನ್ ಬಾರಿಸಿ ಗೆದ್ದು ಬಂದಿತು.
ಆಸ್ಟ್ರೇಲಿಯದ ಕುಸಿತಕ್ಕೆ ಮುಹೂರ್ತವಿರಿಸಿದವರು ಘಾತಕ ಬೌಲರ್ ಡೇಲ್ ಸ್ಟೇನ್. ಅವರು ತಮ್ಮ 2ನೇ ಓವರಿನಲ್ಲಿ ಟ್ರ್ಯಾವಿಸ್ ಹೆಡ್ (1) ಮತ್ತು ಡಿ’ಆರ್ಸಿ ಶಾರ್ಟ್ (0) ವಿಕೆಟ್ ಉರುಳಿಸಿದರು. ನಾಯಕ ಫಿಂಚ್ (5) ಕೂಡ ವಿಫಲರಾದರು. 8 ರನ್ ಆಗುವಷ್ಟರಲ್ಲಿ ಕಾಂಗರೂಗಳ 3 ವಿಕೆಟ್ ಹಾರಿಹೋಯಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ಕೊನೆಯ ತನಕವೂ ಆಸ್ಟ್ರೇಲಿಯಕ್ಕೆ ಸಾಧ್ಯವಾಗಲಿಲ್ಲ. ಬೌಲರ್ ನಥನ್ ಕೋಲ್ಟರ್ ನೈಲ್ 34 ರನ್ ಹೊಡೆದದ್ದೇ ಆಸೀಸ್ ಸರದಿಯ ಸರ್ವಾಧಿಕ ಗಳಿಕೆ. ಕೀಪರ್ ಅಲೆಕ್ಸ್ ಕ್ಯಾರಿ 33 ರನ್ ಮಾಡಿದರು.ಆಫ್ರಿಕಾ ಪರ ಫೆಲುಕ್ವಾಯೊ 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಸ್ಟೇನ್, ಎನ್‌ಗಿಡಿ, ತಾಹಿರ್ ತಲಾ 3 ವಿಕೆಟ್ ಕೆಡವಿದರು.
ಚೇಸಿಂಗ್ ವೇಳೆ ಕ್ವಿಂಟನ್ ಡಿ ಕಾಕ್ (47)-ರೀಝ ಹೆಂಡ್ರಿಕ್ಸ್ (44) ಆರಂಭಿಕ ವಿಕೆಟಿಗೆ 94 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಮಾರ್ಕ್‌ರಮ್ 36 ರನ್ ಮಾಡಿದರು. ಉರುಳಿದ ನಾಲ್ಕರಲ್ಲಿ 3 ವಿಕೆಟ್ ಸ್ಟೊಯಿನಿಸ್ ಪಾಲಾಯಿತು.
ಸರಣಿಯ 2ನೇ ಪಂದ್ಯ ನ. 9ರಂದು ಅಡಿಲೇಡ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-38.1 ಓವರ್‌ಗಳಲ್ಲಿ 152 (ಕೋಲ್ಟರ್ ನೈಲ್ 34, ಕ್ಯಾರಿ 33, ಫೆಲುಕ್ವಾಯೊ 33ಕ್ಕೆ 3, ಸ್ಟೇನ್ 18ಕ್ಕೆ 2, ಎನ್‌ಗಿಡಿ 26ಕ್ಕೆ 2, ತಾಹಿರ್ 39ಕ್ಕೆ 2). ದಕ್ಷಿಣ ಆಫ್ರಿಕಾ-29.2 ಓವರ್‌ಗಳಲ್ಲಿ 4 ವಿಕೆಟಿಗೆ 153 (ಡಿ ಕಾಕ್ 47, ಹೆಂಡ್ರಿಕ್ಸ್ 44, ಮಾರ್ಕ್‌ರಮ್ 36, ಸ್ಟೊಯಿನಿಸ್ 16ಕ್ಕೆ 3).
ಪಂದ್ಯಶ್ರೇಷ್ಠ: ಡೇಲ್ ಸ್ಟೇನ್.