Advertisement

ಒಂದು ದೇಶ-ಒಂದು ಚುನಾವಣೆ: ಸಾರ್ಥಕ ಚರ್ಚೆಯಾಗಲಿ 

02:22 AM Mar 04, 2021 | Team Udayavani |

ಪ್ರಸಕ್ತ ರಾಜ್ಯ ಬಜೆಟ್‌ ಅಧಿವೇಶನದ ಆರಂಭದ 2 ದಿನಗಳು “ಒಂದು ದೇಶ-ಒಂದು ಚುನಾವಣೆ’ ಚರ್ಚೆಗೆ ವಿಧಾನಮಂಡಲದ ಉಭಯ ಸದನಗಳು ವೇದಿಕೆಯಾಗಲಿವೆ. ಈ ಮೂಲಕ ಪ್ರಧಾನಿ ಮೋದಿಯವರ “ಒಂದು ದೇಶ ಒಂದು ಚುನಾವಣೆ’ ಎಂಬ ಆಶಯದ ಬಗ್ಗೆ ದೇಶವ್ಯಾಪಿ ಚರ್ಚೆಗೆ ಕರ್ನಾಟಕ ಮುನ್ನುಡಿ ಬರೆಯಲಿದೆ.

Advertisement

ಈ ವಿಷಯದ ಎಲ್ಲ ಆಯಾಮಗಳನ್ನು ಸಂವಿಧಾನ ಮತ್ತು ಕಾನೂ ನಿನ ಚೌಕಟ್ಟಿನಲ್ಲಿ ಪರಾಮರ್ಶೆಗೊಳಪಡಿಸಿ, ವಸ್ತುನಿಷ್ಠ ಮತ್ತು ರಚನಾತ್ಮಕ ಚರ್ಚೆಯಾಗಿ ಖಚಿತ ಅಭಿಪ್ರಾಯಗಳು ಮೂಡಿಬರಬೇಕು. ಈ ಚರ್ಚೆ ದೇಶಕ್ಕೆ ಅನುಸರಣಾಯೋಗ್ಯ ಹೆಜ್ಜೆಗುರುತುಗಳನ್ನು ಹಾಕಿಕೊಡುವಲ್ಲಿ ಯಶ್ವಸಿಯಾದರೆ, ಅದಕ್ಕೊಂದು ಸಾರ್ಥಕತೆ ಬರಲಿದೆ. ಈ ಅವಕಾಶವನ್ನು ಉಭಯ ಸದನಗಳ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕು. ಹೊಸತನ ಯಾವತ್ತೂ ಸವಾಲುಗಳಿಂದ ಕೂಡಿರುತ್ತದೆ. ಅಂದ ಮಾತ್ರಕ್ಕೆ ಹೊಸ ದನ್ನು ಅಳವಡಿಸಿಕೊಳ್ಳುವುದು ಕಷ್ಟವೇನಲ್ಲ. ಹಾಗೆಂದು 130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ, 28 ರಾಜ್ಯಗಳು, 8 ಕೇಂದ್ರಾ ಡಳಿತ ಪ್ರದೇಶಗಳು ಹೊಂದಿರುವ ಸದ್ಯ 8 ಪ್ರಮುಖ ರಾಷ್ಟ್ರೀಯ ಪಕ್ಷಗಳು ಸಹಿತ 2,600ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿರುವ, 88 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿದೆ. ಜತೆಗೆ ಭೌಗೋಳಿಕ ವೈಪರಿತ್ಯಗಳು, ಸಾಮಾಜಿಕ ವೈವಿಧ್ಯಗಳು, ಆಡಳಿತಾತ್ಮಕ ಭಿನ್ನತೆಗಳು , ರಾಜಕೀಯ ಅಭಿಪ್ರಾಯಭೇದಗಳಿಂದ ಕೂಡಿರುವ ದೇಶದಲ್ಲಿ ಒಂದು ದೇಶ-ಒಂದು ಚುನಾವಣೆ ಸುಲಭಸಾಧ್ಯವಲ್ಲ. ಆದರೆ ಚರ್ಚೆ ಆರಂಭವಾದರೆ ಅದಕ್ಕೊಂದು ಚೌಕಟ್ಟು ಸಿಗಬಹುದು.

