ಜಕಾರ್ತಾ: ಜಾವಾ ಸಮುದ್ರದಲ್ಲಿ ಪತನಗೊಳ್ಳುವ ಮೂಲಕ 189 ಪ್ರಯಾಣಿಕರ ದಾರುಣ ಸಾವಿಗೆ ಕಾರಣವಾಗಿದ್ದ ಇಂಡೋನೇಶ್ಯದ ಲಯನ್ ಏರ್ ಜೆಟ್ ವಿಮಾನದ ಒಂದು ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ.
ಈ ಬ್ಲಾಕ್ ಬಾಕ್ಸ್ ವಿಶ್ಲೇಷಣೆಯಿಂದ ಹೊಚ್ಚ ಹೊಸ ವಿಮಾನ ಹೇಗೆ ಪತನವಾಯಿತು ಎಂಬ ವಿಷಯ ಗೊತ್ತಾಗಲಿದೆ ಎಂದು ಇಂಡೋನೇಶ್ಯದ ಸಾರಿಗೆ ಸುರಕ್ಷಾ ಸಮಿತಿಯು ಇಂದು ಗುರುವಾರ ಹೇಳಿದೆ.
ಪತ್ತೆಯಾಗಿರುವ ಉಪಕರಣವು ಫ್ಲೈಟ್ ಡೇಟಾ ರೆಕಾರ್ಡರ್ (FDR) ಇರಬಹುದೇ ಅಥವಾ ಕಾಕ್ ಪಿಟ್ ವಾಯ್ಸ ರೆಕಾರ್ಡರ್ (CVR) ಇರಬಹುದೇ ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ; ಅಂತೂ ಒಂದು ಬ್ಲಾಕ್ ಬಾಕ್ಸ್ ಸಿಕ್ಕಿರುವುದು ನಿಜ ಎಂದು ಇಂಡೋನೇಶ್ಯದ ಸಾರಿಗೆ ಸುರಕ್ಷಾ ಸಮಿತಿಯ ಮುಖ್ಯಸ್ಥರಾಗಿರುವ ಸರ್‌ಜಾಂಟೋ ತಜೋನೋ ತಿಳಿಸಿದ್ದಾರೆ.
ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇಂಡೋನೇಶ್ಯದ ಉತ್ತರ ಕರಾವಳಿಯ ದೂರ ಸಮುದ್ರದಲ್ಲಿ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಪತನಗೊಳ್ಳಲು ಕಾರಣವೇನೆಂಬುದು ಈಗ ಪತ್ತೆಯಾಗಿರುವ ಬ್ಲಾಕ್ ಬಾಕ್ಸ್‌ನ ವಿಶ್ಲೇಷಣೆಯಿಂದ ಗೊತ್ತಾಗಲಿದೆ ಎಂದವರು ಹೇಳಿದರು.
ವಿಮಾನ ಪತನಗೊಂಡ ಸಮುದ್ರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಮುಳುಗು ತಜ್ಞರು ಕಿತ್ತಳೆ ಬಣ್ಣದ ಉಪಕರಣವೊಂದನ್ನು ಮೇಲೆತ್ತಿ ತಂದಿರುವುದು ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬಂದಿದೆ. ಈ ಉಪಕರಣ ವಿಭಿನ್ನ ಹೆಸರು ಹೊಂದಿರುವ ಹೊರತಾಗಿಯೂ ಬ್ಲಾಕ್ ಬಾಕ್ಸ್‌ಗಳು ಕಡು ಕಿತ್ತಳೆ ಬಣ್ಣದಲ್ಲಿರುವುದು ಸಾಮಾನ್ಯವಾಗಿದೆ.