ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ “ಒಂದು ದೇಶ-ಒಂದು ಚುನಾವಣೆ’ ನೀತಿಯ ಜಾರಿಗೆ ಶಿಫಾರಸು ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಿ, ಮುಂದಿನ 100 ದಿನಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸಮಿತಿ ತನ್ನ ವರದಿಯಲ್ಲಿ ಸಲಹೆ ನೀಡಿದೆ.
ಸುದೀರ್ಘ ಅಧ್ಯಯನ, ವಿಚಾರ-ವಿಮರ್ಶೆ ನಡೆಸಿ ಸಮಿತಿಯು “ಒಂದು ದೇಶ-ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಲ್ಲಿಸಿದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರದಲ್ಲಿನ ಹಾಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಈ ಬಗ್ಗೆ ಒಲವು ವ್ಯಕ್ತಪಡಿಸುತ್ತಲೇ ಬಂದಿತ್ತು. ಈ ವಿಷಯದ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರ ಈ ಸಂಬಂಧ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಈಗ ಈ ಸಮಿತಿಯೂ “ಒಂದು ದೇಶ-ಒಂದು ಚುನಾವಣೆ’ಗೆ ಶಿಫಾರಸು ಮಾಡಿದ್ದು, 2029ರಿಂದಲೇ ದೇಶದಲ್ಲಿ ಈ ನೀತಿಯನ್ನು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಮತ್ತು ಚುನಾವಣ ಆಯೋಗಕ್ಕೆ ಸಲಹೆ ನೀಡಿದೆ. ಇದು ದೇಶದ ಚುನಾವಣ ವ್ಯವಸ್ಥೆ ಯಲ್ಲಿಯೇ ಅತ್ಯಂತ ಕ್ರಾಂತಿಕಾರಕ ನಿರ್ಧಾರ ಎನಿಸಿಕೊಳ್ಳಲಿದೆ.
“ಒಂದು ದೇಶ-ಒಂದು ಚುನಾವಣೆ’ ಜಾರಿಯಾದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೊಕ್ಕಸದ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ ಬಹಳಷ್ಟು ಕಡಿಮೆಯಾಗಲಿದೆ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆಯ ಕಾರಣದಿಂದಾಗಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ವಿಳಂಬಗೊಳ್ಳುತ್ತಿದೆಯಲ್ಲದೆ ಜಾರಿಯಲ್ಲಿರುವ ಕಾಮಗಾರಿಗಳ ಮೇಲೂ ಪರಿಣಾಮ ಬೀಳುತ್ತಿದೆ. ಏಕಕಾಲದಲ್ಲಿ ಚುನಾವಣೆಗಳು ನಡೆದದ್ದೇ ಆದಲ್ಲಿ ಅಭಿವೃದ್ಧಿಗೆ ವೇಗ ಸಿಗುವುದರ ಜತೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿ ಪ್ರಜಾಸತ್ತೆಯ ಮೇಲಣ ಮತದಾರರ ವಿಶ್ವಾಸಾರ್ಹತೆ ಮತ್ತಷ್ಟು ವೃದ್ಧಿಯಾಗುತ್ತದೆ. ಇದರಿಂದ ಪ್ರಜಾಸತ್ತೆಯ ಅಡಿಪಾಯವೂ ಭದ್ರವಾಗಲಿದೆ. ನೀತಿಯ ಜಾರಿಗೆ ಸಂವಿಧಾನಕ್ಕೆ ಹಲವು ಮಹತ್ವದ ತಿದ್ದುಪಡಿಗಳನ್ನು ಮಾಡಬೇಕಿದ್ದು, ಇದಕ್ಕೆ ರಾಜ್ಯ ಸರಕಾರಗಳ ಒಪ್ಪಿಗೆಯ ಅಗತ್ಯವಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ ಬಹುಪಕ್ಷೀಯ ಆಡಳಿತ ವ್ಯವಸ್ಥೆ ಜಾರಿಯಲ್ಲಿರುವುದರಿಂದ “ಒಂದು ದೇಶ-ಒಂದು ಚುನಾವಣೆ’ ಜಾರಿಗೆ ಬಂದದ್ದೇ ಆದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಪೆಟ್ಟು ಬೀಳಲಿದೆ ಎಂಬುದು ಕೆಲವು ಪಕ್ಷಗಳ ಅದರಲ್ಲೂ ಮುಖ್ಯವಾಗಿ ಪ್ರಾದೇಶಿಕ ಪಕ್ಷಗಳ ಆತಂಕ. ಒಂದು ಸರಕಾರದ ಅವಧಿಗೆ ಮುನ್ನವೇ ಪತನಗೊಂಡರೆ ಮರು ಚುನಾವಣೆ ನಡೆಯುವ ಸಂದರ್ಭ ಬಂದಾಗ ಹೊಸ ವಿಧಾನಸಭೆ ಅವಧಿ ಪೂರ್ಣ ಇರದೆ, ಮುಂದಿನ ಸಾರ್ವತ್ರಿಕ ಚುನಾವಣೆಯ ತನಕ ಮಾತ್ರ ಇರುತ್ತದೆ. ಅಂದರೆ ಅವಧಿಯೇ ಮೊಟಕುಗೊಳ್ಳುವುದರಿಂದ ಪ್ರಜಾಸತ್ತೆಗೆ ಭಂಗವಾಗದೇ ಎಂಬ ಆತಂಕ ಸೃಷ್ಟಿಯಾಗಿದೆ. ವಿಭಿನ್ನ ಭೌಗೋಳಿಕ ರಾಜಕೀಯ ಸನ್ನಿವೇಶವನ್ನು ಒಳಗೊಂಡ ಭಾರತದಲ್ಲಿ “ಏಕ ಚುನಾವಣೆ’ಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಲವು ಸವಾಲುಗಳಿರುವುದು ಸಹಜ.
“ಒಂದು ದೇಶ-ಒಂದು ಚುನಾವಣೆ’ ಪ್ರಜಾತಂತ್ರ ವ್ಯವಸ್ಥೆಯ ಬುನಾದಿ ಯಾಗಿರುವ ಚುನಾವಣ ವ್ಯವಸ್ಥೆಯಲ್ಲಿನ ಕ್ರಾಂತಿಕಾರಕ ಬದಲಾವಣೆ ಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರಕಾರ, ಚುನಾವಣ ಆಯೋಗ, ರಾಜಕೀಯ ಪಕ್ಷಗಳು, ಸಾಂವಿಧಾನಿಕ ತಜ್ಞರು ಇನ್ನಷ್ಟು ಚರ್ಚೆ, ಪರಾಮರ್ಶೆ, ಚಿಂತನ-ಮಂಥನ ನಡೆಸಿ ಸಹಮತದ ನಿರ್ಧಾರ ಕೈಗೊಂಡು ಜಾರಿಗೆ ತಂದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಲಶಪ್ರಾಯವಾಗುವುದರಲ್ಲಿ ಸಂಶಯವಿಲ್ಲ.