Advertisement

Election; ಒಂದು ದೇಶ,ಒಂದು ಚುನಾವಣೆ ಜಾರಿ ಯಾವಾಗ? ಏನೆಲ್ಲ ತಿದ್ದುಪಡಿ ಅಗತ್ಯ?

01:28 AM Dec 15, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಘೋಷಣೆಯಾದ “ಒಂದು ದೇಶ, ಒಂದು ಚುನಾವಣೆ’ಯು 2034ರಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಮಂಡನೆ ಮಾಡಲು ಉದ್ಯುಕ್ತವಾಗಿರುವ ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಯ ಪ್ರಕಾರ 2029ರಲ್ಲಿ ಏಕ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಲಿವೆ.

Advertisement

ಏಕ ಚುನಾವಣೆ ಜಾರಿ ಮಾಡಬೇಕಿದ್ದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಸಮಕಾಲೀನಗೊಳಿಸಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಸಮಯ ಹಾಗೂ ಸಂವಿಧಾನ ತಿದ್ದುಪಡಿಗಳ ಆವಶ್ಯಕತೆ ಇದ್ದು, ಇವುಗಳನ್ನು ಸಮರ್ಪಕವಾಗಿ ನಡೆಸಲು 10 ವರ್ಷಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಾಂತರವಲ್ಲ, ಅವಧಿ ಪೂರೈಸದ ಚುನಾವಣೆ
“ಒಂದು ದೇಶ, ಒಂದು ಚುನಾವಣೆ’ಯನ್ನು ಜಾರಿ ಮಾಡಲು ಹೊಸ ವಿಷಯಗಳನ್ನು ಕೂಡ ಕೇಂದ್ರ ಸರಕಾರವು ಈ ಮಸೂದೆಯಲ್ಲಿ ಸೇರ್ಪಡೆ ಮಾಡಿದ್ದು, ಮಧ್ಯಾಂತರ ಚುನಾವಣೆಯ ಬದಲು “ಅವಧಿ ಪೂರೈಸದ ಚುನಾವಣೆ’ ಎಂಬುದನ್ನು ಸೇರ್ಪಡೆ ಮಾಡಲಾಗುತ್ತದೆ. ಇದರ ಪ್ರಕಾರ ಲೋಕಸಭೆ ಅಥವಾ ವಿಧಾನಸಭೆಗಳು ವಿಸರ್ಜನೆಯಾದ ಬಳಿಕ ನಡೆಯುವ ಚುನಾವಣೆಗಳು 5 ವರ್ಷದ ಅವಧಿಯನ್ನು ಹೊಂದಿರುವುದಿಲ್ಲ. ಉದಾಹರಣೆಗೆ, 2034ರ ಲೋಕಸಭೆ 3 ವರ್ಷದ ಬಳಿಕ ವಿಸರ್ಜನೆಯಾದರೆ, “ಅವಧಿ ಪೂರೈಸದ ಚುನಾವಣೆ’ಯನ್ನು ನಡೆಸಲಾಗುತ್ತದೆ. ಇದರ ಪ್ರಕಾರ ಮುಂಬರುವ ಲೋಕಸಭೆಯ ಅವಧಿ 2 ವರ್ಷದ್ದು ಮಾತ್ರ ಆಗಿರುತ್ತದೆ. ಬಳಿಕ 2039ರಲ್ಲಿ ಏಕ ಚುನಾವಣೆ ನಡೆಯಲಿದೆ.

ಏನೆಲ್ಲ ತಿದ್ದುಪಡಿ ಅಗತ್ಯ? ಏಕ ಚುನಾವಣೆಯನ್ನು ಜಾರಿ ಮಾಡಬೇಕಿದ್ದರೆ ಸಂವಿಧಾನದ 82, 83, 172 ಮತ್ತು 237ನೇ ವಿಧಿಗಳಿಗೆ ತಿದ್ದುಪಡಿ ತರಬೇಕಿದೆ. ಇದರ ಜತೆಗೆ ಕೇಂದ್ರಾಡಳಿತ ಪ್ರದೇಶ ಕಾಯ್ದೆ, ಜಮ್ಮು -ಕಾಶ್ಮೀರ ಪುನರ್‌ ಸಂಘಟನ ಕಾಯ್ದೆಗಳಿಗೆ ತಿದ್ದುಪಡಿ ತರಬೇಕಿದೆ.

ಹೇಗಿರಲಿದೆ ಪ್ರಕ್ರಿಯೆ? ಏಕಚುನಾವಣೆಗೆ ಅವಶ್ಯವಿರುವ ಸಂವಿಧಾನ ತಿದ್ದುಪಡಿಗಳನ್ನು ಕೈಗೊಂಡ ಬಳಿಕ ಮುಂದಿನ ಲೋಕಸಭೆ ಚುನಾವಣೆಯ ಬಳಿಕ ರಾಷ್ಟ್ರಪತಿ ಈ ಕಾನೂನನ್ನು ಜಾರಿ ಮಾಡಲಿದ್ದಾರೆ. ಇದಾದ ಬಳಿಕ ಎಲ್ಲ ವಿಧಾನಸಭೆಗಳ ಅವಧಿಯನ್ನು ಕಡಿತಗೊಳಿಸುವ ಅಥವಾ ಹೆಚ್ಚಿಸುವ ಮೂಲಕ ಅವುಗಳ ಅವಧಿಯನ್ನು 2034ರ ಲೋಕಸಭೆ ಚುನಾವಣೆಯೊಂದಿಗೆ ಹೊಂದಿಕೆ ಮಾಡಲಾಗುತ್ತದೆ. ಇದಾದ ಬಳಿಕ ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಯಲಿದೆ.

Advertisement

ನಾಳೆ ಏಕ ಚುನಾವಣೆ ಮಸೂದೆ ಮಂಡನೆ
ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ತರಬೇಕಿರುವ ಸಾಂವಿಧಾನಿಕ ತಿದ್ದುಪಡಿಗಳನ್ನು ಒಳಗೊಂಡ 129ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಲಿದೆ. ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಮಸೂದೆಯನ್ನು ಮಂಡಿಸಲಿದ್ದು, ಇದು ದೇಶದ ಚುನಾವಣ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರಲಿದೆ. 129ನೇ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಯನ್ನು ಸೋಮವಾರ ಮಂಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next