ಉಪ್ಪುಂದ: ಹೇರೂರು-ಕಾಲ್ತೋಡು ಗ್ರಾಮಗಳನ್ನು ಸಂಪರ್ಕಿಸುವ ರಾಗಿಹಕ್ಲು-ಜೋಡುಗುಪ್ಪೆ ರಸ್ತೆಯಲ್ಲಿ ಜನ, ವಾಹನ ಸಂಚರಿಸಲು ಸಾಧ್ಯವಾಗದಂತಹ ದೊಡ್ಡ ಹೊಂಡಗಳಿಗೆ ಸ್ಥಳೀಯ ಯುವಕರು ಶ್ರಮದಾನದ ಮೂಲಕ ತಾತ್ಕಾಲಿಕ ಮುಕ್ತಿ ದೊರಕಿಸಿದ್ದಾರೆ.
ತೀರ ಹದಗೆಟ್ಟಿರುವ ರಸ್ತೆಯ ಹೊಂಡಗಳಲ್ಲಿ ಮಳೆ ನೀರು ತುಂಬಿಕೊಂಡು, ವಾಹನಗಳ ಸಂಚಾರಕ್ಕೆ ಸಂಕಷ್ಟ ಉಂಟಾಗಿದ್ದರಿಂದ ಯರುಕೋಣೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸ್ಪಂದನ ಯುವಕ ಮಂಡಲದ ಕ್ರಿಯಾಶೀಲ ಸದಸ್ಯರು ಶ್ರಮದಾನದ ಮೂಲಕ ಯರುಕೋಣೆ ವೆಂಕಟರಮಣ ದೇವಸ್ಥಾನ ಭಾಗದ ಒಂದೂವರೆ ಕಿಲೋಮೀಟರು ಉದ್ದದಲ್ಲಿ ಬಿದ್ದಿದ್ದ ಗುಂಡಿಗಳಿಗೆ ಕಾಯಕಲ್ಪ ನೀಡುವ ಕೆಲಸ ಕೈಗೊಂಡರು.
ಬೆಳಿಳಗ್ಗೆ 7ರಿಂದ ಸಂಜೆ 6ರ ತನಕ ಮಳೆ, ಬಿಸಿಲು ಲೆಕ್ಕಿಸದೆ ಶ್ರಮಿಸಿದ ಅವರು ನಡುವೆ ಮಧ್ಯಾಹ್ನದ ಊಟಕ್ಕೆ ಮಾತ್ರ ಬಿಡುವು ಪಡೆದಿದ್ದರು. ಕೆಲವರು ದೂರದಿಂದ ಗಟ್ಟಿ ಮುರಕಲ್ಲುಗಳನ್ನು ಲಾರಿಯಲ್ಲಿ ಸಾಗಿಸಿ ತರುವ ಕೆಲಸ ಮಾಡಿದರೆ ಇನ್ನುಳಿದವರು ಅವುಗಳನ್ನು ಹಾರೆ, ಪಿಕ್ಕಾಸಿ ಬಳಸಿ ಒಡೆದು, ಗುಂಡಿಗಳಿಗೆ ತುಂಬಿ ಗಟ್ಟಿಗೊಳಿಸಿದರು.
ಸಂಘಟನೆಗಳ ಪ್ರದೀಪ ಶೆಟ್ಟಿ, ಉಮೇಶ ಪೂಜಾರಿ, ರಕ್ಷಿತ ಶೆಟ್ಟಿ, ಮಹೇಶ ಪೂಜಾರಿ, ನಾಗರಾಜ, ಜಯಂತ ಪೂಜಾರಿ, ರವೀಂದ್ರ ಪೂಜಾರಿ, ವೆಂಕಟೇಶ ಪೂಜಾರಿ, ಜಯರಾಮ ಪೂಜಾರಿ ಮತ್ತು ರವಿ ಶ್ರಮದಾನದ ಮುಂದಾಳುತ್ವ ವಹಿಸಿದ್ದರು.
2ಕೋಟಿ ರೂ. ಅನುದಾನ
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಈ ರಸ್ತೆಯನ್ನು ಕಾಂಕ್ರೀಟ್ ಮಾರ್ಗವಾಗಿ ಅಭಿವೃದ್ಧಿ ಪಡಿಸಲು ರೂ. 2 ಕೋಟಿ ಮಂಜೂರಾಗಿದೆ. ಮಳೆಗಾಲ ಮುಗಿದ ಬಳಿಕ ರಸ್ತೆ ಕಾಮಗಾರಿ ನಡೆಯಲಿದೆ.