Advertisement

4 ಕುಟುಂಬಗಳಿಗೆ ತಲಾ ಒಂದು ಎಕ್ರೆ ಜಮೀನು: ಶಾಸಕರ ಸೂಚನೆ

01:21 AM Jun 18, 2020 | Sriram |

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಸುಲ್ಕೇರಿಯ ಸರಕಾರಿ ಜಾಗದಲ್ಲಿ ಸುಮಾರು 10 ವರ್ಷಗಳಿಂದ ವಾಸವಾಗಿದ್ದ ನಾಲ್ಕು ಕುಟುಂಬಕ್ಕೆ ತಲಾ ಒಂದು ಎಕ್ರೆ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಹರೀಶ್‌ ಪೂಂಜ ಸೂಚಿಸಿದರು.

Advertisement

ಮಲೆಕುಡಿಯ ನಾಲ್ಕು ಕುಟುಂಬಗಳು ಜೀವನೋಪಾಯಕ್ಕಾಗಿ ಸರಕಾರಿ ಜಾಗದಲ್ಲಿ ಕೃಷಿ ಮಾಡಿತ್ತು. ಆದರೆ ಕಂದಾಯ ಇಲಾಖೆ ಇತ್ತೀಚೆಗೆ ಸ್ವಾಧೀನದಲ್ಲಿದ್ದ ಜಮೀನಿಗೆ ಬೇಲಿ ಹಾಕಿ ಕಂದಾಯ ಇಲಾಖೆ ಎಂಬ ಬೋರ್ಡ್‌ ಹಾಕಿತ್ತು. ಸಂತ್ರಸ್ತರು ಭೂ ರಹಿತರಾಗಿದ್ದು, ಹತ್ತು ವರ್ಷಗಳ ಹಿಂದೆ ಯಾವುದೇ ಪ್ಯಾಕೇಜ್‌ ಪಡೆಯದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಸುಲ್ಕೇರಿಯ ನೆಕ್ಕರೆ ಪಲ್ಕೆಯಲ್ಲಿ ವಾಸವಾಗಿದ್ದರು.

ಸಂತ್ರಸ್ತರು ಮತ್ತು ಮಲೆಕುಡಿಯ ಸಂಘದ ಪದಾಧಿಕಾರಿಗಳು ನ್ಯಾಯ ಒದಗಿಸುವಂತೆ ಹೋರಾಟಕ್ಕೆ ಮುಂದಾ ಗಿದ್ದರು. ಈ ನಡುವೆ ಮಂಗಳವಾರ ಸಂತ್ರಸ್ತರು ಶಾಸಕರನ್ನು ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಭೇಟಿಯಾಗಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಬೇಡಿಕೆಗೆ ಸ್ಪಂದಿಸಿದ ಶಾಸಕರು ತಹಶೀಲ್ದಾರ್‌ ಅವರಲ್ಲಿ ಮಾತನಾಡಿ, ಪ್ರತಿ ಕುಟುಂಬಕ್ಕೆ ತಲಾ ಒಂದು ಎಕ್ರೆ ಜಮೀನು ಒದಗಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ತಹಶೀಲ್ದಾರ್‌ ಅವರು ಕಾನೂನಾತ್ಮಕವಾಗಿ ಜಮೀನು ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಉಜಿರೆ, ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಅಧ್ಯಕ್ಷ ನೋಣಯ್ಯ ಮಚ್ಚಿನ, ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಎಸ್ಟಿ ಮೋರ್ಚಾದ ತಾಲೂಕು ಅಧ್ಯಕ್ಷ ಹರೀಶ್‌ ಎಳನೀರ್‌, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಜಯಾನಂದ ಸವಣಾಲು ಮತ್ತಿತರರು ಉಪಸ್ಥಿತರಿದ್ದರು.

Advertisement

 ಕಂದಾಯ ಇಲಾಖೆಗೆ ಸೂಚನೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದವರಿಗೆ ಪುನರ್ವಸತಿ ಕಲ್ಪಿಸಲು ಸರಕಾರ 190 ಎಕ್ರೆ ಗುರುತಿಸಿದೆ. ಈ ಪೈಕಿ ಸುಲ್ಕೇರಿಯ ನಾಲ್ಕು ಕುಟುಂಬಗಳಿಗೆ ತಲಾ ಒಂದು ಎಕ್ರೆಯಂತೆ ಜಮೀನು ನೀಡಲು ಕಂದಾಯ ಇಲಾಖೆಗೆ ಸೂಚಿಸಿದ್ದೇನೆ.
ಹರೀಶ್‌ ಪೂಂಜ, ಶಾಸಕ

ಸರಕಾರದ ನೀತಿ ಬದಲಾಗಲಿ ರಾಷ್ಟ್ರೀಯ ಉದ್ಯಾನವನ, ಬಫರ್‌ ಝೋನ್‌ಮೊದಲಾದ ಕಾರಣಗಳಿಂದ ಬುಡಕಟ್ಟು ಸಮು ದಾಯಕ್ಕೆ ನೆಲೆ ಇಲ್ಲದಂತಾಗಿದೆ. ಸರಕಾರದ ನೀತಿಗಳು ಬದಲಾಗ ಬೇಕು. ನಮ್ಮ ನೋವಿಗೆ ಶಾಸಕರು ಧ್ವನಿಯಾಗಿದ್ದಾರೆ.
 - ಹರೀಶ್‌ ಎಳನೀರ್‌,
ಪ್ರಧಾನ ಕಾರ್ಯದರ್ಶಿ, ಮಲೆಕುಡಿಯ ಸಂಘ
ತಾಲೂಕು ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next