Advertisement

“ಎ’ತಂಡಗಳ ಅನಧಿಕೃತ ಏಕದಿನ ಸರಣಿ ಭಾರತಕ್ಕೆ 5 ವಿಕೆಟ್‌ ಜಯ

09:46 AM Jan 23, 2020 | Team Udayavani |

ಲಿಂಕನ್‌ (ನ್ಯೂಜಿಲ್ಯಾಂಡ್‌): ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಸಂಜು ಸ್ಯಾಮ್ಸನ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಬುಧವಾರ “ಬರ್ಟ್‌ ಸಟ್‌ಕ್ಲಿಫ್ ಓವಲ್‌’ನಲ್ಲಿ ನ್ಯೂಜಿಲ್ಯಾಂಡ್‌ “ಎ’ ವಿರುದ್ಧ ನಡೆದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಶಾ ಮತ್ತು ಸ್ಯಾಮ್ಸನ್‌ ಅವರ ಉತ್ತಮ ಆಟದಿಂದಾಗಿ ಭಾರತ “ಎ’ ತಂಡವು ಐದು ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಕಿವೀಸ್‌ “ಎ’ ತಂಡವು 48.3 ಓವರ್‌ಗಳಲ್ಲಿ 230 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಭಾರತ ಕೇವಲ 29.3 ಓವರ್‌ಗಳಲ್ಲಿ 231 ರನ್‌ ಗಳಿಸಿ ಜಯಶಾಲಿಯಾಯಿತು.

ಭಾರತ ಪರ ಆರಂಭಿಕರಾದ ಪೃಥ್ವಿ ಶಾ ಮತ್ತು ಮಾಯಾಂಕ್‌ ಅಗರ್ವಾಲ್‌ (29) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟಿಗೆ 9.1 ಓವರ್‌ಗಳಲ್ಲಿ 79 ರನ್‌ ಒಟ್ಟುಗೂಡಿಸಿದರು.

35 ಎಸೆತ ಎದುರಿಸಿದ ಪೃಥ್ವಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ 48 ರನ್‌ ಗಳಿಸಿದರು. ಈ ನಡುವೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ 21 ಎಸೆತಗಳಿಂದ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ ನೆರವಿನಿಂದ 39 ರನ್‌ ಗಳಿಸಿ ಅಬ್ಬರಿಸಿದರು. ಭಾರತ ಪರ ಮಿಂಚಿದ ಮತ್ತೂಬ್ಬ ಬ್ಯಾಟ್ಸ್‌
ಮನ್‌ ಸೂರ್ಯಕುಮಾರ್‌ ಯಾದವ್‌. ಅವರ ಗಳಿಕೆ 35 ರನ್‌ (18 ಎಸೆತ, 6 ಬೌಂಡರಿ, 1 ಸಿಕ್ಸರ್‌). ನಾಯಕ ಶುಭಮನ್‌ ಗಿಲ್‌ 30, ವಿಜಯ್‌ ಶಂಕರ್‌ ಅಜೇಯ 20, ಕೃಣಾಲ್‌ ಪಾಂಡ್ಯ ಅಜೇಯ 15 ರನ್‌ಗಳ ಕೊಡುಗೆ ನೀಡಿದರು.

ಕಿವೀಸ್‌ ಪರ ಆರಂಭಿಕ ರಚಿನ್‌ ರವೀಂದ್ರ 49 ಹಾಗೂ ನಾಯಕ ಟಾಮ್‌ ಬ್ರೂಸ್‌ 47 ರನ್‌ ಗಳಿಸಿ ಸಮರ್ಥ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಭಾರತದ ಪರ ಮೊಹಮ್ಮದ್‌ ಸಿರಾಜ್‌ 3, ಖಲೀಲ್‌ ಅಹ್ಮದ್‌ ಮತ್ತು ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.

Advertisement

ಆಯ್ಕೆ ಸಮರ್ಥಸಿಕೊಂಡ ಶಾ-ಸಂಜು
ಹಿರಿಯ ಅನುಭವಿ ಆಟಗಾರ ಶಿಖರ್‌ ಧವನ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಕಿವೀಸ್‌ ಪ್ರವಾಸದಲ್ಲಿ ಟ್ವೆಂಟಿ-20 ಸರಣಿಗೆ ಸಂಜು ಸ್ಯಾಮ್ಸನ್‌ ಮತ್ತು ಏಕದಿನ ಸರಣಿಗೆ ಪೃಥ್ವಿ ಶಾ ಅವರನ್ನು ಬದಲಿ ಆಟಗಾರರೆಂದು ಘೋಷಿಸಲಾಗಿತ್ತು. ಇದಕ್ಕೆ ತಕ್ಕ ರೀತಿಯಲ್ಲಿ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಪೃಥ್ವಿ ಹಾಗೂ ಸಂಜು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲ್ಯಾಂಡ್‌ “ಎ’ -48.3 ಓವರ್‌ಗಳಲ್ಲಿ 230ಕ್ಕೆ ಆಲೌಟ್‌ (ರವೀಂದ್ರ 49, ಬ್ರೂಸ್‌ 47, ಸಿರಾಜ್‌ 33ಕ್ಕೆ 3, ಅಕ್ಷರ್‌ 31ಕ್ಕೆ 2, ಖಲೀಲ್‌ 46ಕ್ಕೆ 2). ಭಾರತ “ಎ’-5 ವಿಕೆಟಿಗೆ 231( ಶಾ 48, ಸಂಜು, 39, ಸೂರ್ಯಕುಮಾರ್‌ 35, ಜೇಮ್ಸ್‌ ನೀಶಮ್‌ 25ಕ್ಕೆ 2).

ಕಿವೀಸ್‌ ಪ್ರವಾಸದಲ್ಲಿ ಸಂಜು-ಪೃಥ್ವಿಗೆ ಸ್ಥಾನ
ಭುಜದ ನೋವಿನಿಂದ ಬಳಲುತ್ತಿರುವ ಶಿಖರ್‌ ಧವನ್‌ ಮುಂಬರುವ ನ್ಯೂಜಿಲ್ಯಾಂಡ್‌ ಪ್ರವಾಸದ ಟಿ20 ಮತ್ತು ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ತಂಡವು ಧವನ್‌ ಬದಲಿಗೆ ಟ್ವೆಂಟಿ20ಗೆ ಯುವ ಆಟಗಾರ ಸಂಜು ಸ್ಯಾಮ್ಸನ್‌ ಮತ್ತು ಏಕದಿನ ಸರಣಿಗೆ ಪೃಥ್ವಿ ಶಾ ಅವರನ್ನು ಸೇರಿಸಿಕೊಂಡಿದೆ. ಶಾ ಅವರು ಭಾರತ “ಎ’ ತಂಡದ ಎರಡನೇ ಅಭ್ಯಾಸ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್‌ ಸಿಡಿಸಿ ಗಮನ ಸೆಳೆದಿದ್ದರು.

ಶಿಖರ್‌ ಧವನ್‌ ಅವರ ಗಾಯದ ಎಂಆರ್‌ಐ ಸ್ಕ್ಯಾನ್‌ ನಡೆಸಲಾಗಿದ್ದು ಗ್ರೇಡ್‌ ಸೆಕೆಂಡ್‌ ಗಾಯವಾಗಿರುವುದು ದೃಢಪಟ್ಟಿದೆ. ಹಾಗಾಗಿ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ಅವರಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next