ದೇಶದಲ್ಲಿ ನಡೆದ ಮೊದಲ ಮೂರು ಚುನಾವಣೆಗಳಲ್ಲಿ ಅಂದರೆ, 1952, 57 ಮತ್ತು 62ರ ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆ ಗಳಿಗೆ ಏಕಕಾಲಕ್ಕೆ ಮತದಾನ ನಡೆದಿತ್ತು. ಆ ಬಳಿಕ ಹಲವು ವಿಧಾನಸಭೆಗಳ ಅವಧಿಪೂರ್ವ ವಿಸರ್ಜನೆ ಹಾಗೂ 4ನೇ ಲೋಕಸಭೆಯ ಅವಧಿಪೂರ್ವ ವಿಸರ್ಜನೆಯಿಂದಾಗಿ ಏಕಕಾಲದ ಚುನಾವಣೆ ಪ್ರಕ್ರಿಯೆಗೆ ತೆರೆ ಬಿದ್ದಿತ್ತು. 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲೂ ಉಲ್ಲೇಖೀಸಿದಾಗ ಚರ್ಚೆ ಮುನ್ನೆಲೆಗೆ ಬಂದಿತ್ತು. ಸಂಸತ್ತಿನ ಕಳೆದ ಮುಂಗಾರು ಅಧಿವೇಶನಕ್ಕೂ ಮೊದಲು ಇದೇ ವಿಚಾರವಾಗಿ ಪ್ರಧಾನಿಯವರು ಸರ್ವಪಕ್ಷ ಸಭೆ ಕರೆದು ಚರ್ಚಿಸಿದ್ದರು.

ಪ್ರತಿವರ್ಷವೂ ಒಂದಲ್ಲ ಒಂದು ರಾಜ್ಯಕ್ಕೆ ಚುನಾವಣೆ ಇದ್ದೇ ಇರುತ್ತದೆ. ಪದೇಪದೆ ಚುನಾವಣೆಗಳಿಂದ ಕೋಟ್ಯಂತರ ರೂ. ಖರ್ಚಾಗುತ್ತದೆ. ರಾಜಕೀಯ ಪಕ್ಷಗಳು “ಓಟ್‌ ಬ್ಯಾಂಕ್‌’ ಉಳಿಸಿಕೊಳ್ಳುವ ಒತ್ತಡದಲ್ಲಿರುತ್ತವೆ. ತಿಂಗಳುಗಟ್ಟಲೆ ಮಾದರಿ ನೀತಿ ಸಂಹಿತೆ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆ ಆಗುತ್ತದೆ.

ಏಕಕಾಲಕ್ಕೆ ಚುನಾವಣೆ ನಡೆದರೆ ಪ್ರಾದೇಶಿಕವಾಗಿ ಮತ್ತು ರಾಷ್ಟ್ರೀಯ ನೆಲೆಯಲ್ಲೂ ಮತದಾರನ ಒಲವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜಕೀಯ ಪಕ್ಷಗಳಿಗೆ ಎದುರಾಗುತ್ತದೆ. ಅದರಂತೆ ರಾಜಕೀಯ ಸಮೀಕರಣಗಳಲ್ಲಿ ಜನಸ್ನೇಹಿ ನಿಲುವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

Advertisement

ಹೊಸ ಪದ್ಧತಿಗೆ ಗುಣ-ಅವಗುಣಗಳು ಇರುವುದು ಸಹಜ. ಅವುಗಳನ್ನು ರಾಜಕೀಯ ಸಿದ್ಧಾಂತಗಳ ಕನ್ನಡಕದಿಂದ ನೋಡುವುದರ ಬದಲು ವಾಸ್ತವಗಳನ್ನು ಮುಂದಿಟ್ಟು ಭವಿಷ್ಯದ ದೃಷ್ಟಿಯಿಂದ ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next