ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಕೇಂದ್ರೀಕೃತ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಸರಕಾರಿ ಸಿಇಟಿ, ಖಾಸಗಿಯವರ ಕಾಮೆಡ್-ಕೆ ಮತ್ತಿತರ ಹಲವು ಪ್ರತ್ಯೇಕ ಪ್ರವೇಶ ಪರೀಕ್ಷೆಗಳು ಇದ್ದು, ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಸೂಚನೆಯಂತೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಸರಕಾರದ ಮಟ್ಟದಲ್ಲಿ ಚಿಂತನೆ ಆರಂಭವಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಮಿತಿಯಿಂದ ಪತ್ರ
ವೃತ್ತಿಪರ ಕೋರ್ಸ್‌ಗಳ ಸೀಟು ಆಯ್ಕೆಗೆ ಸಂಬಂಧಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವುದು ನ್ಯಾಯಾಲಯದ ತೀರ್ಪು ಮತ್ತು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಅಧಿನಿಯಮಕ್ಕೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ವೃತ್ತಿಪರ ಶಿಕ್ಷಣ ಸಂಘ ಮತ್ತು ವಿ.ವಿ.ಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ನಿರ್ದೇಶನ ನೀಡುವಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸರಕಾರ ರೂಪಿಸಿರುವ ಪ್ರವೇಶ ಮೇಲ್ವಿಚಾರಣ ಸಮಿತಿಯು ಸರಕಾರಕ್ಕೆ ಪತ್ರ ಬರೆದಿದೆ.
ಇದನ್ನು ಅನುಸರಿಸಿ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಕೇಂದ್ರೀಕೃತ ಕೌನ್ಸೆಲಿಂಗ್ ನಡೆಸಲು ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ)ಯ ಅಧೀನ ಕಾರ್ಯದರ್ಶಿಯವರು, ಎಲ್ಲ 19 ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ನಿರ್ದೇಶನ ಪತ್ರ ಕಳುಹಿಸಿದ್ದಾರೆ. ಯಾವುದೇ ಅಭಿಪ್ರಾಯ ಅಥವಾ ಹೇಳಿಕೆ ಇದ್ದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿರುವ
ಪ್ರವೇಶ ಮೇಲ್ವಿಚಾರಣ ಸಮಿತಿಯ ಅಧ್ಯಕ್ಷರಿಗೆ ಲಿಖೀತ ರೂಪದಲ್ಲಿ ಸಲ್ಲಿಸಲು ಆದೇಶದಲ್ಲಿ ತಿಳಿಸಿದ್ದಾರೆ.