ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ ಏಳುವುದಿಲ್ಲ ಎಂದು ಶಪಥ ಹಾಕಿ ಹಾಸಿಗೆಯಲ್ಲಿ ಉರುಳಿಕೊಂಡಿದ್ದೆ. ಅಷ್ಟರೊಳಗೆ ಅಮ್ಮ ಅಡುಗೆ ಮನೆಯಿಂದ ಕೂಗು ಹಾಕಿದಳು. “ದೇವರೇ’ ಎಂದುಕೊಂಡು ಅತ್ತ ಕಡೆ ಹೋದೆ. ಅಮ್ಮ ನನಗೆ ಕೆಲಸ ನೀಡಲು ಪಟ್ಟಿಯನ್ನೇ ಸಿದ್ದಪಡಿಸಿಕೊಂಡವಳಂತೆ ಒಂದೊಂದೇ ಕೆಲಸ ಹೇಳಲು ಶುರುಮಾಡಿದಳು. ತೆಂಗಿನಕಾಯಿ ತುರಿ, ಗುಡಿಸು, ನೆಲ ಒರೆಸು- ಹೀಗೆ ಸಣ್ಣಪುಟ್ಟ ಕೆಲಸಗಳು.
ಅಬ್ಟಾ! ಎಂದುಕೊಳ್ಳುತ್ತಾ ಒಂದು ಐದು ನಿಮಿಷ ಮೊಬೈಲ್ ಕೈಯಲ್ಲಿ ಹಿಡಿದಿದ್ದೇ ತಡ ಅಮ್ಮನ ಬೈಗುಳ ಶುರು. “ಇಡೀ ದಿನ ಮೊಬೈಲ್‌ನಲ್ಲೇ ನೋಡಿಕೊಂಡು ಇದ್ದರೆ ನಿನ್ನ ಕಣ್ಣು ಏನಾಗಬೇಕು’ ಅಂತ ಶುರು ಮಾಡುತ್ತಾಳೆ. ಆಗ ಮತ್ತೆ ಎದ್ದು ಏನಾದರು ಕೆಲಸ ಮಾಡಲು ಹೊರಡುತ್ತೇನೆ.
ಏನೇ ಕೆಲಸ ಮಾಡಲು ಹೇಳಿದರೂ ಅಮ್ಮ ಅಡುಗೆ ಮಾಡಲು ಹಾಗೂ ಇಸ್ತ್ರಿ ಹಾಕಲು ಮಾತ್ರ ನನ್ನ ಬಳಿ ಹೇಳಲಾರಳು ಎಂಬ ನಂಬಿಕೆ ನನಗಿತ್ತು. ಯಾಕೆಂದರೆ, ಇಸ್ತ್ರಿ ಹಾಕುತ್ತ ಅಪ್ಪನ ಪ್ಯಾಂಟ್ ಸುಟ್ಟು ಹಾಕಿ, ಚೆನ್ನಾಗಿ ಬೈಸಿಕೊಂಡಿದ್ದೆ. ಕೆಲವೇ ದಿನಗಳಲ್ಲಿ ನನ್ನ ಅಡುಗೆ ಕೆಲಸ ಪ್ರಾರಂಭವಾಯಿತು. ಮುಂದಿನ “ಮಾಸ್ಟರ್ ಶೆಫ್’ ನಾನೇ ಎಂಬ ಭಾವನೆಯೊಂದಿಗೆ ಅಡುಗೆ ತಯಾರಿಸಿಬಿಟ್ಟೆ. ಮಾಡಿದ ಸಾಂಬಾರ್ ಮನುಷ್ಯರು ತಿನ್ನುವಷ್ಟರ ಮಟ್ಟಕ್ಕೆ ಚೆನ್ನಾಗಿದೆ ಎಂದು ಅಪ್ಪ ನಗೆಯಾಡುತ್ತ ಹೇಳಿದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಅಮ್ಮ ಒಂದೂ ಹೊಗಳಿಕೆಯ ಮಾತು ಹೇಳಲಿಲ್ಲ.
ಅಡುಗೆ ಕಲಿಯುವಾಗ ಮನಸ್ಸು ತುಂಬಾ ಏಕಾಗ್ರತೆಯಿಂದ ಇರಬೇಕಾಗುತ್ತದೆ. ಏಕಕಾಲಕ್ಕೆ ಹತ್ತು ಕೆಲಸ ಮಾಡುವ “ಮ್ಯಾನೇಜ್‌ಮೆಂಟ್ ಸ್ಕಿಲ್’ ಗೊತ್ತಿರಬೇಕು. ಗ್ಯಾಸ್‌ನ ಆ ಒಲೆಯಲ್ಲಿ ನೀರಿಟ್ಟು, ಈ ಒಲೆಯಲ್ಲಿ ಕುಕ್ಕರ್ ಇಟ್ಟು, ಎರಡನ್ನೂ ನಿಭಾಯಿಸಿಕೊಂಡು ಹೋಗಬೇಕು. ಅಬ್ಬಬ್ಟಾ!
ಆಶಿಕಾ ಸಾಲೆತ್ತೂರು
ಎಂಸಿಜೆ, ದ್ವಿತೀಯ ವರ್ಷ ವಿವೇಕಾನಂದ ಕಾಲೇಜು, ಪುತ್ತೂರು