ದಾವಣಗೆರೆ: ರಾಜ್ಯದ ಸ್ಥಳೀಯ ಸಂಸ್ಥೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 35 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ರಾಜ್ಯ ಸರ್ಕಾರ ವಿಶೇಷ ನೇಮಕಾತಿ ಆಧಾರದಲ್ಲಿ ಕಾಯಂಗೊಳಿಸಲಿದೆ ಎಂದು ತಿಳಿಸಿದರು.
ಕಾಯಮಾತಿಗೆ ಕೆಲವು ಮಾನದಂಡ ಅನುಸರಿಸಲಾಗುತ್ತಿದ್ದು, ಹೊರ ಗುತ್ತಿಗೆ ಆಧಾರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿರುವ ಹಾಗೂ ಕನ್ನಡ ಮಾತನಾಡಬೇಕು. ಅಲ್ಲದೆ, ಪೌರ ಕಾರ್ಮಿಕರ ಜೊತೆಗೆ ಆಸ್ಪತ್ರೆ, ಜಲ ಮಂಡಳಿ ಇತರೆಡೆಯಲ್ಲಿನ ಸ್ವತ್ಛತಾ ಕೆಲಸಗಾರರನ್ನು ಕಾಯಂಗೊಳಿಸುವ ಆಯೋಗದ ಚಿಂತನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ 2013ರಲ್ಲೇ ಜಾರಿಗೆ ಬಂದಿದ್ದರೂ ದಾವಣಗೆರೆಯಲ್ಲಿ 250 ಕುಟುಂಬಗಳಿವೆ. ಹಾವೇರಿಯಲ್ಲಿ ಇನ್ನೂ ಆ ಪದ್ಧತಿ ಜೀವಂತವಾಗಿದೆ. ಮ್ಯಾನುಯೆಲ್ ಸ್ಕಾವೆಂಜರ್ಗಳ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮತ್ತಿತರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅಧ್ಯಕ್ಷತೆಯಲ್ಲಿ ಆಯೋಗ 3 ಸಭೆ ನಡೆಸಿದೆ.
ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಅವರ ಸ್ಥಿತಿಗತಿ ಬಗ್ಗೆ ಪರಾಮರ್ಶಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ನಿವೇಶನ ಹೊಂದಿರುವಂಥಹ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಆಯೋಗದಿಂದ 7.5 ಲಕ್ಷ ನೀಡಲಾಗುವುದು. ಸರ್ಕಾರ 6 ಲಕ್ಷ ನೀಡಲಿದ್ದು, ಬಾಕಿ 1.5 ಲಕ್ಷ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸುವುದಕ್ಕೆ ಸಚಿವ ಎಚ್. ಆಂಜನೇಯ ಒಪ್ಪಿಕೊಂಡಿದ್ದಾರೆ.
ಗೃಹ ಭಾಗ್ಯ ಯೋಜನೆಯಲ್ಲಿ ನಿವೃತ್ತ ಹಾಗೂ ಹೊರ ಗುತ್ತಿಗೆ ಆಧಾರದ ಕಾರ್ಮಿಕರಿಗೂ ಸಹ ವಿಸ್ತರಿಸಲಾಗುವುದು. ನಿವೇಶನರಹಿತರಿಗೆ ಜಿಲ್ಲಾಡಳಿತದಿಂದ ನಿವೇಶನ ಖರೀದಿಸಿ ಕೊಡಲು ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಪ್ರಕಟಿಸಲಾಗುವುದು. ಪೌರ ಕಾರ್ಮಿಕರಿಗೆ ಸೂರು ಒದಗಿಸುವುದಕ್ಕೆ ಆಯೋಗ ಸದಾ ಬದ್ಧ ಎಂದು ತಿಳಿಸಿದರು.